ADVERTISEMENT

ಸದ್ಯದಲ್ಲೇ ಸ್ಪೇನ್‌ ಸೇರಲಿದೆ ಹಾವೇರಿ ಮಗು!

ದತ್ತು ಪಡೆಯಲು ಮುಂದಾದ ಸ್ಪೇನ್ ದಂಪತಿ * ಅನಾಥವಾಗಿ ಸಿಕ್ಕಿದ್ದ ಕೂಸಿಗೆ ಆರೈಕೆ

ಮಂಜುನಾಥ ರಾಠೋಡ
Published 29 ಅಕ್ಟೋಬರ್ 2019, 11:12 IST
Last Updated 29 ಅಕ್ಟೋಬರ್ 2019, 11:12 IST
ದತ್ತು ಸ್ವೀಕಾರ ಕೇಂದ್ರದಲ್ಲಿರುವ ಮಮತೆ ತೊಟ್ಟಿಲು
ದತ್ತು ಸ್ವೀಕಾರ ಕೇಂದ್ರದಲ್ಲಿರುವ ಮಮತೆ ತೊಟ್ಟಿಲು   

ಹಾವೇರಿ: ನಗರದ ‘ಸ್ಪಂದನಾ ದತ್ತು ಸ್ವೀಕಾರ ಕೇಂದ್ರ’ದಲ್ಲಿರುವ ಮೂರು ವರ್ಷದ ಹೆಣ್ಣು ಮಗು ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಕಾರಾ) ಮೂಲಕ ಸ್ಪೇನ್‌ ದಂಪತಿಯ ಮಡಿಲು ಸೇರಲಿದೆ.

ಮೂರು ವರ್ಷಗಳ ಹಿಂದೆ ‍ಪೊದೆಯೊಂದರಲ್ಲಿ ಅನಾಥವಾಗಿ ಸಿಕ್ಕಿದ್ದ ನವಜಾತ ಶಿಶುವನ್ನು ಜಿಲ್ಲಾ ದತ್ತು ಕೇಂದ್ರದಲ್ಲಿ ಪೋಷಣೆ ಮಾಡಲಾಗುತ್ತಿದೆ. ಆ ಮಗುವನ್ನು ದತ್ತು ಪಡೆಯಲು ಸ್ಪೇನ್ ದಂಪತಿ ಮುಂದೆ ಬಂದಿದ್ದು, ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಹಿಂದೆ ಇಲ್ಲಿನ ಮಗುವನ್ನು ದುಬೈ ದಂಪತಿ ದತ್ತು ಪಡೆದಿದ್ದರು.

ವಿವಾಹಕ್ಕೆ ಮುನ್ನವೇ ಮಗು ಹುಟ್ಟಿತೆಂದು ಸಮಾಜಕ್ಕೆ ಅಂಜಿಯೋ, ಹೆಣ್ಣು ಶಿಶುವೆಂಬ ಕಾರಣಕ್ಕೋ... ಮಗುವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತಹ ಕೂಸುಗಳನ್ನು ದತ್ತು ಸ್ವೀಕಾರ ಕೇಂದ್ರದಲ್ಲಿ ಅರೈಕೆ ಮಾಡಲಾಗುತ್ತಿದೆ.

ADVERTISEMENT

‘2009ರಿಂದ 2019ರವರೆಗೆ ನಮ್ಮ ಕೇಂದ್ರದಲ್ಲಿ 72 ಮಕ್ಕಳಿಗೆ ಆರೈಕೆ ಮಾಡಲಾಗಿದೆ. ಆ ಪೈಕಿ 21 ಮಕ್ಕಳನ್ನು ದತ್ತು ನೀಡಲಾಗಿದ್ದರೆ, ಇನ್ನುಳಿದ ಮಕ್ಕಳು ಬಾಲಮಂದಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಪೋಷಕರನ್ನು ಹುಡುಕಿ ಮಕ್ಕಳನ್ನು ಹಸ್ತಾಂತರ ಮಾಡಲಾಗಿದೆ’ಎಂದು ಮಕ್ಕಳ ರಕ್ಷಣಾ ಕೇಂದ್ರದ ವಿನಯ್ ಗುಡಗೂರ ತಿಳಿಸಿದರು

ಆನ್‌ಲೈನ್‌ ಪ್ರಕ್ರಿಯೆ: ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ ಏಜೆನ್ಸಿಗಳು ಅಥವಾ ‘ಕಾರಾ’ದಿಂದ ಮಾನ್ಯತೆ ಹೊಂದಿದ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ದತ್ತು ಸ್ವೀಕರಿಸುವವರ/ದಂಪತಿಯ ವೈದ್ಯಕೀಯ ಅರ್ಹತಾ ದೃಢೀಕರಣ, ಉದ್ಯೋಗ, ಆದಾಯ ದೃಢೀಕರಣ, ವಿವಾಹವಾಗಿರುವುದಕ್ಕೆ ಪುರಾವೆ, ಆಸ್ತಿ ವಿವರ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮಗುವನ್ನು ದತ್ತು ನೀಡಲಾಗುತ್ತದೆ.

‘ಎಷ್ಟೋ ದಂಪತಿ ಮಕ್ಕಳಿಲ್ಲವೆಂದು ಕೊರಗುತ್ತಾರೆ. ಆದರೆ, ಕೆಲವರು ಶಿಶುಗಳನ್ನು ತೊಟ್ಟಿಯಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಶಿಶುಗಳನ್ನು ಸಂತಾನ ಇಲ್ಲದವರಿಗೆ ಕೊಡುವ ಪ್ರಕ್ರಿಯೆ ತುಂಬ ದಿನಗಳಿಂದ ನಡೆಯುತ್ತಿದೆ. ಮಗು ಬೇಕೆಂದು ಅರ್ಜಿ ಸಲ್ಲಿಸುವ ದಂಪತಿಯ ಮನೆ ವಿಳಾಸ ಹಾಗೂ ದಾಖಲೆ ಪಡೆದು, ಶಿಶು ಕೊಟ್ಟು ಕಳುಹಿಸುತ್ತಿದ್ದೇವೆ' ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.

‘12 ವರ್ಷದ ಒಳಗಿನ ಮಕ್ಕಳನ್ನು ಪೋಷಕರು ತ್ಯಜಿಸಿ ಬಂದಾಗ, ಅಂಥವರಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆ ನೀಡಬೇಕು ಎನ್ನುವ ಕಾನೂನಿದೆ. ಐಪಿಸಿಯ 317ನೇ ಕಲಂ ಇದನ್ನು ಸ್ಪಷ್ಟವಾಗಿ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸದಿದ್ದರೂ, ನ್ಯಾಯಾಲಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿರುವ ನಿದರ್ಶನಗಳಿವೆ. ಕಾನೂನು ಇಷ್ಟು ಕಠಿಣವಾಗಿದ್ದರೂ, ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಮಮತೆ ತೊಟ್ಟಿಲಲ್ಲಿ ಕೂಸಿಲ್ಲ
‘ಮಕ್ಕಳನ್ನು ಕಸದ ತೊಟ್ಟಿಗೆ ಎಸೆಯುವುದನ್ನು ತಡೆಯುವುದಕ್ಕಾಗಿ, ದತ್ತು ಸ್ವೀಕಾರ ಕೇಂದ್ರದಲ್ಲಿ ಮಮತೆಯ ತೊಟ್ಟಿಲನ್ನು ಆರಂಭಿಸಲಾಗಿದೆ. ತಂದೆ–ತಾಯಿಗೆ ಬೇಡವಾದ ಮಕ್ಕಳನ್ನು ಈ ತೊಟ್ಟಿಲಿನಲ್ಲಿ ಹಾಕಬಹುದಾಗಿದೆ. ಆದರೆ, ಈವರೆಗೆ ಯಾರೂ ಮಗುವನ್ನು ತೊಟ್ಟಿಲಿನಲ್ಲಿ ಹಾಕಿಲ್ಲ’ ಎಂದು ವಿನಯ್ ಗುಡಗೂರು ಹೇಳಿದರು.

ಸಹಾಯವಾಣಿಗೆ ಸಂಪರ್ಕಿಸಿ
‘ಅನಾಥವಾಗಿ ಸಿಕ್ಕ ಕೂಸುಗಳನ್ನು ಯಾರೂ ಸಾಕುವಂತಿಲ್ಲ. ಮಕ್ಕಳು ಪತ್ತೆಯಾದರೆ 1098 ಸಹಾಯವಾಣಿ ಸಿಬ್ಬಂದಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು’ ಎನ್ನುತ್ತಾರೆದತ್ತು ಸ್ವೀಕಾರ ಕೇಂದ್ರದ ಎಂ.ಎನ್‌.ಹೊನಕೇರಿ

*
ಹಿಂದೆ ಬಾಲನ್ಯಾಯ ಮಂಡಳಿ ಸಮಿತಿಯಿಂದ ಮಕ್ಕಳನ್ನು ದತ್ತು ನೀಡಲಾಗುತ್ತಿತ್ತು. ಆದರೆ, ಈಗ ಎಲ್ಲವೂ ಆನ್‌ಲೈನ್‌ನಲ್ಲಿಯೇ ನಡೆಯುತ್ತಿದೆ.
-ಮಲ್ಲಿಕಾರ್ಜುನ ಮಠದ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.