ಹಾವೇರಿ: ‘ಅಂತರಂಗದಲ್ಲಿ ಪ್ರೀತಿ, ದಯೆ, ವಿಶ್ವಾಸ, ಕೃತಜ್ಞತೆ ಹಾಗೂ ಮಾನವೀಯತೆ ಮೌಲ್ಯಗಳು ಬೆಳೆಯಬೇಕಾದರೆ ಮಹಾತ್ಮರ ಜೀವನ ಚರಿತ್ರೆಯನ್ನು ಅರಿಯಬೇಕು. ಇಂಥ ಚರಿತ್ರೆಗಳು ಬದುಕಿಗೆ ದಾರಿದೀಪವಿದ್ದಂತೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಅಥಣಿ ಮುರುಘೇಂದ್ರ ಶಿವಯೋಗಿ ಅವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನೆ ನೀಡಿದರು.
‘ನಾವೆಲ್ಲರೂ ಇಂದು ಒತ್ತಡದ ಬದುಕಿನಲ್ಲಿ ಜೀವಿಸುತ್ತಿದ್ದೇವೆ. ನೆಮ್ಮದಿಯ ಬದುಕಿಗಾಗಿ ಪರಿತಪಿಸುತ್ತಿದ್ದೇವೆ. ಸಂತ ಮಹಾತ್ಮರ ಜೀವನ, ತಪಸ್ಸು, ವಿನಯ, ಕಲ್ಯಾಣ ಗುಣಗಳು ತ್ರಿವೇಣಿ ಸಂಗಮಗಳಿದ್ದಂತೆ. ಇಂಥ ಮಹಾತ್ಮರ ಜೀವನ ಚರಿತ್ರೆಯ ಅವಲೋಕನ, ಕತ್ತಲು ಕವಿದ ನಮ್ಮ ಬದುಕಿಗೆ ಬೆಳಕಿದ್ದಂತೆ’ ಎಂದರು.
ಹೊಳಲು ಮಲ್ಲಿಕಾರ್ಜುನಸ್ವಾಮಿ ಮಠದ ಚನ್ನಬಸವದೇವರು ಮಾತನಾಡಿ, ‘ಅಥಣಿ ಶಿವಯೋಗಿಯವರು, ನಾಡಿನ ಮಹಾನ್ ಮಹಾತ್ಮರು. ಅವರ ಜೀವನ ಪಥ ಎಂದರೆ ಅದು ಆಧ್ಯಾತ್ಮ, ಯೋಗ, ಧ್ಯಾನ ಹಾಗೂ ದಿವ್ಯತೆ–ಭವ್ಯತೆಯನ್ನು ಒಳಗೊಂಡಿದೆ. ಬಸವ ತತ್ವವನ್ನು ಬೋಧಿಸದೇ ಬದುಕಿನಲ್ಲಿ ಅನುಷ್ಠಾನ ಮಾಡಿದ ದಿವ್ಯಜ್ಯೋತಿಯಾಗಿದ್ದಾರೆ’ ಎಂದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಭಾರತ ಅಧ್ಯಾತ್ಮದ ನೆಲೆವೀಡು. ಇಲ್ಲಿನ ಪ್ರತಿಯೊಂದು ಆಚರಣೆಗೆ ವೈಜ್ಞಾನಿಕ ಹಿನ್ನಲೆ ಇದೆ. ಈ ಮಾಸದಲ್ಲಿ ಇಳೆ, ಗಾಳಿ, ಮಳೆ, ನದಿ, ಪರ್ವತಗಳು ಕಂಗೊಳಿಸುತ್ತಿರುತ್ತವೆ. ಸೃಷ್ಠಿಯು ಸಮೃದ್ಧವಾಗಿರುತ್ತದೆ. ಅದೇ ರೀತಿ ಮಾನವನ ಬದುಕಿನಲ್ಲಿ ತಾಮಸ ಗುಣಗಳು ಹೋಗಿ ಆಧ್ಯಾತ್ಮಿಕ ಸಂಪತ್ತು ಬರಲಿ ಎಂಬ ಭಾವನೆಯಿಂದ ಶ್ರಾವಣ ಮಾಸವನ್ನು ಆಚರಿಸುತ್ತಾರೆ’ ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಮೆಡ್ಲೇರಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಂ. ಹಾಲಯ್ಯನವರಮಠ, ಬಿ. ಬಸವರಾಜ, ವೀರಣ್ಣ ಅಂಗಡಿ, ಶಿವಣ್ಣ ಶಿರೂರ, ಜೆ.ಬಿ. ಸಾವಿರಮಠ, ಮಹಾಂತೇಶ ಮಳಿಮಠ, ರಾಚಪ್ಪ ಮಾಗನೂರ, ಚಂಪಾ ಹುಣಸಿಕಟ್ಟಿ, ಚನ್ನಪ್ಪ ಹಳಕೊಪ್ಪ, ಎಸ್.ಎಸ್.ಮಠಪತಿ, ಎಸ್.ವಿ. ಹಿರೇಮಠ ಹಾಗೂ ರವಿ ಸಿ.ವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.