
ಹಾವೇರಿ: ‘ಕಷ್ಟವೆಂದು ಹೇಳಿಕೊಂಡು ನಮ್ಮ ಬಳಿ ಬರುವವರಿಗೆ ಸಹಾಯ ಮಾಡಿದರೆ, ಅದು ದೇವರ ಸೇವೆಯಾಗುತ್ತದೆ. ಪರಿಶುದ್ಧವಾದ ಭಕ್ತಿ ಹಾಗೂ ಸೇವೆಯಿಂದ ದೇವರನ್ನು ಆರಾಧಿಸಿದರೆ, ದೇವರು ಒಲಿಯುತ್ತಾನೆ’ ಎಂದು ಹೂವಿನಹಡಗಲಿಯ ಕೆಜಿಪಿಎಲ್‌ಎಫ್ ಅಧ್ಯಕ್ಷ ಪಾಸ್ಟರ್ ಪ್ರಕಾಶ ನಾಯ್ಕ ಹೇಳಿದರು.
ನಗರದ ಕಾಗಿನೆಲೆ ರಸ್ತೆಯಲ್ಲಿರುವ ಬೇತೇಲ್ ಚರ್ಚ್‌ನಲ್ಲಿ ‘ಹಾವೇರಿ ಜಿಲ್ಲಾ ಸಭಾ ಪಾಲಕರ (ಪಾಸ್ಟರ್ಸ್) ಸಮಿತಿ’ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಪಾಸ್ಟರ್ಸ್ ಕುಟುಂಬದವರ ಕ್ರಿಸ್‌ಮಸ್ ಸಂಭ್ರಮಾಚರಣೆ– 2025’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯೇಸುವಿನ ಮುಂದೆ ಪರಿಶುದ್ಧವಾಗಿ ನಡೆದುಕೊಳ್ಳಬೇಕು. ಹೊರಗಡೆ ಇನ್ನೊಬ್ಬರ ಜೊತೆ ಚೆನ್ನಾಗಿ ಮಾತನಾಡುತ್ತೇವೆ. ಆದರೆ, ಮನಸ್ಸಿನಲ್ಲಿಯೇ ಅವರಿಗೆ ಬೈಯುತ್ತೇವೆ, ಶಪಿಸುತ್ತೇವೆ. ಈ ರೀತಿ ಮತ್ತೊಬ್ಬರನ್ನು ದ್ವೇಷಿಸಬಾರದು. ಎಲ್ಲರಲ್ಲೂ ದೇವರನ್ನು ಕಾಣಬೇಕು. ಮತ್ತೊಬ್ಬರಿಗೆ ಒಳ್ಳೆಯದು ಮಾಡಬೇಕೆಂದು ನಮ್ಮ ಮನೋಭಾವ ಬದಲಾದರೆ, ದೇವರು ನಮ್ಮನ್ನು ಕಾಪಾಡುತ್ತಾನೆ’ ಎಂದು ಹೇಳಿದರು.
‘ನಮ್ಮೆಲ್ಲರ ಜೀವನದಲ್ಲಿ ದೇವರು ಇದ್ದಾರೆ. ಪಾಸ್ಟರ್‌ಗಳ ರೂಪದಲ್ಲಿ ಭಕ್ತರನ್ನು ಮುಟ್ಟುತ್ತಿದ್ದಾರೆ. ಪಾಸ್ಟರ್ ಬಾರದಿದ್ದರೆ, ನಮಗೆ ದೇವರ ರೂಪ ತಿಳಿಯುತ್ತಿರಲಿಲ್ಲ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ‘ನಮ್ಮ ಸಂವಿಧಾನ, ಸರ್ವರನ್ನೂ ಸಮಾನವಾಗಿ ಕಾಣುತ್ತದೆ. ಯಾವುದೇ ಜಾತಿ, ಮತವೆಂಬ ಬೇಧ– ಭಾವ ಮಾಡಿಲ್ಲ. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದರು.
ಜಿಲ್ಲೆಯ ವಿವಿಧ ಭಾಗದ 50ಕ್ಕೂ ಹೆಚ್ಚು ಪಾಸ್ಟರ್‌ಗಳು ಹಾಗೂ ಅವರ ಕುಟುಂಬಸ್ಥರು, ಸಮಿತಿ ಅಧ್ಯಕ್ಷ ಕಿರಣ ನಾಯ್ಕ, ಉಪಾಧ್ಯಕ್ಷ ವಾಸುದೇವ, ಕಾರ್ಯದರ್ಶಿ ರಮೇಶ ಜೆ., ಖಜಾಂಚಿ ಶಂಕರ್, ಸದಸ್ಯರಾದ ರಾಜು, ಪ‍್ರಕಾಶ, ರಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.