ADVERTISEMENT

ಹಾವೇರಿಯ ನದಿ ನೀರಲಗಿ | ಮೂಲ ಸೌಕರ್ಯ ವಂಚಿತ ಗಡಿಗ್ರಾಮ; ಪರಿಶಿಷ್ಟರ ಪಡಿಪಾಟಲು

ಮನೆಗೆ ನುಗ್ಗುವ ಕೊಳಚೆ ನೀರು, ಕೆಸರಿನ ರಸ್ತೆಯಲ್ಲೇ ಜೀವನ

ಸಂತೋಷ ಜಿಗಳಿಕೊಪ್ಪ
Published 10 ಸೆಪ್ಟೆಂಬರ್ 2025, 2:55 IST
Last Updated 10 ಸೆಪ್ಟೆಂಬರ್ 2025, 2:55 IST
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ನದಿ ನೀರಲಗಿ ಗ್ರಾಮದ ಪರಿಶಿಷ್ಟ ಸಮುದಾಯದವರು ವಾಸವಿರುವ ಪ್ರದೇಶದಲ್ಲಿ ರಸ್ತೆಗಳು ಕೆಸರುಮಯವಾಗಿರುವುದು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ನದಿ ನೀರಲಗಿ ಗ್ರಾಮದ ಪರಿಶಿಷ್ಟ ಸಮುದಾಯದವರು ವಾಸವಿರುವ ಪ್ರದೇಶದಲ್ಲಿ ರಸ್ತೆಗಳು ಕೆಸರುಮಯವಾಗಿರುವುದು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ   

ಹಾವೇರಿ: ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿರುವ ಗಟಾರಗಳು. ಕಿತ್ತುಹೋದ ರಸ್ತೆಗಳಲ್ಲಿ ಹೆಚ್ಚಾದ ಗುಂಡಿಗಳು. ಮಳೆ ಬಂದರೆ ಮನೆಗೆ ನುಗ್ಗುವ ಕೊಳಚೆ ನೀರು. ಕೆಸರಿನ ರಸ್ತೆಯಲ್ಲೇ ಜೀವನ ನಡೆಸುತ್ತಿರುವ ಗ್ರಾಮಸ್ಥರು. ಕನಿಷ್ಠ ಸೌಲಭ್ಯವಿಲ್ಲದೇ ಪರಿಶಿಷ್ಟ ಸಮುದಾಯದವರು ನಿತ್ಯ ಅನುಭವಿಸುವ ಯಾತನೆ ಇದು...

ಜಿಲ್ಲೆಯ ಸವಣೂರು ತಾಲ್ಲೂಕಿನ ಗಡಿ ಗ್ರಾಮವಾದ ನದಿ ನೀರಲಗಿಯ ನೈಜ ಸ್ಥಿತಿಯಿದು. ಹಿರೇಮುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನದಿನೀರಲಗಿ, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ಪರಿಶಿಷ್ಟ ಸಮುದಾಯದವರಂತೂ ನಿತ್ಯವೂ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಪರಿಶಿಷ್ಟರ ಅಭಿವೃದ್ಧಿಗಾಗಿ ಸರ್ಕಾರಗಳು ಸಾಕಷ್ಟು ಯೋಜನೆ ಜಾರಿಗೆ ತಂದಿವೆ. ಆದರೆ, ಇಲ್ಲಿಯ ಜನರು ಯೋಜನೆಗಳಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಸುಸಜ್ಜಿತ ರಸ್ತೆ, ಶುದ್ಧ ನೀರು, ಗಲೀಜು ಮುಕ್ತ ಗಟಾರಕ್ಕಾಗಿ ಹಂಬಲಿಸುತ್ತಿರುವ ಪರಿಶಿಷ್ಟರ ಕೂಗಿಗೆ ಅಧಿಕಾರಿಗಳಾಗಲಿ ಹಾಗೂ ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ.

ADVERTISEMENT

ಪರಿಶಿಷ್ಟ ಸಮುದಾಯದ ಕೆಲ ವಿದ್ಯಾವಂತರು, ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರಿಂದ ಮನವಿ ಪತ್ರ ಪಡೆಯುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಭರವಸೆ ನೀಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ. 

ನದಿ ನೀರಲಗಿ ಗ್ರಾಮಕ್ಕೆ ಕಾಲಿಟ್ಟರೆ ಗುಂಡಿ ಬಿದ್ದು ಹದಗೆಟ್ಟ ರಸ್ತೆಗಳು ಕಣ್ಣಿಗೆ ರಾಚುತ್ತವೆ. ಗಟಾರನಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳು ಹೆಚ್ಚಿರುವುದು ಕಾಣಿಸುತ್ತದೆ. ಗ್ರಾಮದೊಳಗೆ ಓಡಾಡಿದರೆ, ಸ್ವಚ್ಛತೆ ಕೊರತೆ ಕಂಡುಬರುತ್ತದೆ. ಹೀಗಾಗಿ, ಜನರು ನಾನಾ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

‘ಗ್ರಾಮದ ಬಹುತೇಕ ಗಟಾರುಗಳಲ್ಲಿ ಕೊಳಚೆ ನೀರು ನಿಂತು, ದುರ್ವಾಸನೆ ಬರುತ್ತಿದೆ. ಪಂಚಾಯಿತಿಯವರು ಸ್ಥಳಕ್ಕೆ ಬಂದು ಸ್ವಚ್ಛತೆ ಮಾಡಿಲ್ಲ. ಗಟಾರಿಗೆ ಹೊಂದಿಕೊಂಡಿರುವ ಮನೆಯವರು ಮೂಗು ಮುಚ್ಚಿಕೊಂಡು ಜೀವನ ನಡೆಸಬೇಕಾದ ಸ್ಥಿತಿಯಿದೆ. ವೃದ್ಧರು ಹಾಗೂ ಮಕ್ಕಳು, ನಾನಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಸಂಪೂರ್ಣ ಹಾಳಾಗಿವೆ. ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಬಸ್‌ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ವಿದ್ಯಾಭ್ಯಾಸ ಮಾಡುವ ಮಕ್ಕಳಂತೂ ಕಿ.ಮೀ.ಗಟ್ಟಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿಯಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ಐವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಹೆಚ್ಚಿನ ಸದಸ್ಯರಿದ್ದರೂ ಗ್ರಾಮದ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗಿಲ್ಲ’ ಎಂದರು. 

ಪರಿಶಿಷ್ಟರ ಜೀವನ ಶೋಚನೀಯ: ವರದಾ ನದಿಯ ದಡದಲ್ಲಿರುವ ಕಾರಣಕ್ಕೆ ಈ ಗ್ರಾಮಕ್ಕೆ ನದಿ ನೀರಲಗಿ ಎಂಬ ಹೆಸರು ಬಂದಿದೆ. ಸುಮಾರು ವರ್ಷಗಳ ಹಿಂದೆಯೇ ನದಿ ದಡದಲ್ಲಿರುವ ಗ್ರಾಮ ಜಲಾವೃತಗೊಂಡಿತ್ತು. ಜನರು ದಿಕ್ಕಾಪಾಲಾಗಿದ್ದರು. ನಿರಾಶ್ರಿತರಿಗೆ ನದಿ ಸಮೀಪದ ಜಾಗದಲ್ಲಿ ಮನೆಗಳನ್ನು ಮಂಜೂರು ಮಾಡಿತ್ತು. ಈ ಗ್ರಾಮವೇ ಈಗ ಹೊಸ ನದಿ ನೀರಲಗಿ ಆಗಿದೆ.

ಗ್ರಾಮಕ್ಕೆ ಹೊಂದಿಕೊಂಡಿರುವ ವರದಾ ನದಿಗೆ ಹೋಗುವ ರಸ್ತೆ ಪಕ್ಕದ ಜಾಗದಲ್ಲಿ ವಾಲ್ಮೀಕಿ ಸಮುದಾಯದವರು ಸೇರಿದಂತೆ ಎಸ್‌.ಸಿ., ಎಸ್‌.ಟಿ. ಜನರು ಹೆಚ್ಚಾಗಿ ವಾಸವಿದ್ದಾರೆ.  ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಣ್ಣ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಯಾವುದೇ ಸರ್ಕಾರ ಬಂದರೂ ಈ ಜನರಿಗೆ ಮೂಲ ಸೌಕರ್ಯ ಸಿಗುತ್ತಿಲ್ಲ. ಇವರ ಜೀವನ ಅತ್ಯಂತ ಶೋಚನೀಯವಾಗಿದೆ. 

‘ಗ್ರಾಮದ ಕೊಳಚೆ ನೀರು, ನಮ್ಮ ಪ್ರದೇಶಕ್ಕೆ ನುಗ್ಗುತ್ತದೆ. ಮಳೆ ಹೆಚ್ಚಾದರೆ, ಮನೆಯೊಳಗೆ ನೀರು ಬರುತ್ತದೆ. ಮನೆ ಎದುರಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕೆಸರು ಹೆಚ್ಚಾಗಿದೆ. ಮಕ್ಕಳು ಹಾಗೂ ವೃದ್ಧರು, ಓಡಾಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ. ಪ್ರತಿ ಮನೆಯಲ್ಲೂ ಕಾಯಿಲೆ ಬೀಳುವವರ ಸಂಖ್ಯೆ ಹೆಚ್ಚುತ್ತಿದೆ. ಮಳೆಗಾಲದಲ್ಲಂತೂ ಗ್ರಾಮದ ಸ್ಥಿತಿ ತೀರಾ ಹದಗೆಡುತ್ತದೆ’ ಎಂದು ಗ್ರಾಮಸ್ಥ ಮಂಜುನಾಥ ಹೊಸಮನಿ ಅಳಲು ತೋಡಿಕೊಂಡರು.

ಬಡವರು, ರೈತರಿರುವ ಗ್ರಾಮ ನಿರ್ಲಕ್ಷ್ಯ: ಸವಣೂರು ತಾಲ್ಲೂಕಿನ ಗಡಿ ಗ್ರಾಮವಾದ ನದಿ ನೀರಲಗಿ,  ಹಾವೇರಿ ತಾಲ್ಲೂಕಿನ ಗ್ರಾಮಗಳಿಗೆ ಹೊಂದಿಕೊಂಡಿದೆ. ಬಡವರು ಹಾಗೂ ರೈತರು ವಾಸವಿರುವ ನದಿ ನೀರಲಗಿ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಜನಪ್ರತಿನಿಧಿಗಳು ಸಹ ಚುನಾವಣೆ ಸಮಯದಲ್ಲಿ ಮಾತ್ರ ಗ್ರಾಮಕ್ಕೆ ಬಂದು ಹೋಗುತ್ತಿದ್ದಾರೆ. ‘ನದಿ ನೀರಲಗಿ ಗ್ರಾಮವನ್ನು ಮಾದರಿ ಗ್ರಾಮ ಮಾಡುತ್ತೇವೆ’ ಎಂದು ಭರವಸೆ ನೀಡುದ್ದಾರೆ. ಚುನಾವಣೆ ಮುಗಿದ ಮೇಲೆ, ಗ್ರಾಮದತ್ತ ಮುಖ ಹಾಕುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ನದಿ ನೀರಲಗಿ ಗ್ರಾಮದ ಪರಿಶಿಷ್ಟ ಸಮುದಾಯದವರ ಮನೆಗಳ ಎದುರಿನ ರಸ್ತೆಗಳ ದುಸ್ಥಿತಿ –

ನಾವೂ ಮನುಷ್ಯರು. ಕಾಡು ಪ್ರಾಣಿಗಳಲ್ಲ. ಗಡಿ ಗ್ರಾಮದ ಬಡವರೆಂದು ನಿರ್ಲಕ್ಷಿಸಬೇಡಿ. ಊರಿಗೆ ಬಂದು ವಾಸ್ತವ ನೋಡಿ. ಸ್ವಚ್ಛ ಪರಿಸರದಲ್ಲಿ ಬದುಕುವ ಹಕ್ಕು ನೀಡಿ
ಸುರೇಶ ಬೆಂಡಿಕಾಯಿ ಗ್ರಾಮಸ್ಥ

‘ಐವರು ಸದಸ್ಯರಿದ್ದರೂ ಶುದ್ಧ ನೀರಿಲ್ಲ’

ಹಿರೇಮುಗದೂರು ಗ್ರಾಮ ಪಂಚಾಯಿತಿಗೆ ಐವರು ಸದಸ್ಯರನ್ನು ಚುನಾಯಿಸಿ ಕಳುಹಿಸಿರುವ ನದಿ ನೀರಲಗಿ ಗ್ರಾಮದಲ್ಲಿ ಇದುವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿಲ್ಲ. ಸದ್ಯ ಪಂಚಾಯಿತಿಯವರು ನೀಡುವ ನೀರನ್ನೇ ಜನರು ಕುಡಿಯುತ್ತಿದ್ದಾರೆ. ಇದರಿಂದಾಗಿ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ‘ಮಕ್ಕಳು ವೃದ್ಧರು ಹಾಗೂ ಯುವಜನತೆ ಸಹ ಅಶುದ್ಧ ನೀರಿನಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯರು ಶುದ್ಧ ನೀರು ಕುಡಿಯುವಂತೆ ಹೇಳುತ್ತಿದ್ದಾರೆ. ಗ್ರಾಮದಲ್ಲಿ ಘಟಕವಿಲ್ಲ. ದೂರದ ಊರುಗಳಿಗೆ ಹೋಗಿ ನೀರು ತರುತ್ತಿದ್ದೇವೆ. ನಮ್ಮ ಗ್ರಾಮದಲ್ಲಿಯೇ ಘಟಕ ಸ್ಥಾಪಿಸುವಂತೆ ಮನವಿ ಕೊಟ್ಟು ಸಾಕಾಗಿದೆ. ಘಟಕ ಮಾತ್ರ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.