ADVERTISEMENT

ಮಳೆ ಬಂದರೆ ಸೋರುವ ಸರ್ಕಾರಿ ಶಾಲೆ

75 ವರ್ಷದ ಹಳೇ ಕೊಠಡಿಯಲ್ಲಿ ಮಕ್ಕಳ ಕಲಿಕೆ

ಸಂತೋಷ ಜಿಗಳಿಕೊಪ್ಪ
Published 19 ಜೂನ್ 2025, 7:16 IST
Last Updated 19 ಜೂನ್ 2025, 7:16 IST
ಹಾವೇರಿ ತಾಲ್ಲೂಕಿನ ಬುಜ್ರುಕ್ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನೀರು ಸೋರುವ ಜಾಗದಲ್ಲಿ ಬಕೆಟ್‌ ಇರಿಸಿ ಪಾಠ ಕೇಳುತ್ತಿರುವ ಮಕ್ಕಳು
ಹಾವೇರಿ ತಾಲ್ಲೂಕಿನ ಬುಜ್ರುಕ್ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನೀರು ಸೋರುವ ಜಾಗದಲ್ಲಿ ಬಕೆಟ್‌ ಇರಿಸಿ ಪಾಠ ಕೇಳುತ್ತಿರುವ ಮಕ್ಕಳು   

ಹಾವೇರಿ: ತಾಲ್ಲೂಕಿನ ಬುಜ್ರುಕ್ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆ ಬಂದರೆ ಸೋರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವ ಭಯದಲ್ಲಿ ದಿನದೂಡುತ್ತಿದ್ದಾರೆ. ಗ್ರಾಮದಲ್ಲಿ ರೈತರು ಹಾಗೂ ಬಡವರು ಹೆಚ್ಚಿದ್ದು, ಅವರೆಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ.

ಜಿಲ್ಲಾ ಕೇಂದ್ರ ಹಾವೇರಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಈ ಶಾಲೆ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. 1950–51ನೇ ಸಾಲಿನಲ್ಲಿ ಮಣ್ಣು ಹಾಗೂ ಕಲ್ಲಿನಿಂದ ಎರಡು ಕೊಠಡಿಯ ಶಾಲೆ ನಿರ್ಮಿಸಲಾಗಿದೆ. ಚಾವಣಿಯಲ್ಲಿ ಮಂಗಳೂರು ಹಂಚುಗಳನ್ನು ಹಾಕಲಾಗಿದೆ. ಶಾಲೆ ನಿರ್ಮಾಣವಾಗಿ 75 ವರ್ಷವಾದರೂ ಅದೇ ಹಳೆಯ ಕಟ್ಟಡದಲ್ಲಿಯೇ ಮಕ್ಕಳು ಪಾಠ ಆಲಿಸುತ್ತಾರೆ. ಕನಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಸುಮಾರು 500 ಜನಸಂಖ್ಯೆಯಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 24 ಮಕ್ಕಳಿದ್ದಾರೆ.   

ಜಿಲ್ಲೆಯಲ್ಲಿ ಮಳೆಗಾಲ ಚುರುಕಾಗಿದ್ದು, ಬಿಡುವು ನೀಡುತ್ತಲೇ ಮಳೆ ಜೋರಾಗಿ ಸುರಿಯುತ್ತಿದೆ. ಬುಜ್ರುಕ್ ಕೋಡಿಹಳ್ಳಿ ಶಾಲೆಯ ಕೊಠಡಿಗಳು ಹಳೆಯದ್ದಾಗಿದ್ದರಿಂದ, ಅಲ್ಲಲ್ಲಿ ಸೋರುತ್ತಿವೆ. ನೀರು ಸೋರುವ ಜಾಗದಲ್ಲಿ ಬಕೆಟ್‌ಗಳನ್ನು ಇರಿಸಿ ಶಿಕ್ಷಕರು ಪಾಠ ಮಾಡುತ್ತಾರೆ. ಕೆಲ ನಿಮಿಷಗಳಲ್ಲಿ ಬಕೆಟ್ ತುಂಬುತ್ತಿದ್ದು, ವಿದ್ಯಾರ್ಥಿಗಳೇ ನೀರನ್ನು ಹೊರಗೆ ಚೆಲ್ಲಿ ಪುನಃ ಅದೇ ಜಾಗದಲ್ಲಿ ಬಕೆಟ್ ಇಡುತ್ತಾರೆ. ಮಳೆಗಾಲದಲ್ಲಿ  ಇದು ನಿತ್ಯದ ಕಾಯಕ

ADVERTISEMENT

‘ಶಿಥಿಲಾವಸ್ಥೆಗೆ ತಲುಪಿರುವ ನಮ್ಮೂರು ಶಾಲೆಯ ಕಟ್ಟಡದಲ್ಲೇ ವಿದ್ಯಾರ್ಥಿಗಳು ಪಾಠ ಆಲಿಸುತ್ತಾರೆ. ಪ್ರತಿ ವರ್ಷವೂ ಚಾವಣಿ ಹಾಳಾಗುತ್ತಿದ್ದು, ಶಿಕ್ಷಕರ ಜೊತೆ ಸೇರಿ ಹಂಚು, ಕಟ್ಟಿಗೆ ಮಾತ್ರ ಬದಲಾಯಿಸುತ್ತೇವೆ.  ಆದರೆ, ಮಂಗಗಳು ಹಾಗೂ ಇತರೆ ಕಾರಣದಿಂದ ಹಂಚುಗಳು ಪದೇ ಪದೆ ಒಡೆಯುತ್ತವೆ’ ಎಂದು ಗ್ರಾಮಸ್ಥರು ತಿಳಿಸಿದರು.

ನಮ್ಮಂಥ ಬಡವರಿಗೆ ಸರ್ಕಾರಿ ಶಾಲೆಯೇ ಆಸರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಲು ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಮೂಲ ಸೌಕರ್ಯ ಕಲ್ಪಿಸಬೇಕು
–ಬುಜ್ರುಕ್ ಕೋಡಿಹಳ್ಳಿ ಗ್ರಾಮಸ್ಥರು

ಹಾವು–ಚೇಳಿನ ಹಾವಳಿ

ಶಾಲೆಯ ಸುತ್ತಮುತ್ತ ಜಮೀನು ಹಾಗೂ ದೇವಸ್ಥಾನದ ಜಾಗವಿದೆ. ಕೆಲವು ಬಾರಿ ಶಾಲೆ ಕೊಠಡಿಯೊಳಗೆ ಹಾವು–ಚೇಳುಗಳು ಬರುತ್ತಿವೆ. ಇದು ಸಹ ಮಕ್ಕಳು–ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಶಾಲೆ ಆವರಣದಲ್ಲಿ ನೀರು ನಿಂತುಕೊಂಡು ಕೆರೆಯಂತಾಗಿದೆ. ಶಾಲೆ ಕೊಠಡಿಯ ಹಿಂಭಾಗದ ಕಾಂಪೌಂಡ್‌ ಬಿದ್ದು ಹಲವು ವರ್ಷವಾಗಿದ್ದು ಇದುವರೆಗೂ ಮರು ನಿರ್ಮಾಣವಾಗಿಲ್ಲ. ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಪೌಂಡ್‌ ನಿರ್ಮಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯವರನ್ನು ಒತ್ತಾಯಿಸಿದರೂ ಸ್ಪಂದನೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.