ADVERTISEMENT

ಬ್ಯಾಡಗಿ ಬಾಲಕಿ ಮೃತಪಟ್ಟ ಪ್ರಕರಣ: ಶವ ಪರೀಕ್ಷೆ ಮುಗಿಸಿ, ₹ 5 ಲಕ್ಷಕ್ಕೆ ಬೇಡಿಕೆ

ಸಂತೋಷ ಜಿಗಳಿಕೊಪ್ಪ
Published 10 ಜುಲೈ 2025, 3:10 IST
Last Updated 10 ಜುಲೈ 2025, 3:10 IST
ಗುರುರಾಜ ಬಿರಾದಾರ
ಗುರುರಾಜ ಬಿರಾದಾರ   

ಹಾವೇರಿ: ‘ಇಲ್ಲಿಯ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರು ಎನ್ನಲಾದ ಬಾಲಕಿ ವಂದನಾ ತುಪ್ಪದ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಗುರುರಾಜ ಬಿರಾದಾರ, ಪರೀಕ್ಷೆ ಮುಗಿಸಿದ್ದ ಎರಡೇ ದಿನಕ್ಕೆ ಆಸ್ಪತ್ರೆಯವರ ಬಳಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು’ ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಚಿರಾಯು ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ನೀಡಿದ್ದ ದೂರಿನಡಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಡಿವೈಎಸ್ಪಿ ಮಧುಸೂದನ್ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡ, ₹3 ಲಕ್ಷ ಲಂಚದ ಸಮೇತ ವೈದ್ಯ ಗುರುರಾಜ ಹಾಗೂ ಮಧ್ಯವರ್ತಿ ಇಜಾರಿ ಲಕಮಾಪುರದ ನಿವಾಸಿ ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ ಅವರನ್ನು ಬಂಧಿಸಿತ್ತು. ಇದೀಗ, ನ್ಯಾಯಾಲಯದಿಂದ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

‘ಆಸ್ಪತ್ರೆ ಪರವಾಗಿ ಮರಣೋತ್ತರ ಪರೀಕ್ಷೆ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದಡಿ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆಗಿದ್ದ ಡಾ. ಗುರುರಾಜ ಬಿರಾದಾರ ಹಾಗೂ ಚನ್ನಬಸಯ್ಯ ಕುಲಕರ್ಣಿ ಅವರನ್ನು ಜೂನ್ 27ರಂದು ಬಂಧಿಸಲಾಗಿತ್ತು. ಕೆಲ ದಿನ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರಿಗೂ ಇತ್ತೀಚೆಗೆ ಜಾಮೀನು ಮಂಜೂರಾಗಿದೆ. ದೂರುದಾರ ಹಾಗೂ ಸಾಕ್ಷಿದಾರರ ಮೇಲೆ ಪ್ರಭಾವ ಬೀರದಂತೆ ನ್ಯಾಯಾಲಯ ಷರತ್ತು ವಿಧಿಸಿದೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಬಾಲಕಿ ವಂದನಾ ಅವರ ಕೈ ಮೇಲೆ ಗುಳ್ಳೆಗಳಾಗಿದ್ದವು. ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದ ಚಿರಾಯು ಆಸ್ಪತ್ರೆಯವರು, ದಾಖಲಾತಿ ಮಾಡಿಕೊಂಡಿದ್ದರು. ಇಂಜೆಕ್ಷನ್ ಸಮೇತ ಸಲಾಯಿನ್ ಹಚ್ಚಿದ್ದರು. ಇದಾದ ನಂತರ, ವಂದನಾ ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ಕಳೆದುಕೊಂಡಿದ್ದರು. ಗಾಬರಿಗೊಂಡ ಪೋಷಕರು, ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಬಾಲಕಿ ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಹೇಳಿದ್ದರು. ಬಳಿಕವೇ ಪೋಷಕರು ಹಾವೇರಿ ಶಹರ ಠಾಣೆಗೆ ದೂರು ನೀಡಿದ್ದರು. ಯುಡಿಆರ್ (ಅಸಹಜ ಸಾವು) ಸಹ ದಾಖಲಾಗಿದೆ.’

‘ವೈದ್ಯ ಗುರುರಾಜ ಅವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿ ವಂದನಾ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅದಾದ ಎರಡು ದಿನಗಳ ನಂತರ ಚಿರಾಯು ಆಸ್ಪತ್ರೆಯವರನ್ನು ಭೇಟಿ ಮಾಡಿದ್ದರು. ‘ನಾನೇ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದೇನೆ. ನಿಮ್ಮ ಆಸ್ಪತ್ರೆ ಪರವಾಗಿ ಅಭಿಪ್ರಾಯದ ವರದಿ ಬರೆಯುತ್ತೇನೆ. ಇದಕ್ಕಾಗಿ ₹ 5 ಲಕ್ಷ ನೀಡಿ’ ಎಂದು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಆದರೆ, ಆಸ್ಪತ್ರೆಯವರು ಅದಕ್ಕೆ ಒಪ್ಪಿರಲಿಲ್ಲ. ವೈದ್ಯ ಅಲ್ಲಿಂದ ವಾಪಸ್ಸಾಗಿದ್ದರು. ಈ ಭೇಟಿ ಬಗ್ಗೆಯೂ ಪುರಾವೆಗಳನ್ನು ಸಂಗ್ರಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಕೆಲದಿನಗಳ ನಂತರ ವೈದ್ಯ ಗುರುರಾಜ, ಮಧ್ಯವರ್ತಿ ಚನ್ನಬಸಯ್ಯ ಮೂಲಕ ಆಸ್ಪತ್ರೆಯವರನ್ನು ಸಂಪರ್ಕಿಸಿ ಪುನಃ ₹ 5 ಲಕ್ಷ ಕೇಳಿದ್ದರು. ಅವಾಗಲೇ ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ಅವರು ದೂರು ನೀಡಿದ್ದರು. ಹಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ವೈದ್ಯ ಹಾಗೂ ಮಧ್ಯವರ್ತಿಗಳು ಸಿಕ್ಕಿಬಿದ್ದರು. ನಂತರ, ಅವರ ಮನೆಗಳಲ್ಲಿಯೂ ಶೋಧ ನಡೆಸಿ ಹಲವು ಪುರಾವೆಗಳನ್ನು ಸಂಗ್ರಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. 

ಚನ್ನಬಸಯ್ಯ ಕುಲಕರ್ಣಿ
ಮರಣೋತ್ತರ ಪರೀಕ್ಷೆ ವರದಿ ತಿರುಚಲು ಲಂಚ ಪಡೆಯುತ್ತಿದ್ದ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆರೋಪಿಗಳು ಬೇರೆ ಯಾರಿಗಾದರೂ ಹಣ ಕೇಳಿದ್ದರೆ ದೂರು ನೀಡಬಹುದು
ಮಧುಸೂದನ್ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ
‘ಪೋಷಕರಿಗೂ ಹಣದ ಆಮಿಷ; ಆರೋಪ’
ಬಾಲಕಿ ವಂದನಾ ಅವರ ಪೋಷಕರನ್ನು ಸಂಪರ್ಕಿಸಿದ್ದ ಕೆಲವರು ಅವರಿಗೂ ಹಣದ ಆಮಿಷವೊಡ್ಡಿದ್ದರೆಂಬ ಆರೋಪವಿದೆ. ಆದರೆ ಪೋಷಕರು ಹಣ ಪಡೆಯಲು ನಿರಾಕರಿಸಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ‘ಆಸ್ಪತ್ರೆ ವಿರುದ್ಧ ನೀಡಿರುವ ದೂರು ಹಿಂಪಡೆಯಲು ಕೆಲವರು ಒತ್ತಡ ಹಾಕುತ್ತಿದ್ದಾರೆ. ನಾವು ಅದಕ್ಕೆ ಒಪ್ಪುವುದಿಲ್ಲ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಪೋಷಕರ ಸಂಬಂಧಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.