ADVERTISEMENT

ಪಿಯು ಪರೀಕ್ಷೆ 28ರಿಂದ: ಕೇಂದ್ರಗಳಲ್ಲಿ ಸಿದ್ಧತೆ

14,264 ವಿದ್ಯಾರ್ಥಿಗಳ ನೋಂದಣಿ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:16 IST
Last Updated 22 ಫೆಬ್ರುವರಿ 2026, 1:16 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ’ಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿದರು
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ’ಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿದರು   

ಹಾವೇರಿ: ‘ರಾಜ್ಯದಾದ್ಯಂತ ಫೆ. 28ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಹಾವೇರಿ ಜಿಲ್ಲೆಯಲ್ಲೂ 25 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಈ ಪರೀಕ್ಷೆಯ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ಪರೀಕ್ಷೆ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ’ಯಲ್ಲಿ ಮಾತನಾಡಿದ ಅವರು, ‘ಎಲ್ಲರೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದರು.

‘ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕೇಂದ್ರಗಳ ಸುತ್ತ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಬೇಕು. ಪರೀಕ್ಷಾ ಕೇಂದ್ರದ ಹೊರ ವಲಯ ಹಾಗೂ ಕೊಠಡಿಯ ಒಳಗೆ ಪರೀಕ್ಷೆ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸರು ಬಂದೋಬಸ್ತ್ ವಹಿಸಿಕೊಳ್ಳಬೇಕು. ಆರೋಗ್ಯ ಶುಶ್ರೂಷಕಿಯರನ್ನು ನಿಯೋಜನೆ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಸಿ.ಸಿ.ಟಿ.ವಿ ಕ್ಯಾಮೆರಾ ಕಡ್ಡಾಯ: ‘ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಎದುರು ಪ್ರಶ್ನೆಪತ್ರಿಕೆ ಬಂಡಲ್ ತೆರೆಯಬೇಕು. ಉತ್ತರ ಪತ್ರಿಕೆ ಬಂಡಲ್‌ಗಳನ್ನು ತೆರೆಯುವಾಗ ಹಾಗೂ ಜೋಡಿಸುವಾಗಲೂ ಕ್ಯಾಮೆರಾ ಇರಬೇಕು. ಪರೀಕ್ಷೆ ಮುಗಿದಿ ನಂತರ, ಪೊಲೀಸರ ಬಂದೋಬಸ್ತ್‌ನಲ್ಲಿ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಪ್ರಶ್ನೆಪತ್ರಿಕೆ ಬಂಡಲ್ ತೆಗೆದುಕೊಂಡು ಹೋಗಲು ಪ್ರತಿ ತಾಲ್ಲೂಕಿಗೆ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ಸದಸ್ಯ ಸಮಿತಿ ರಚಿಸಲಾಗಿದೆ. ವಾಹನಕ್ಕೆ ಜಿ.ಪಿ.ಎಸ್. ಉಪಕರಣ ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಬ್ಲೂಟೂತ್, ಪೇಜರ್, ವೈರ್‌ಲೆಸ್ ಸೆಟ್ ಹಾಗೂ ರಿಸ್ಟ್ ವಾಚ್‌ಗಳನ್ನು ನಿಷೇಧಿಸಿದೆ’ ಎಂದರು.

‘ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡುವಾಗ, ವಿಜ್ಞಾನ ಉಪನ್ಯಾಸಕರನ್ನು ಕಲಾ-–ವಾಣಿಜ್ಯ ವಿಷಯಗಳಿಗೆ ಹಾಗೂ ಕಲಾ - ವಾಣಿಜ್ಯ ವಿಭಾಗದ ಉಪನ್ಯಾಸಕರನ್ನು ವಿಜ್ಞಾನ ವಿಷಯದ ಪರೀಕ್ಷೆಗೆ ನಿಯೋಜಿಸಬೇಕು. ಗ್ರಾಮೀಣ ಪ್ರದೇಶದಿಂದ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ, ವಿಶೇಷ ಸಾರಿಗೆ ಸೌಲಭ್ಯ ಒದಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ ಶಾಸ್ತ್ರಿ ಮಾತನಾಡಿ, ‘ಜಿಲ್ಲೆಯಲ್ಲಿ 13,077 ಹೊಸ, 856 ಪುನರಾವರ್ತಿತ, 327 ಖಾಸಗಿ ಹಾಗೂ ಫಲಿತಾಂಶ ಸುಧಾರಣೆ ಬಯಸಿ ನಾಲ್ವರು ಸೇರಿ 14,264 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್., ಜಿ.ಪಂ. ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಶೆ, ತಹಶೀಲ್ದಾರ್ ಶರಣಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ಪಾಟೀಲ, ಎಂ.ಬಿ. ಅಂಬಿಗೇರ, ಶ್ರೀಧರ, ಶ್ಯಾಮಸುಂದರ ಅಡಿಗ, ಆರ್.ವಿ. ಚಿನ್ನಿಕಟ್ಟಿ ಇದ್ದರು.


ಜಿಲ್ಲೆಯಲ್ಲಿರುವ ಪರೀಕ್ಷಾ ಕೇಂದ್ರಗಳು

ಬ್ಯಾಡಗಿಯ ಎಸ್.ಜೆ.ಜೆ.ಎಂ. ಸರ್ಕಾರಿ ಕಾಲೇಜ್ ಪೇಸ್ ಕಾಲೇಜ್ ಶಿಡೇನೂರ ಬಿ.ಆರ್.ಅಂಬೇಡ್ಕರ್ ಕಾಲೇಜ್ ಹಾನಗಲ್‌ ಸ್ವತಂತ್ರ ಪ.ಪೂ.ಕಾಲೇಜ್ ಕುಮಾರೇಶ್ವರ ಕಾಲೇಜ್ ನ್ಯೂ ಸಂಯುಕ್ತ ಕಾಲೇಜ್ ಅಕ್ಕಿಆಲೂರಿನ ಎನ್.ಡಿ. ಕಾಲೇಜ್ ಹಾವೇರಿಯ ಜಿ.ಎಚ್. ಕಾಲೇಜ್ ಎಸ್.ಜೆ.ಎಂ. ಕಾಲೇಜ್ ಸರ್ಕಾರಿ ಪ.ಪೂ.ಕಾಲೇಜ್ ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜ್ ಹಿರೇಕೆರೂರಿನ ಕೆ.ಎಚ್. ಕಾಲೇಜ್ ಸಂಗಮೇಶ್ವರ ಕಾಲೇಜ್ ಹಂಸಬಾವಿಯ ಎಂ.ಎ.ಎಸ್.ಸಿ ಕಾಲೇಜ್ ರಾಣೆಬೆನ್ನೂರಿನ ಹೊಸಮನಿ ಸಿದ್ದಪ್ಪ ಕಾಲೇಜ್ ಆರ್.ಆರ್. ಕಾಲೇಜ್ ಸರ್ಕಾರಿ ಕಾಲೇಜ್ ದೇವಿಕಾ ಕಾಲೇಜ್ ರೋಟರಿ ಕಾಲೇಜ್ ಬಿ.ಎ.ಜೆ.ಎಸ್.ಎಸ್ ಇಂಡಿ ಮಹಿಳಾ ಕಾಲೇಜ್ ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರಿನ ಬಿ.ಟಿ.ಪಾಟೀಲ ಕಾಲೇಜ್ ಸವಣೂರಿನ ಮಜೀದ್ ಸರ್ಕಾರಿ ಕಾಲೇಜ್ ಶಿಗ್ಗಾವಿಯ ಎಸ್.ಬಿ.ಬಿ.ಎಂ.ಡಿ. ಕಾಲೇಜ ಹಾಗೂ ಜೆ.ಎಂ.ಜೆ. ಕಾಲೇಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.