ಹಾವೇರಿ: ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸೋಮವಾರ ಜೋರು ಮಳೆಯಾಗಿದ್ದು, ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ರಸ್ತೆ ಮೇಲೆಯೇ ನೀರು ಹರಿಯಿತು.
ಜಿಲ್ಲೆಯಾದ್ಯಂತ ಕೆಲದಿನಗಳಿಂದ ಮೋಡ ಕವಿದ ವಾತಾವರಣವಿದೆ. ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದೆ. ಭಾನುವಾರವೂ ಮಳೆಯಾಗಿತ್ತು. ಆದರೆ, ಸೋಮವಾರ ಮಳೆಯ ಅಬ್ಬರ ಜೋರಾಗಿತ್ತು.
ಹಾವೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಸಂಜೆಯವರೆಗೂ ಸುರಿಯಿತು. ತಡರಾತ್ರಿಯೂ ಜಿಟಿ ಜಿಟಿ ಮಳೆಯಿತ್ತು.
ನಿತ್ಯದ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದ ಜನರು, ಮಳೆಯಲ್ಲಿ ಓಡಾಡಿದರು. ಕೆಲವರು, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಮಳಿಗೆಗಳನ್ನು ಆಶ್ರಯ ಪಡೆದುಕೊಂಡಿದ್ದರು.
ಮಳೆಯ ಅಬ್ಬರ ಜೋರಾಗಿದ್ದರಿಂದ ಹಲವು ಕಡೆಗಳಲ್ಲಿ ರಸ್ತೆ ಮೇಲೆಯೇ ನೀರು ಹರಿಯಿತು. ನಗರದ ಕೆಲ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ, ನೀರು ರಸ್ತೆಗೆ ಹರಿಯಿತು.
ಹಳೇ ಪಿ.ಬಿ. ರಸ್ತೆ, ಹಾನಗಲ್ ರಸ್ತೆ, ಬಸವೇಶ್ವರನಗರದ, ಎಂ.ಜಿ. ರಸ್ತೆ, ಅಶ್ವಿನಿನಗರ, ದಾನೇಶ್ವರಿನಗರ, ಮಂಜುನಾಥ ನಗರ, ಇಜಾರಿ ಲಕಮಾಪುರ, ಗುತ್ತಲ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸುರಿಯಿತು.
ಹಿರೇಕೆರೂರು: ತಾಲ್ಲೂಕಿನ ಹಂಸಬಾವಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿದ್ದರಿಂದ, ಮಳೆಯಿಂದ ಸಂಗ್ರಹವಾದ ನೀರು ಮನೆಗಳಿಗೆ ನುಗ್ಗಿತ್ತು. ಹಂಸಬಾವಿಯ ಬ್ಯಾಂಕ ಆಫ್ ಬರೋಡಾ ಹತ್ತಿರ ಕೆಲ ಮನೆಗಳಿಗೆ ನೀರು ನುಗ್ಗಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.