ADVERTISEMENT

ಹಾವೇರಿ: 209 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕ

ಹಾಲಿ ಸದಸ್ಯರ ಅಧಿಕಾರವಧಿ ಮುಕ್ತಾಯ | ಚುನಾವಣೆ ಆಗುವವರೆಗೂ ಅಧಿಕಾರಿಗಳಿಂದ ಆಡಳಿತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:17 IST
Last Updated 29 ಜನವರಿ 2026, 7:17 IST
ಆಡಳಿತಾಧಿಕಾರಿ ನೇಮಕವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಕಣಗಿ ಗ್ರಾಮ ಪಂಚಾಯಿತಿ ಕಟ್ಟಡ
ಆಡಳಿತಾಧಿಕಾರಿ ನೇಮಕವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಿರೇಕಣಗಿ ಗ್ರಾಮ ಪಂಚಾಯಿತಿ ಕಟ್ಟಡ   

ಹಾವೇರಿ: ಜಿಲ್ಲೆಯಲ್ಲಿರುವ 223 ಗ್ರಾಮ ಪಂಚಾಯಿತಿಗಳ ಪೈಕಿ 209 ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಇದೇ ತಿಂಗಳು ಮುಕ್ತಾಯವಾಗುತ್ತಿದ್ದು, ಇಂಥ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯ ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ರಾಣೆಬೆನ್ನೂರು, ಶಿಗ್ಗಾವಿ, ಹಾನಗಲ್ ಹಾಗೂ ಸವಣೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕಾಗಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಆಡಳಿತಾಧಿಕಾರಿ ನೇಮಕವಾದ ಗ್ರಾಮ ಪಂಚಾಯಿತಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಅಧಿಕಾರದ ಅವಧಿ 2026ರ ಜನವರಿ ಅಂತ್ಯದಲ್ಲಿ ಮುಕ್ತಾಯವಾಗಲಿದೆ. 2026–2031ರ ಅವಧಿಗಾಗಿ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಆಗುವವರೆಗೂ ಆಡಳಿತಾಧಿಕಾರಿ ನೇಮಿಸಲು ಜಿಲ್ಲಾಧಿಕಾರಿಯವರಿಗೆ ಅಧಿಕಾರವಿದೆ. ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಈಗ ಆಡಳಿತಾಧಿಕಾರಿ ನೇಮಕವಾಗಿದೆ.

ADVERTISEMENT

ಸರ್ಕಾರದ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನೇ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಒಬ್ಬರಿಗೆ ಮೂರು ಹಾಗೂ ಅದಕ್ಕಿಂತಲೂ ಹೆಚ್ಚಿನ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಯ ಜವಾಬ್ದಾರಿ ವಹಿಸಲಾಗಿದೆ. ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಪಶು ಸಂಗೋಪನಾ ಇಲಾಖೆ, ನೀರಾವರಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಎಪಿಎಂಸಿ ಹಾಗೂ ಇತರೆ ಇಲಾಖೆ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದಾರೆ.

‘ಗ್ರಾಮ ಪಂಚಾಯಿತಿಯ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಆಡಳಿತಾಧಿಕಾರಿಯವರು ನಿರ್ವಹಿಸತಕ್ಕದ್ದು. ಈ ಆದೇಶವು ಆಡಳಿತಾಧಿಕಾರಿಯು ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಮುಂದಿನ 6 ತಿಂಗಳ ಅವಧಿಯವರೆಗೂ ಜಾರಿಯಲ್ಲಿರುತ್ತದೆ. ಅಥವಾ ಅಧ್ಯಕ್ಷರ ಚುನಾವಣೆ ನಡೆದು, ಗ್ರಾಮ ಪಂಚಾಯಿತಿಯು ಕ್ರಮಬದ್ಧವಾಗಿ ರಚನೆಯಾಗುವವರೆಗೂ ಆದೇಶ ಜಾರಿಯಲ್ಲಿರಲಿದೆ’ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

14 ಗ್ರಾ.ಪಂ. ಯಥಾಪ್ರಕಾರ ನಿರ್ವಹಣೆ: ಚುನಾವಣೆ ದಿನಾಂಕದಲ್ಲಿ ವ್ಯತ್ಯಾಸವಾಗಿದ್ದರಿಂದ, ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳ ಸದಸ್ಯರ ಅವಧಿ ಬಾಕಿಯಿದೆ. ಇಂಥ ಗ್ರಾಮ ಪಂಚಾಯಿತಿಗಳ ನಿರ್ವಹಣೆ ಯಥಾಪ್ರಕಾರ ಮುಂದುವರಿಯಲಿದೆ. ಯಾವುದೇ ಆಡಳಿತಾಧಿಕಾರಿ ನೇಮಕ ಮಾಡಿಲ್ಲ.

‘ಬ್ಯಾಡಗಿ ತಾಲ್ಲೂಕಿನ 3, ರಾಣೆಬೆನ್ನೂರು ತಾಲ್ಲೂಕಿನ 7, ಶಿಗ್ಗಾವಿ ತಾಲ್ಲೂಕಿನ 1 ಹಾಗೂ ಹಾನಗಲ್ ತಾಲ್ಲೂಕಿನ 3 ಗ್ರಾ.ಪಂ.ಗಳಿಗೆ ಸದ್ಯದ ಸದಸ್ಯರು, ಅಧ್ಯಕ್ಷರು–ಉಪಾಧ್ಯಕ್ಷರೇ ಮುಂದುವರಿಯಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವುಗಳ ಅಧಿಕಾರವಧಿ ಮುಗಿದ ಬಳಿಕವೇ ಅವುಗಳಿಗೂ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶವಿರುತ್ತದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.

ಹಾನಗಲ್: 39 ಗ್ರಾ.ಪಂ.ಗೆ ಆಡಳಿತಾಧಿಕಾರಿ

ಹಾನಗಲ್: ತಾಲ್ಲೂಕಿನ 42 ಗ್ರಾ.ಪಂ. ಪೈಕಿ 39 ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಅವಧಿ ಪೂರ್ಣಗೊಳ್ಳದ ಕೂಡಲ ಹಾವಣಗಿ ಮತ್ತು ಹುಲ್ಲತ್ತಿ ಪಂಚಾಯಿತಿಗಳು ಯಥಾಪ್ರಕಾರ ಮುಂದುವರಿದಿವೆ. ಕಂಚಿನೆಗಳೂರ ನರೇಗಲ್ ಮಾರನಬೀಡ ಬೆಳಗಾಲಪೇಟೆ ಬಮ್ಮನಹಳ್ಳಿ ಬೈಚವಳ್ಳಿ ಯಳವಟ್ಟಿ ಕರಗುದರಿ ಮಾಸನಕಟ್ಟಿ ಸಾಂವಸಗಿ ಆಲದಕಟ್ಟಿ ಶೀಗಿಹಳ್ಳಿ ಆಡೂರ ಬಾಳಂಬೀಡ ಹಿರೇಹುಲ್ಲಾಳ ಉಪ್ಪಣಶಿ ತಿಳವಳ್ಳಿ ಹೇರೂರ ಸೋಮಸಾಗರ ಅಕ್ಕಿಆಲೂರ ಕಲ್ಲಾಪೂರ ಕೂಸನೂರ ಮಲಗುಂದ ಚಿಕ್ಕಾಂಶಿ ಹೊಸೂರ ಶಿರಗೋಡ ಗೊಂದಿ ಸಮ್ಮಸಗಿ ಕಿರವಾಡಿ ಹೊಂಕಣ ಶ್ಯಾಡಗುಪ್ಪಿ ಅರಳೇಶ್ವರ ಸುರಳೇಶ್ವರ ಗೆಜ್ಜಿಹಳ್ಳಿ ಡೊಳ್ಳೇಶ್ವರ ಮಂತಗಿ ಕೊಪ್ಪರಸಿಕೊಪ್ಪ ಹಿರೇಕಣಗಿ ಕೆಲವರಕೊಪ್ಪ ಹಿರೂರ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಕವಾಗಿದೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.