ADVERTISEMENT

ಹಾವೇರಿ: ಏಲಕ್ಕಿ ಕಂಪಿನ ನಾಡಿಗೆ ರಜತ ಸಂಭ್ರಮ

‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಹಾವೇರಿ ಜಿಲ್ಲೆ: 1997ರಲ್ಲಿ ಹೊಸ ಜಿಲ್ಲೆಯಾಗಿ ಉದಯ

ಸಿದ್ದು ಆರ್.ಜಿ.ಹಳ್ಳಿ
Published 4 ಆಗಸ್ಟ್ 2022, 19:30 IST
Last Updated 4 ಆಗಸ್ಟ್ 2022, 19:30 IST
ಹಾವೇರಿ ಜಿಲ್ಲೆಯ ನಕ್ಷೆ
ಹಾವೇರಿ ಜಿಲ್ಲೆಯ ನಕ್ಷೆ   

ಹಾವೇರಿ: ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎಂದೇ ಜನಜನಿತವಾದ ಹಾವೇರಿ ಜಿಲ್ಲೆ ಉದಯವಾಗಿ 25ನೇ ವಸಂತಕ್ಕೆ ಕಾಲಿಟ್ಟಿದೆ. ಈ ‘ಏಲಕ್ಕಿ ಕಂಪಿನ ನಾಡು’ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆಯೂ ಹೌದು.

ಹಾವೇರಿ ಜಿಲ್ಲೆಯು ಗದಗ ಜಿಲ್ಲೆಯನ್ನು ಒಳಗೊಂಡಂತೆ ಮೊದಲು ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ಜನರ ಬಹುದಿನಗಳ ಹೋರಾಟದ ನಂತರಧಾರವಾಡ ಜಿಲ್ಲೆಯಿಂದ ವಿಭಜಿಸಲ್ಪಟ್ಟ ಹಾವೇರಿ ಜಿಲ್ಲೆ 1997ರ ಆಗಸ್ಟ್‌ 24ರಂದುಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು.

ಹಾವೇರಿ ಜಿಲ್ಲೆಯಲ್ಲಿ ಎಂಟು ತಾಲ್ಲೂಕುಗಳು, 224 ಗ್ರಾಮ ಪಂಚಾಯಿತಿಗಳು, 19 ಹೋಬಳಿಗಳು ಹಾಗೂ 703 ಗ್ರಾಮಗಳಿವೆ. 2 ನಗರಸಭೆ, 5 ಪುರಸಭೆ, 3 ಪಟ್ಟಣ ಪಂಚಾಯಿತಿಗಳಿವೆ. ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಜನಸಂಖ್ಯೆಯಿದೆ. ತುಂಗಭದ್ರಾ, ವರದಾ, ಕುಮಧ್ವತಿ ಮತ್ತು ಧರ್ಮಾ ನದಿಗಳು ಜನರ ಜೀವನಾಡಿಗಳಾಗಿದ್ದು, ಕೃಷಿ ಪ್ರಧಾನ ಜಿಲ್ಲೆಯಾಗಿದೆ.

ADVERTISEMENT

ಸಂತ–ಶರಣರ ನಾಡು:

ಈ ನೆಲಕ್ಕೊಂದು ಇತಿಹಾಸ ಪರಂಪರೆಯಿದೆ. ಕುಲದ ಮೂಲವೇನು ಬಲ್ಲಿನೇರಯ್ಯ? ಎಂದು ಕೇಳಿದ ಕನಕದಾಸರು, ಜೀವನದ ತತ್ವ ಮೂಲಗಳ ಹಾಡಿದ ಸಂತ ಶಿಶುನಾಳ ಶರೀಫರು, ಜನಸಮುದಾಯದ ವಿವೇಕ ತಿದ್ದಿದ ಸರ್ವಜ್ಞ, ನಿಜಶರಣ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ ಈ ನೆಲದ ದಾರ್ಶನಿಕರು.

ದೇಶಕ್ಕಾಗಿ ಜೀವ ಬಲಿದಾನ ಮಾಡಿದ ಮೈಲಾರ ಮಹಾದೇವಪ್ಪ, ತಿರಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಅವರ ತ್ಯಾಗ, ಹೋರಾಟಗಳು ಸ್ಮರಣೀಯವಾಗಿವೆ. ಹೊಸಮನಿ ಸಿದ್ದಪ್ಪ, ಪಾಟೀಲ ಪುಟ್ಟಪ್ಪ, ಹಳ್ಳಿಕೇರಿ ಗುದ್ಲೆಪ್ಪ, ಕೆ.ಎಫ್‌.ಪಾಟೀಲ ಮುಂತಾದವರುಕರ್ನಾಟಕದ ಏಕೀಕರಣ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಸಾಹಿತ್ಯ ಚರಿತ್ರೆಯ ದೀಪಗಳು:

ಕಾದಂಬರಿ ಪಿತಾಮಹ ಗಳಗನಾಥ, ಶಾಂತಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ, ಕವಿ ಸು.ರಂ.ಯಕ್ಕುಂಡಿ,ಆಧುನಿಕ ವಚನಕಾರ ಮಹಾದೇವ ಬಣಕಾರ, ಸಾಹಿತಿ ಚಂದ್ರಶೇಖರ ಪಾಟೀಲ ಮುಂತಾದವರು ಕನ್ನಡ ಸಾಹಿತ್ಯ ಚರಿತ್ರೆಯ ದೀಪ ಹಚ್ಚಿಟ್ಟ ಮಹನೀಯರು ಎನಿಸಿದ್ದಾರೆ.

ಜಿಲ್ಲೆಯ ಹೆಮ್ಮೆ:

ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ, ಶಿಲ್ಪಕ್ರಾಂತಿಯ ಮೂಲಕ ದೇಸಿ ಸಂಸ್ಕೃತಿ ಎತ್ತಿ ಹಿಡಿದ ರಾಕ್‌ ಗಾರ್ಡನ್‌, ಕೃಷಿ ಮತ್ತು ಮನರಂಜನೆಯ ಸಮ್ಮಿಲನವಾದ ಅಗಡಿ ತೋಟ, ಬಾಡಾದ ಕನಕ ಅರಮನೆ, ಕಾಗಿನೆಲೆಯ ಕನಕ ಪರಿಸರಸ್ನೇಹಿ ಉದ್ಯಾನ ಮುಂತಾದ ಸ್ಥಳಗಳು ಜಿಲ್ಲೆಗೆ ಖ್ಯಾತಿ ತಂದುಕೊಟ್ಟಿವೆ.

ವಿಶ್ವಪ್ರಸಿದ್ಧ ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆ, ರಾಣೆಬೆನ್ನೂರಿನ ಹತ್ತಿ ಮಾರುಕಟ್ಟೆ, ಹಾವೇರಿಯ ಯಾಲಕ್ಕಿ ಹಾರ, ಸವಣೂರಿನ ವೀಳ್ಯದ ಎಲೆ, ಬಂಕಾಪುರದ ಖಿಲಾರಿ ತಳಿ ಮುಂತಾದವು ಜಿಲ್ಲೆಗೆ ಗರಿ ಮೂಡಿಸಿವೆ.

‘ಮರಿ ಕಲ್ಯಾಣ’ವೆಂಬ ಖ್ಯಾತಿ

ಜಗದ ಕಣ್ಣು ತೆರೆಯಿಸಿದ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ, ವಿದುಷಿ ಗಂಗೂಬಾಯಿ ಹಾನಗಲ್ಲ ಮುಂತಾದವರು ಹಾವೇರಿ ಭೂಮಿಯನ್ನು ಗಾನ ಭೂಮಿಯನ್ನಾಗಿಸಿದರು. ಹಾನಗಲ್ಲಿನ ಕುಮಾರಸ್ವಾಮಿ, ಹುಕ್ಕೇರಿಮಠದ ಶಿವಬಸವ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರು ತ್ರಿವಿಧ ದಾಸೋಹ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಹುಕ್ಕೇರಿಮಠ, ಹೊಸಮಠ, ಸಿಂದಗಿಮಠ ಸೇರಿದಂತೆ 63 ಮಠಗಳಿಗೆ ನೆಲೆಯಾಗಿರುವ ಹಾವೇರಿ ಜಿಲ್ಲೆ ‘ಮರಿ ಕಲ್ಯಾಣ’ವೆಂದೇ ಪ್ರಖ್ಯಾತಿ ಪಡೆದಿದೆ.

***

ಹಾವೇರಿ ಸ್ವತಂತ್ರ ಜಿಲ್ಲೆಯಾದ ನಂತರ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇತರರಿಗೆ ತೋರಿಸಲು ಅನುಕೂಲವಾಗಿದೆ. ಜಾನಪದ ವಿವಿ ನಮ್ಮ ಹೆಮ್ಮೆ
– ಸತೀಶ ಕುಲಕರ್ಣಿ, ಸಾಹಿತಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.