ADVERTISEMENT

ಹಾವೇರಿ | ಅಕಾಲಿಕ ಮಳೆ: 1125 ಮಂದಿ ಸ್ಥಳಾಂತರ

ಜಿಲ್ಲೆಯಲ್ಲಿ ಐದು ಕಾಳಜಿ ಕೇಂದ್ರಗಳ ಸ್ಥಾಪನೆ: ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ– ಡಿ.ಸಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 14:01 IST
Last Updated 20 ನವೆಂಬರ್ 2021, 14:01 IST
ರಾಣೆಬೆನ್ನೂರಿನ ದೇವರಗುಡ್ಡ ರೈಲ್ವೆ ಕೆಳ ಸೇತುವೆಯ ಮಳೆ ನೀರಿನಲ್ಲಿ ಬಸ್‌ ಸಿಲುಕಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಶಂಕರ ಜಿ.ಎಸ್‌. ಇದ್ದಾರೆ  
ರಾಣೆಬೆನ್ನೂರಿನ ದೇವರಗುಡ್ಡ ರೈಲ್ವೆ ಕೆಳ ಸೇತುವೆಯ ಮಳೆ ನೀರಿನಲ್ಲಿ ಬಸ್‌ ಸಿಲುಕಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಶಂಕರ ಜಿ.ಎಸ್‌. ಇದ್ದಾರೆ     

ಹಾವೇರಿ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿ ಮಳೆಹಾನಿ ಸಂತ್ರಸ್ತರಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮವಹಿಸುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

ಮಳೆಯಿಂದ ಹಾನಿಯಾದ ವಿವಿಧ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಂದ ಹಾನಿಯ ಮಾಹಿತಿ ಪಡೆದುಕೊಂಡರು.

ನದಿಪಾತ್ರ, ಕೆರೆ-ಹಳ್ಳಗಳ ದಡದಲ್ಲಿರುವ ಜನವಸತಿ ಹಾಗೂ ತಗ್ಗು ಪ್ರದೇಶಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಪಾಯದ ಮುನ್ಸೂಚನೆ ಅರಿತು ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಎಲ್ಲ ಕ್ರಮಗಳನ್ನು ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

ಶಾಲಾ ಮಕ್ಕಳ ಬಗ್ಗೆ ಗರಿಷ್ಠ ಎಚ್ಚರವಹಿಸಬೇಕು. ಮಳೆಯಿಂದಾಗಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಯುದ್ಧೋಪಾದಿಯಲ್ಲಿ ಗುರುತಿಸಿ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಶಿಥಿಲ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸಿ ತರಗತಿಗಳನ್ನು ನಡೆಸದಂತೆ ಸೂಚನೆ ನೀಡಿದ್ದಾರೆ.

ಹಾನಿಯ ವಿವರ:

ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ನ.1ರಿಂದ 19ರವರೆಗೆ 11 ಪೂರ್ಣ ಹಾಗೂ 810 ಭಾಗಶಃ ಸೇರಿ 821 ಮನೆಗಳ ಹಾನಿ ಸಂಭವಿಸಿದ್ದು, ನ.20ರಂದು 20 ಪೂರ್ಣ ಹಾಗೂ 311 ಭಾಗಶಃ ಸೇರಿ 331 ಮನೆಗಳಿಗೆ ಹಾನಿಯಾಗಿದೆ. ಈವರೆಗೆ 31 ಪೂರ್ಣ ಹಾಗೂ 1122 ಭಾಗಶಃ ಸೇರಿ 1152 ಮನೆಗಳಿಗೆ ಹಾನಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ನ.1ರಿಂದ ನ.19ರವರೆಗೆ 18,214.68 ಹೆಕ್ಟೇರ್ ಕೃಷಿ ಹಾಗೂ 230 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 18,444 ಹೆಕ್ಟೇರ್ ಬೆಳೆ ಹಾನಿಯಾಗಿರುವ ಪ್ರಾಥಮಿಕ ವರದಿ ಲಭ್ಯವಾಗಿದೆ.

18 ಕುರಿ–ಮೇಕೆ ಸಾವು:

ದೇವರಗುಡ್ಡ ಗ್ರಾಮದಲ್ಲಿ ಒಂಬತ್ತು ಕುರಿ ಹಾಗೂ ಒಂದು ಮೇಕೆ, ಮೆಡ್ಲೇರಿ ಗ್ರಾಮದಲ್ಲಿ ಆರು ಕುರಿ ಹಾಗೂ ಎರಡು ಮೇಕೆ ಸೇರಿ 18 ಕುರಿ-ಮೇಕೆಗಳು ಹಾಗೂ ಹಾನಗಲ್‍ನಲ್ಲಿ ಒಂದು ಆಕಳ ಜೀವಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ರಾಣೆಬೆನ್ನೂರು ಪಟ್ಟಣದ ದೊಡ್ಡ ಕೆರೆ ಕೋಡಿಯಿಂದ ಗಂಗಾಪುರ ರಸ್ತೆಯ ಬಡಾವಣೆಯಲ್ಲಿ ನೀರಿನ ಹರಿವು ಉಂಟಾಗಿದ್ದು, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮೆಡ್ಲೇರಿ ರಸ್ತೆಯ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕ ಒಳಚರಂಡಿ ಹಾಗೂ ದೇವರಗುಡ್ಡದ ರೈಲ್ವೆ ಮೇಲ್ಸೇತುವೆ ಕೆಳಬದಿಯಲ್ಲಿ ನೀರಿನ ಹರಿವು ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ ಜಿ.ಎಸ್. ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.