ADVERTISEMENT

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ತಂದೆ ಸಾವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 2:44 IST
Last Updated 14 ಡಿಸೆಂಬರ್ 2025, 2:44 IST
   

ಪ್ರಜಾವಾಣಿ ವಾರ್ತೆ

ಹಾವೇರಿ: ಜಿಲ್ಲೆಯ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಹನುಮಂತಪ್ಪ ಜಿ. (64) ಎಂಬುವವರು ಮೃತಪಟ್ಟಿದ್ದಾರೆ. ಅವರ ಮಗ ಮೋಹನ್ ಅವರಿಗೂ ಗಾಯಗಳಾಗಿವೆ.

ಶುಕ್ರವಾರ (ಡಿ. 12) ಸಂಜೆ ನಡೆದಿರುವ ಅಪಘಾತ ಸಂಬಂಧ ಲಾರಿ ಚಾಲಕನ ವಿರುದ್ಧ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ದಾವಣಗೇರಿ ತಾಲ್ಲೂಕಿನ ಅರಸಾಪುರದ ಮೋಹನ್ ಅವರು ತಮ್ಮ ಆಲ್ಟೊ ಕಾರಿನಲ್ಲಿ ತಂದೆಯೊಂದಿಗೆ ಪ್ರಯಾಣಿಸುತ್ತಿದ್ದರು. ಹಾವೇರಿ ಕಡೆಯಿಂದ ರಾಣೆಬೆನ್ನೂರಿನತ್ತ ಹೋಗುವ ಹೆದ್ದಾರಿಯಲ್ಲಿ ರಾಜಸ್ಥಾನಿ ಢಾಬಾ ಬಳಿ ಓವರ್‌ಟೆಕ್ ಮಾಡಲು ಹೋಗಿ, ನಿಂತಿದ್ದ ಲಾರಿಗೆ ಕಾರು ಗುದ್ದಿಸಿದ ಪರಿಣಾಮ ಹನುಮಂತಪ್ಪ ತೀವ್ರ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದ, ಅಲ್ಲಿಂದ ಹುಬ್ಬಳ್ಳಿ ಕೆಎಂ–ಸಿಆರ್‌ಐ (ಕಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಯಾವುದೇ ಮುನ್ಸೂಚನೆ ನೀಡದೇ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿದ್ದ ಚಾಲಕ ಉತ್ತರ ಪ್ರದೇಶದ ದೀಪಕ್‌ ಹಾಗೂ ಕಾರು ಚಾಲಕ ಮೋಹನ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.