ADVERTISEMENT

ಹಾವೇರಿ | ರಟ್ಟೀಹಳ್ಳಿ ತಾಲ್ಲೂಕಿನಾದ್ಯಂತ ಉತ್ತಮ ಮಳೆ: ಬಿತ್ತನೆ ಆರಂಭ

ಒಟ್ಟು 27,500 ಹೆಕ್ಟೇರ್‌ ಭೂಮಿ ಸಾಗುವಳಿಗೆ ಲಭ್ಯವಿದೆ

ಪ್ರದೀಪ ಕುಲಕರ್ಣಿ
Published 28 ಮೇ 2025, 4:02 IST
Last Updated 28 ಮೇ 2025, 4:02 IST
ರಟ್ಟೀಹಳ್ಳಿ ತಾಲ್ಲೂಕಿನ ಗ್ರಾಮ ಒಂದರಲ್ಲಿ ಮಹಿಳೆಯರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು
ರಟ್ಟೀಹಳ್ಳಿ ತಾಲ್ಲೂಕಿನ ಗ್ರಾಮ ಒಂದರಲ್ಲಿ ಮಹಿಳೆಯರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು   

ರಟ್ಟೀಹಳ್ಳಿ: ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲ್ಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯ 63 ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು, ಈಗಾಗಲೇ ರೈತರು ತಮ್ಮ ಭೂಮಿಯನ್ನು ಹದಮಾಡಿಕೊಂಡಿದ್ದು, ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ.

ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ರೈತ ಸಂಪರ್ಕ ಸೇರಿದಂತೆ ತಡಕನಹಳ್ಳಿ, ಹಳ್ಳೂರು ರೈತ ಸಂಪರ್ಕ ಉಪಕೇಂದ್ರಗಳಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಗೋವಿನಜೋಳ, ಹೆಸರು, ತೊಗರಿ, ಸೊಯಾಬೀನ್, ಅಲಸಂಧಿ, ಶೇಂಗಾ ಇನ್ನಿತರ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ನೀರಾವರಿ ಜಮೀನುಗಳಲ್ಲಿ ಈಗಾಗಲೇ ಹತ್ತಿ, ಗೋವಿನಜೋಳ ಬಿತ್ತನೆ ಮಾಡಲಾಗಿದ್ದು, ಮಳೆ ಆಶ್ರಿತ ಭೂಮಿಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 27,500 ಹೆಕ್ಟೇರ್‌ ಭೂ ಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, 2,100 ಹೆಕ್ಟರ್ ಭೂ ಪ್ರದೇಶ ನೀರಾವರಿ, 25,400 ಹೆಕ್ಟೇರ್‌ ಭೂ ಪ್ರದೇಶ ಒಣ ಬೇಸಾಯ ಆಗಿದೆ. ಮೇ ಅಂತ್ಯದಲ್ಲಿ 103 ಎಂಎಂ ಮಳೆಯಾಗಿದ್ದು, ವಾಡಿಕೆಗಿಂತ ಶೇ 47 ಹೆಚ್ಚು ಮಳೆಯಾಗಿದೆ.

ADVERTISEMENT

‘ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಅದರೊಂದಿಗೆ ಅಲ್ಪ ಪ್ರಮಾಣದಲ್ಲಿ ತಾಲ್ಲೂಕಿನ ಕುಡಪಲಿ ಗುಂಡಗಟ್ಟಿ, ಕಡೂರ, ಯಡಗೋಡ, ಮೇದೂರು, ಮಕರಿ ಗ್ರಾಮಗಳಲ್ಲಿ ರೈತರು ಶೇಂಗಾ, ತೊಗರಿ, ಅಲಸಂಧಿ ಬೆಳೆಗೆ ಆದ್ಯತೆ ನೀಡುತ್ತಾರೆ. ಬಿತ್ತನೆ ಪೂರ್ವದಲ್ಲಿ ರೈತರು ಕೃಷಿ ಇಲಾಖೆಯಿಂದ ಅಗತ್ಯ ಮಾಹಿತಿ, ಮಾರ್ಗದರ್ಶನ ಪಡೆಯುವುದು ಉತ್ತಮ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ಬೀಜಗಳ ದಾಸ್ತಾನು ಇದೆ. ಸೊಸೈಟಿಗಳಲ್ಲಿ ಗೊಬ್ಬರ ದಾಸ್ತಾನು ಇದೆ. ಡಿಎಪಿ ಸ್ವಲ್ಪ ಕೊರತೆಯಿದ್ದರೂ ರೈತರು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸ ಗೊಬ್ಬರ ಬಳಕೆ ಮಾಡಬಹುದಾಗಿದೆ’ ಎನ್ನುತ್ತಾರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಅವರು.

‘ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮು ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕಾಲ ಕಾಲಕ್ಕೆ ಬೇಕಾಗುವ ಉತ್ತಮ ಗುಣಮಟ್ಟದ ಬೀಜ, ಜೌಷಧಿ, ಗೊಬ್ಬರ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು. ಅಲ್ಲದೆ ಕಳಪೆ ಬೀಜಗಳ ಮಾರಾಟದ ಬಗ್ಗೆ ನಿಗಾವಹಿಸಿಬೇಕು. ಬೀಜ, ರಾಸಾಯನಿಕ ಜೌಷಧಿ, ಗೊಬ್ಬರ ರಿಯಾಯಿತಿ ದರದಲ್ಲಿ ಹೇರಳವಾಗಿ ದೊರೆಯುವಂತೆ ಕ್ರಮವಹಿಸಬೇಕು’ ಎನ್ನುತ್ತಾರೆ ರೈತ ಸಂಘಟನೆಯ ಪರಮೇಶ್ವರಪ್ಪ ಬತ್ತಿಕೊಪ್ಪ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.