ADVERTISEMENT

ಹಾವೇರಿ: ಬಯಲಾಟ ಅಕಾಡೆಮಿ ಅಧ್ಯಕ್ಷ ‘ಸೊಲಬಕ್ಕನವರ’

ಜಿಲ್ಲೆಯ ಕಲಾವಿದರ ಬಳಗಕ್ಕೆ ಹರ್ಷ; ವಿದೇಶಗಳಿಗೂ ಕಲಾ ಸೇವೆ ಹಂಚಿದ ಕೀರ್ತಿ

ಎಂ.ವಿ.ಗಡಾದ
Published 17 ಅಕ್ಟೋಬರ್ 2019, 19:45 IST
Last Updated 17 ಅಕ್ಟೋಬರ್ 2019, 19:45 IST
ಗೊಡಗೋಡಿ ಉತ್ಸವ ರಾಕ್‌ ಗಾರ್ಡನ್
ಗೊಡಗೋಡಿ ಉತ್ಸವ ರಾಕ್‌ ಗಾರ್ಡನ್   

ಶಿಗ್ಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುತಾಲ್ಲೂಕಿನ ಹುಲಸೋಗಿ ಗ್ರಾಮದ ತಿಪ್ಪಣ್ಣ ಬಸವಣ್ಣೆಪ್ಪ ಸೊಲಬಕ್ಕನವರ ಅವರನ್ನು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಈ ಭಾಗದ ಜನರಲ್ಲಿ ಹಾಗೂ ಇಡೀ ಕಲಾವಿದರ ಬಳಗಕ್ಕೆ ಹರ್ಷ ತಂದಿದೆ.

‌ಬಸವಣ್ಣೆಪ್ಪ ಹಾಗು ಬಸವಣ್ಣೆವ್ವ ದಂಪತಿಯ ಮಗನಾಗಿ 1947ರಲ್ಲಿ ಜನಿಸಿದಸೊಲಬಕ್ಕನವರ, ಹುಲಸೋಗಿ, ಹಿರೇಬೆಂಡಿಗೇರಿ ಹಾಗೂ ಶಿಗ್ಗಾವಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಾರೆ. ನಂತರ ಧಾರವಾಡದ ಡಿ.ವಿ.ಹಾಲಭಾವಿ ಶಾಲೆಯಲ್ಲಿ ಕಲಾ ಶಿಕ್ಷಣ, ದಾವಣಗೆರೆ ಡಿಪ್ಲೊಮಾ ಕಲಾ ಪದವಿ, ಮುಂಬೈ ಜೆಜೆ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ಶಿಕ್ಷಣ ಪಡೆಯುತ್ತಾರೆ. ಮೂರು ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

1972 ರಿಂದ 1990ರವರೆಗೆ ದಾವಣಗೆರೆಯ ಕಲಾ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1985ರಲ್ಲಿ ವಿಶ್ವಶಾಂತಿ ಕುರಿತು ಇವರು ರೂಪಿಸಿದ ತೈಲವರ್ಣ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಜಾಗತಿಕ ಮೆಚ್ಚಿಗೆಯೂ ಸಿಗುತ್ತದೆ.

ADVERTISEMENT

ನಂತರ ಗೊಡಗೋಡಿ ಉತ್ಸವ ರಾಕ್ ಗಾರ್ಡನ ನಿರ್ಮಿಸುವ ಮೂಲಕ, ಶಿಲ್ಪಕಲೆಗಳ ಹಾಗೂ ಕಲಾವಿದರ ಚಿತ್ರಣಗಳನ್ನು ಉದ್ಯಾನದಲ್ಲಿ ಅರಳಿಸುತ್ತಾರೆ. ಗ್ರಾಮೀಣ ಸೊಗಡನ್ನ ಬಿಂಬಿಸಿರುವ ಈ ರಾಕ್ ಗಾರ್ಡನ್, ಅಮೆರಿಕಾ, ಲಂಡನ್, ನೇಪಾಳ ಸೇರಿದಂತೆ ದೇಶ–ವಿದೇಶಗಳ ಎಂಟು ವಿಶ್ವದಾಖಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ.

ಸೊಲಬಕ್ಕನವರ ಅವರು ‘ಶಿಲ್ಪಕಲಾ ಕುಟೀರ್’ ಸಂಸ್ಥೆ ಮುಖಾಂತರ 25 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳನ್ನು ರೂಪುಗೊಳಿಸಿದ್ದಾರೆ. ಅಲ್ಲದದೇ 3 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಬೇರೆ ಬೇರೆ ಮಾಧ್ಯಮಗಳ ಮೂಲಕ ತರಬೇತಿ ನೀಡುತ್ತಿದ್ದಾರೆ.

‘ಇವರ ಸಾಧನೆಗೆ 2001ರಲ್ಲಿ ಜಾನಪದ, ಜ್ಞಾನ-ವಿಜ್ಞಾನ ಪ್ರಶಸ್ತಿ, 2002ರಲ್ಲಿ ಸಂಘಟನಾ ಪ್ರಶಸ್ತಿ, 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018ರಲ್ಲಿ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರಿಂದ ನಮ್ಮ ಕ್ಷೇತ್ರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಕಾರಣವಾಗಿದೆ’ ಎಂದು ಇಲ್ಲಿನ ಕಲಾವಿದರು ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಕಲಾವಿದರ ಏಳಿಗೆಗೆ ಶ್ರಮಿಸುವೆ
‘ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಜ್ಞಾನ ನೀಡುವ ಬದಲು, ಭವಿಷ್ಯದ ಬದುಕು ರೂಪಿಸುವ ಪ್ರಾಯೋಗಿಕ ಶಿಕ್ಷಣ ನೀಡಬೇಕಿದೆ. ಶಿಲ್ಪಕಲೆ, ನಾಟಕ, ಸಂಗೀತ, ಸಾಹಿತ್ಯ... ಇವು ಬದುಕು ರೂಪಿಸುವ ಶಿಕ್ಷಣದ ಪಟ್ಟಿಗೆ ಸೇರುತ್ತವೆ. ಕಲಾ ಕ್ಷೇತ್ರವನ್ನು ಇನ್ನಷ್ಟು ಹೆಚ್ಚಿನ ವಿಶಾಲಗೊಳ್ಳಿಸುವ ಮೂಲಕ ಕಲೆ, ಕಲಾವಿದರ ಏಳಿಗೆಗೆ ಶ್ರಮಿಸುತ್ತೇನೆ’ ಎಂದು ಸೊಲಬಕ್ಕನವರ ಹೇಳಿದರು.

ಟಿ.ಬಿ.ಸೊಲಬಕ್ಕನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.