
ಹಾವೇರಿ: ಜಾತ್ರಾ ಮಹೋತ್ಸವದ ಅಂಗವಾಗಿ ಹುಕ್ಕೇರಿಮಠದ ಸಭಾಭವನದಲ್ಲಿ ಹಮ್ಮಿಕೊಂಡಿರುವ ‘ಫಲ–ಪುಷ್ಪ ಪ್ರದರ್ಶನ’ದಲ್ಲಿ ಮೊದಲ ದಿನವೇ ‘ಹಸಿರು ಲೋಕ’ ಸೃಷ್ಟಿಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಡಿ. 27 ಹಾಗೂ ಡಿ. 28ರಂದು ಆಯೋಜಿಸಿರುವ ಎರಡು ದಿನಗಳ ಪ್ರದರ್ಶನಕ್ಕೆ ಶನಿವಾರ ಭೇಟಿ ನೀಡಿದ ಭಕ್ತರು, ಹೂವು ಹಾಗೂ ಹಣ್ಣಿನ ತರಹೇವಾರಿ ತಳಿಗಳ ಬಗ್ಗೆ ತಿಳಿದುಕೊಂಡರು.
‘ಸುವರ್ಣ ಮಹೋತ್ಸವ ಸಂಭ್ರಮ 2025’ ಎಂಬ ಹೂವಿನ ವೃತ್ತಾಕಾರದ ಫಲಕವನ್ನು ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದು, ಇದರೊಂದಿಗೆ ಜನರು ಫೋಟೊ ಕ್ಲಿಕ್ಕಿಸಿಕೊಂಡರು. ದೊಡ್ಡ ಗಾತ್ರದ ನಂದಿಯನ್ನು ಹೂವಿನಿಂದ ಸಿದ್ಧಪಡಿಸಲಾಗಿದ್ದು, ನೋಡುಗರ ಗಮನ ಸೆಳೆಯಿತು. ವಿಶ್ವಗುರು ಬಸವಣ್ಣ, ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್, ಸಾಲು ಮರದ ತಿಮ್ಮಕ್ಕ ಅವರ ಪುತ್ಥಳಿಗಳು ಹೂವಿನ ಕಂಗೊಳಿಸುತ್ತಿವೆ. ಜಿಲ್ಲೆಯ ಇತಿಹಾಸ ಸಾರುವ ಕನಕದಾಸರು ಸೇರಿ ಹಲವು ಮಹಾನ್ ವ್ಯಕ್ತಿಗಳ ಫೋಟೊಗಳು ಪ್ರದರ್ಶನದಲ್ಲಿವೆ.
ಗಾಂಧೀಜಿಯವರ ಮೂರು ಕೋತಿಗಳ (ಕಿವಿ, ಮೂಗು, ಕಣ್ಣು ಮುಚ್ಚಿರುವ ಸ್ಥಿತಿ) ಜೊತೆ ನಾಲ್ಕನೇ ಮೊಬೈಲ್ ಕೋತಿಯೂ ಸೇರ್ಪಡೆಯಾಗಿದೆ. ಜೊತೆಗೆ, ಮೆಣಸಿನಕಾಯಿಯಿಂದ ಮಾಡಿದ ಗರುಡವೂ ವಿಶೇಷವಾಗಿ ಕಾಣಿಸುತ್ತಿದೆ. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಭಾವಚಿತ್ರವೂ ಪ್ರದರ್ಶನದಲ್ಲಿದೆ. ಜಿಲ್ಲೆಯ ರೈತರೇ ಬೆಳೆದಿರುವ ತರಕಾರಿ, ಹಣ್ಣು, ತರಹೇವಾರಿ ಹೂವುಗಳು, ರೇಷ್ಮೆ ಕೃಷಿ ಸೇರಿದಂತೆ ಎಲ್ಲ ಮಾದರಿಗಳು ಪ್ರದರ್ಶನದಲ್ಲಿವೆ. ಭಾನುವಾರವೂ (ಡಿ. 28) ಪ್ರದರ್ಶನ ಇರಲಿದ್ದು, ಬೆಳಿಗ್ಗೆಯಿಂದ ರಾತ್ರಿಯವರೆಗೂ ವೀಕ್ಷಣೆಗೆ ಅವಕಾಶವಿದೆ.
‘ಗುರು ಶಿಷ್ಯರ ಸಂಗಮ’ ಹೆಸರಿನಲ್ಲಿ ಶಿವಬಸವ ಶಿವಯೋಗಿಯವರು ಹಾಗೂ ಶಿವಲಿಂಗ ಶಿವಯೋಗಿಗಳ ಜೊತೆಯಲ್ಲಿ ಸದಾಶಿವ ಸ್ವಾಮೀಜಿಯವರ ಪ್ರತಿಕೃತಿಗಳನ್ನು ಪ್ರದರ್ಶನದಲ್ಲಿ ಹೂವಿನಿಂದ ಅಲಂಕರಿಸಲಾಗಿದೆ. ಗ್ರಾಮೀಣ ಭಾಗದ ಚಕ್ಕಡಿ, ಕೃಷಿ ಸಾಮಗ್ರಿ, ತರಕಾರಿಗಳ ರಂಗೋಲಿಗಳು ಗಮನಸೆಳೆಯುತ್ತಿವೆ.
ಪ್ರದರ್ಶನ ವೀಕ್ಷಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಹೂವು–ಹಣ್ಣು–ತರಕಾರಿಗಳನ್ನು ಬಳಸಿಕೊಂಡು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅತ್ಯದ್ಭುತವಾಗಿ ಪ್ರದರ್ಶನ ಏರ್ಪಡಿಸಿದ್ದಾರೆ. ಇದೊಂದು ದಾಖಲೆಯ ಪ್ರದರ್ಶನ. ಜನರು ಪ್ರದರ್ಶನಕ್ಕೆ ಬಂದು ಹೂವು–ಹಣ್ಣಿನ ಲೋಕವನ್ನು ಕಣ್ತುಂಬಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.