ADVERTISEMENT

ಹಾವೇರಿ | ಗ್ರಾ.ಪಂ.ಗೆ ಬೀಗ: 14 ಸದಸ್ಯರ ರಾಜೀನಾಮೆ

ಅಕ್ಕಿಆಲೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:11 IST
Last Updated 13 ಸೆಪ್ಟೆಂಬರ್ 2025, 6:11 IST
'ಅಕ್ಕಿಆಲೂರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರು ಹಾಗೂ ಅವ್ಯವಹಾರ ನಡೆಸಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಪಂಚಾಯಿತಿ ಕಟ್ಟಡಕ್ಕೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದ ಸದಸ್ಯರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
'ಅಕ್ಕಿಆಲೂರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರು ಹಾಗೂ ಅವ್ಯವಹಾರ ನಡೆಸಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಪಂಚಾಯಿತಿ ಕಟ್ಟಡಕ್ಕೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದ ಸದಸ್ಯರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು   

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಶುಕ್ರವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದ ಬಿಜೆಪಿ ಬೆಂಬಲಿತ 14 ಸದಸ್ಯರು, ‘ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರನ್ನು ಹಾಗೂ ಅವ್ಯವಹಾರ ನಡೆಸಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಗ್ರಾಮದ ಮನೆಗಳಿಗೆ ಪ್ಲೇಟ್‌ ಅಳವಡಿಸಲು ₹ 100 ವಸೂಲಿ ಮಾಡುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜೊತೆಗೆ, ಪಿಡಿಒ ವಿರುದ್ಧವೂ 14 ಸದಸ್ಯರು ಹಲವು ದಿನಗಳಿಂದ ಆರೋಪ ಮಾಡುತ್ತಿದ್ದರು. ಆದರೆ, ಪಿಡಿಒ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ. ಇದರಿಂದ ನೊಂದ ಸದಸ್ಯರು, ಗ್ರಾಮದಲ್ಲಿ ಶುಕ್ರವಾರ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಪಂಚಾಯಿತಿ ಕಚೇರಿಗೆ ತೆರಳಿದ್ದ ಸದಸ್ಯರು ಹಾಗೂ ಬಿಜೆಪಿ ಮುಖಂಡರು, ಬೀಗ ಹಾಕಿದರು. ಅದರ ಎದುರೇ ಘೋಷಣೆ ಕೂಗಿ ಪ್ರತಿಭಟನೆ ಮುಂದುವರಿಸಿದರು.

ADVERTISEMENT

‘ಸೆ. 11ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರು, ಬಿಜೆಪಿ ಬೆಂಬಲಿತ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆ ಸಹ ಮಾಡಿದ್ದಾರೆ. ಮಹಿಳಾ ಸದಸ್ಯರ ಜೊತೆಗೆಯೂ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಸದಸ್ಯರ ಗೌರವಕ್ಕೆ ಧಕ್ಕೆಯಾಗಿದೆ. ಸದಸ್ಯರ ಮೇಲೆ ಹಲ್ಲೆ ಮಾಡಿರುವ ಆರೋಪಿತ ಸದಸ್ಯರು ಹಾಗೂ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾನಿರತ ಸದಸ್ಯರು ಆಗ್ರಹಿಸಿದರು.

‘ಸರ್ಕಾರದ ಆದೇಶ ಇಲ್ಲದಿದ್ದರೂ ಪಿಡಿಒ ಹಾಗೂ ಇತರರು, ಗ್ರಾಮದ ಮನೆಗಳಿಂದ ಪ್ಲೇಟ್‌ ಅಳವಡಿಕೆ ಹೆಸರಿನಲ್ಲಿ ತಲಾ ₹ 100 ವಸೂಲಿ ಮಾಡಿದ್ದಾರೆ. ಇದೊಂದು ಹಗಲು ದರೋಡೆಯಾಗಿದೆ. ಇದೇ ರೀತಿಯಲ್ಲಿ ಪಿಡಿಒ ಹಾಗೂ ಇತರರು, ಪಂಚಾಯಿತಿಯಲ್ಲಿ ಹಲವು ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಅವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜಿಲ್ಲೆಯಲ್ಲಿಯೂ ಆರೂ ಶಾಸಕರು ಕಾಂಗ್ರೆಸ್‌ನವರು. ಕಾಂಗ್ರೆಸ್ ಬೆಂಬಲಿತ ಸದಸ್ಯರು, ಬೇಕಾಬಿಟ್ಟಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಜನರ ಹಣವನ್ನು ದೋಚುತ್ತಿದ್ದಾರೆ. ಇದನ್ನು ಪ್ರಶ್ನಿಸುವವರ ವಿರುದ್ಧ ಹಲ್ಲೆ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಉಪ ಕಾರ್ಯದರ್ಶಿಗೆ ಪತ್ರ: ಪಂಚಾಯಿತಿಗೆ ಬೀಗ ಹಾಕಿರುವ ಮಾಹಿತಿ ತಿಳಿಯುತ್ತಿದ್ದಂತೆ ಹಾನಗಲ್ ತಾಲ್ಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸ್ಥಳಕ್ಕೆ ಬಂದು, ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು.

‘ಸದಸ್ಯರ ಗೌರವಕ್ಕೆ ಧಕ್ಕೆಯಾಗಿದೆ. ಪಂಚಾಯಿತಿಯಲ್ಲಿ ಪಿಡಿಒ ಅವ್ಯವಹಾರವೂ ವಿಪರೀತವಾಗಿದೆ. ಅವರೆಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಸಲ್ಲಿಸಿದ 14 ಸದಸ್ಯರು, ‘ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಈ ಮನವಿ ಪತ್ರವನ್ನೇ ಸಾಮೂಹಿಕ ರಾಜೀನಾಮೆ ಪತ್ರವೆಂದು ಪರಿಗಣಿಸಬೇಕು’ ಎಂದು ಕೋರಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಡಿಒ ಕುಮಾರ ಮಕರವಳ್ಳಿ ಅವರು ಶುಕ್ರವಾರ ಕಚೇರಿ ಬಂದಿರಲಿಲ್ಲವೆಂದು ಸಿಬ್ಬಂದಿ ತಿಳಿಸಿದರು. 

ಪ್ಲೇಟ್‌ ಅಳವಡಿಕೆಗೆ ₹ 100 ವಸೂಲಿ ಅಕ್ಕಿಆಲೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಉಪ ಕಾರ್ಯದರ್ಶಿಗೆ ಸದಸ್ಯರ ಪತ್ರ 

‘ಹಣ ವಸೂಲಿ: ಮೇಲ್ನೋಟಕ್ಕೆ ಪತ್ತೆ’
‘ಪ್ರತಿಯೊಂದು ಮನೆಯಿಂದ ತಲಾ ₹ 100 ವಸೂಲಿ ಮಾಡಿರುವ ಪ್ರಕರಣದಲ್ಲಿ ಪಿಡಿಒ ಅವರ ಕರ್ತವ್ಯ ಲೋಪ ಇರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಸಿಇಒ ಅವರಿಗೆ ವರದಿ ನೀಡಲಾಗುವುದು’ ಎಂದು ಅಧಿಕಾರಿಗಳು ಹೇಳಿದರು. ಪ್ರತಿಭಟನಕಾರರ ಜೊತೆ ಮಾತನಾಡಿದ ಅಧಿಕಾರಿಗಳು ‘ಪ್ಲೇಟ್‌ ಬಗ್ಗೆ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ನೀಡಿರುವ ರಶೀದಿಯನ್ನೂ ಪಡೆಯಲಾಗಿದೆ’ ಎಂದರು. ‘ಪಿಡಿಒ ಮೇಲೆ ಕ್ರಮ ಆಗಲಿದೆ. ಇತರೆ ಅವ್ಯವಹಾರ ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.