ಹಾವೇರಿ: ‘ಹಾವೇರಿ– ಗದಗ ಲೋಕಸಭಾ ಕ್ಷೇತ್ರದಲ್ಲಿಯೂ ಮತ ಕಳ್ಳತನ ನಡೆದಿರುವ ಅನುಮಾನವಿದ್ದು, 79,743 ಮತಗಳ ವ್ಯತ್ಯಾಸ ಕಂಡುಬರುತ್ತಿದೆ’ ಎಂದು ಕಾಂಗ್ರೆಸ್ ಪಕ್ಷದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಆರೋಪಿಸಿದ್ದಾರೆ.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳ್ಳತನ ಆರೋಪದ ದಾಖಲೆಗಳನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ನೀರಲಗಿ, ‘ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಮತಗಳ ವ್ಯತ್ಯಾಸದ ಬಗ್ಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರು ದಾಖಲೆ ಸಮೇತ ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ’ ಎಂದರು.
‘ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೆಬೆನ್ನೂರು ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ, ಗದಗ, ರೋಣ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಹಾವೇರಿ–ಗದಗ ಲೋಕಸಭಾ ಕ್ಷೇತ್ರ ರಚನೆಯಾಗಿದೆ. ಇದೇ ಲೋಕಸಭಾ ಕ್ಷೇತ್ರದ 2024ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಕ್ಷೇತ್ರದ ಮತದಾರರ ಅಂಕಿ–ಅಂಶವನ್ನು ಪರಿಶೀಲಿಸಿದಾಗ, ಇವಿಎಂ ಮತಯಂತ್ರಕ್ಕೂ ಹಾಗೂ ಮತದಾರರ ಪಟ್ಟಿಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿವೆ’ ಎಂದರು.
‘ಮತಗಳ ವ್ಯತ್ಯಾಸದ ಬಗ್ಗೆ ಲಭ್ಯವಿರುವ ಪುರಾವೆಗಳನ್ನು ಆನಂದ ಗಡ್ಡದೇವರಮಠ ಸಂಗ್ರಹಿಸಿದ್ದಾರೆ. ಅದೇ ಮಾಹಿತಿಯನ್ನು ಅವರು ರಾಹುಲ್ ಗಾಂಧಿ ಅವರಿಗೆ ನೀಡಲು ಬೆಂಗಳೂರಿಗೆ ಹೋಗಿದ್ದಾರೆ. ರಾಹುಲ್ ಗಾಂಧಿ ಅವರು ನೀಡುವ ಸಲಹೆ ಆಧರಿಸಿ ಮುಂದಿನ ಹೋರಾಟದ ರೂಪುರೇಷೆಯನ್ನು ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ಕ್ಷೇತ್ರದಲ್ಲಿ ಆಗಿರುವ ಮತಗಳ ವ್ಯತ್ಯಾಸದ ಬಗ್ಗೆ ನಾನೂ ಅಧಿಕೃತ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ, ಮತ ಕಳ್ಳತನದ ವಿರುದ್ಧ ಕಾನೂನು ಹೋರಾಟ ರೂಪಿಸಲಾಗುವುದುೆ’ ಎಂದರು.
ಮತಗಳ ವ್ಯತ್ಯಾಸ ಬಗ್ಗೆ ಅಭಿಪ್ರಾಯ ಪಡೆಯಲು ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರು ಲಭ್ಯರಾಗಲಿಲ್ಲ.
‘ಎಂಟರಲ್ಲಿ ಏಳು ಕಾಂಗ್ರೆಸ್ ಶಾಸಕರು’:
‘ಹಾವೇರಿ–ಗದಗ ಲೋಕಸಭಾ ಕ್ಷೇತ್ರಗಳಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಎಂಟರ ಪೈಕಿ ಏಳು ಕ್ಷೇತ್ರಗಳಲ್ಲಿ ಸದ್ಯ ಕಾಂಗ್ರೆಸ್ ಶಾಸಕರಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಳು ಶಾಸಕರು ಏನು ಮಾಡುತ್ತಿದ್ದರು. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸದೇ ಮೌನವಾಗಿದ್ದು ಏಕೆ’ ಎಂದು ಬಿಜೆಪಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.
‘ಚುನಾವಣಾ ಆಯೋಗವೇ ಮತದಾರರ ಪಟ್ಟಿ ಅಂತಿಮಗೊಳಿಸುವುದಿಲ್ಲ. ಎಲ್ಲವೂ ರಾಜ್ಯ ಸರ್ಕಾರದ ಅಧಿಕಾರಿಗಳ ಮೂಲಕವೇ ನಡೆಯುತ್ತದೆ. ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲೂ ಅವಕಾಶವಿರುತ್ತದೆ. ಆದರೆ, ಸೋತ ಹತಾಶೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರು ದೂರಿದರು
‘ಪುರಾವೆ ಇದ್ದರೆ, ಅಫಿಡ್‌ವಿಟ್ ನೀಡಲಿ’:
‘ಕಾಂಗ್ರೆಸ್ ಮಾಡುತ್ತಿರುವ ಆರೋಪ, ಆಧಾರ ರಹಿತವಾದದ್ದು. ಅವರ ಬಳಿ ಏನಾದರೂ ಪುರಾವೆ ಇದ್ದರೆ, ಚುನಾವಣೆ ಆಯೋಗಕ್ಕೆ ಅಫಿಟ್‌ವಿಟ್ ಮೂಲಕ ದೂರು ನೀಡಲಿ. ಅದನ್ನು ಬಿಟ್ಟು ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಆರೋಪದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಅಧಿಕಾರಿಗಳೇ ಮತದಾರರ ಪಟ್ಟಿ ಸಿದ್ದಪಡಿಸುತ್ತಾರೆ. ಆಕ್ಷೇಪಣೆಗೂ ಅವಕಾಶವಿರುತ್ತದೆ. ಅಂಥ ಸಂದರ್ಭದಲ್ಲಿ ಕಾಂಗ್ರೆಸ್ ಏಕೆ ಪ್ರಶ್ನಿಸಲಿಲ್ಲ’ ಎಂದರು. ‘ಜಿಲ್ಲಾ ಚುನಾವಣಾವಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಎಲ್ಲರೂ ರಾಜ್ಯ ಸರ್ಕಾರದ ಅಧಿಕಾರಿಗಳು. ಇವರೇ ಮತದಾರರ ಪಟ್ಟಿಯನ್ನೂ ಸಿದ್ಧಪಡಿಸುತ್ತಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಸಾಮಾನ್ಯ. ಅದರ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.