ADVERTISEMENT

ಹಾವೇರಿ ವೈದ್ಯಕೀಯ ಕಾಲೇಜಿನ ಗುತ್ತಿಗೆ ಹುದ್ದೆಗಳ ನೇಮಕದಲ್ಲಿ ಅಕ್ರಮ?

ಹಾವೇರಿ ವೈದ್ಯಕೀಯ ಕಾಲೇಜು (ಹಿಮ್ಸ್) ಬೋಧಕೇತರ ನೇಮಕಾತಿ: ಆಕ್ಷೇಪಣೆ ಬರುತ್ತಿದ್ದಂತೆ ನೇಮಕ ರದ್ದು: ಅನುಮಾನ

ಸಂತೋಷ ಜಿಗಳಿಕೊಪ್ಪ
Published 15 ಜುಲೈ 2025, 4:24 IST
Last Updated 15 ಜುಲೈ 2025, 4:24 IST
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯ (ಹಿಮ್ಸ್)
ಹಾವೇರಿಯ ದೇವಗಿರಿ ರಸ್ತೆಯಲ್ಲಿರುವ ಹಾವೇರಿ ವೈದ್ಯಕೀಯ ಮಹಾವಿದ್ಯಾಲಯ (ಹಿಮ್ಸ್)   

ಹಾವೇರಿ: ಹಾವೇರಿ ವೈದ್ಯಕೀಯ ಕಾಲೇಜಿನ (ಹಿಮ್ಸ್) ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ವ್ಯಕ್ತವಾಗುತ್ತಿದೆ. ‘ಬ್ಲಡ್‌ ಬ್ಯಾಂಕ್ ಟೆಕ್ನಿಷಿಯನ್’ ಹುದ್ದೆ ನೇಮಕ ಸಂಬಂಧ ಆಕ್ಷೇಪಣೆ ಸಲ್ಲಿಕೆಯಾಗುತ್ತಿದ್ದಂತೆ ನೇಮಕಾತಿ ಪ್ರಕ್ರಿಯೆಯನ್ನು ದಿಢೀರ್ ರದ್ದು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆರು ತಿಂಗಳ ಗುತ್ತಿಗೆ ಅವಧಿಗಾಗಿ 13 ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ಈ ಪೈಕಿ 4 ಹುದ್ದೆಗಳನ್ನು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಿದ್ದ ಆಡಳಿತ ಮಂಡಳಿ, ತಾತ್ಕಾಲಿಕ ಪಟ್ಟಿ ಬದಲು ನೇರವಾಗಿ ಅಂತಿಮ ಪಟ್ಟಿ ಪ್ರಕಟಿಸಿದೆ.

‘ಬ್ಲಡ್‌ ಬ್ಯಾಂಕ್ ಟೆಕ್ನಿಷಿಯನ್ ಹುದ್ದೆಯ ನೇಮಕ ನಿಯಮಬಾಹಿರವಾಗಿದೆ. ಇದರಿಂದ ನನಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದ್ದ ಆಕಾಂಕ್ಷಿಯೊಬ್ಬರು, ನೇಮಕಾತಿ ನಿಯಮ ಉಲ್ಲಂಘನೆ ಹಾಗೂ ಅಧಿಸೂಚನೆಯಲ್ಲಿದ್ದ ಲೋಪಗಳನ್ನು ಗುರುತಿಸಿ ಆಕ್ಷೇಪಣೆ ಸಲ್ಲಿಸಿದ್ದರು. ‘ನನಗಾದ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಅಭ್ಯರ್ಥಿ ಎಚ್ಚರಿಸಿದ್ದರು.

ADVERTISEMENT

ಆಕ್ಷೇಪಣೆಯಿಂದ ಎಚ್ಚೆತ್ತ ಆಡಳಿತ ಮಂಡಳಿ, ತಮ್ಮಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಿದೆ. ಬ್ಲಡ್‌ ಬ್ಯಾಂಕ್ ಟೆಕ್ನಿಷಿಯನ್ ಹುದ್ದೆ ನೇಮಕವನ್ನು ರದ್ದುಪಡಿಸಿ ಹೊಸ ಆದೇಶ ಹೊರಡಿಸಿದೆ. ಈ ಹುದ್ದೆಗಾಗಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದೆ.

‘ಬೋಧಕೇತರ ಹುದ್ದೆಗಾಗಿ ಅಭ್ಯರ್ಥಿಯೊಬ್ಬರನ್ನು ತರಾತುರಿಯಲ್ಲಿ ಆಯ್ಕೆ ಮಾಡಿದ್ದ ಹಿಮ್ಸ್ ಆಡಳಿತ ಮಂಡಳಿ, ಅಂತಿಮ ಪಟ್ಟಿ ಹೊರಡಿಸಿತ್ತು. ಈ ನೇಮಕ ನಿಯಮ ಬಾಹಿರವೆಂಬುದಾಗಿ ಆಕ್ಷೇಪಣೆ ಸಲ್ಲಿಸುತ್ತಿದ್ದಂತೆ ನೇಮಕಾತಿಯನ್ನು ರದ್ದು ಮಾಡಿದೆ. ನೇಮಕಾತಿ ನ್ಯಾಯಯುತವಾಗಿದ್ದರೆ ರದ್ದು ಮಾಡುವ ಅವಶ್ಯಕತೆ ಇರಲಿಲ್ಲ. ತನ್ನ ತಪ್ಪು ಅರಿವಾಗುತ್ತಿದ್ದಂತೆ ನೇಮಕವನ್ನು ರದ್ದುಪಡಿಸಿದೆ. ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್‌ ಮಾತ್ರವಲ್ಲದೇ, ಪ್ರತಿಯೊಂದು ಹುದ್ದೆಯ ನೇಮಕದಲ್ಲೂ ಅಕ್ರಮ ನಡೆದಿರುವ ಅನುಮಾನ ದಟ್ಟವಾಗಿದೆ. ಎಲ್ಲ ಹುದ್ದೆ ನೇಮಕದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು’ ಎಂದು ಅಭ್ಯರ್ಥಿಯೊಬ್ಬರು ಆಗ್ರಹಿಸಿದರು.

‘ಹಿಮ್ಸ್ ಪ್ರಾರಂಭವಾದ ದಿನದಿಂದಲೇ ಗುತ್ತಿಗೆ ಆಧಾರದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರತಿಯೊಂದು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಆದರೆ, ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಹುದ್ದೆ ನೇಮಕಾತಿಗೆ ಹೊರಡಿಸಿದ್ದ ಅಂತಿಮ ಆಯ್ಕೆ ಪಟ್ಟಿ ವಿರುದ್ದ ಇದೇ ಮೊದಲ ಬಾರಿಗೆ ಆಕ್ಷೇಪಣೆ ಸಲ್ಲಿಕೆಯಾಗಿದೆ. ಆಕ್ಷೇಪಣೆ ನ್ಯಾಯಸಮ್ಮತವಾಗಿದ್ದರಿಂದ ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ನೇಮಕಾತಿ ರದ್ದಾಗಿದೆ. ಆಕ್ಷೇಪಣೆ ಸಲ್ಲಿಸದ ಇತರೆ ಹುದ್ದೆಗಳ ನೇಮಕಾತಿ ಎಷ್ಟರ ಮಟ್ಟಿಗೆ ಸರಿಯಿದೆ ? ಎಂಬ ಪ್ರಶ್ನೆ ಮೂಡಿದೆ’ ಎಂದು ಅವರು ಹೇಳಿದರು.

ಒತ್ತಡಕ್ಕೆ ಮಣಿದು ನೇಮಕಾತಿ ಶಂಕೆ: ‘ಹಿಮ್ಸ್‌ನ ಬೋಧಕೇತರ ಹುದ್ದೆಗಳ ಭರ್ತಿಗಾಗಿ ಜೂನ್ 10ರಂದು ಅಧಿಸೂಚನೆ ಹೊರಡಿಸಲಾಗಿತ್ತು. ರಾಜ್ಯ ಸರ್ಕಾರದ ಎಲ್ಲ ನಿಯಮಾವಳಿ ಪಾಲಿಸುವುದಾಗಿ ಹಾಗೂ ಒಂದು ಹುದ್ದೆಯಿದ್ದರೆ ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಜುಲೈ 7ರಂದು ದಾಖಲೆಗಳ ಪರಿಶೀಲನೆ ನಡೆಸಿ, ಅಂದೇ ತರಾತುರಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು’ ಎಂದು ಅಭ್ಯರ್ಥಿಯೊಬ್ಬರು ತಿಳಿಸಿದರು.

‘ಯಾವುದೇ ನೇಮಕಾತಿಯಿದ್ದರೂ ಮೊದಲಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಆ ನಂತರ, ದಾಖಲೆ ಪರಿಶೀಲನೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಬೇಕು. ಆದರೆ, ಇಲ್ಲಿ ಎಲ್ಲವೂ ತರಾತುರಿಯಲ್ಲಿ ಆಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು, ವಿದ್ಯಾರ್ಹತೆ ಹಾಗೂ ಅನುಭವವನ್ನೂ ಲೆಕ್ಕಿಸದೇ ಕೆಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಅವರು ದೂರಿದರು.

ವೇತನ ಕಡಿಮೆ ಹಾಗೂ ಪ್ರಭಾವಿಗಳ ಒತ್ತಡದಿಂದಾಗಿ ನೈಜ ಅಭ್ಯರ್ಥಿಗಳಿಗೆ ಹುದ್ದೆ ಸಿಗುವುದಿಲ್ಲವೆಂಬ ಕಾರಣಕ್ಕೆ ಹಲವರು, ನೇಮಕಾತಿ ಕೋರಿ ಅರ್ಜಿ ಸಲ್ಲಿಸುತ್ತಿಲ್ಲವೆಂಬ ಮಾತುಗಳೂ ಇವೆ.

––––

ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಹುದ್ದೆ ನೇಮಕಾತಿಯಲ್ಲಿ ಅನುಭವ ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ನಮ್ಮಿಂದ ಹಾಗೂ ಅಭ್ಯರ್ಥಿಯಿಂದ ಲೋಪವಾಗಿದೆ. ಹೀಗಾಗಿ ಅಂತಿಮ ನೇಮಕವನ್ನು ರದ್ದುಪಡಿಸಲಾಗಿದೆ

–ಪ್ರದೀಪಕುಮಾರ ಎಂ.ವಿ. ಡೀನ್ ಹಾಗೂ ನಿರ್ದೇಶಕ ಹಿಮ್ಸ್

ಹಿಮ್ಸ್‌ನಲ್ಲಿ ನಿಯಮಗಳ ಪ್ರಕಾರ ಗುತ್ತಿಗೆ ನೇಮಕಾತಿ ಆಗುತ್ತಿಲ್ಲ. ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಮಾತ್ರವಲ್ಲದೇ ಇತರೆ ಹುದ್ದೆ ನೇಮಕದಲ್ಲೂ ಅಕ್ರಮದ ಅನುಮಾನವಿದೆ

–ಮಾರುತಿ ಗೂರಿ ಅಭ್ಯರ್ಥಿ ಬೆಳಗಾವಿ ಜಿಲ್ಲೆ 

–––

‘ಎನ್‌ಎಂಸಿ ನಿಯಮ ಪಾಲನೆಗೆ ನೇಮಕಾತಿ’ ‘ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌.ಎಂ.ಸಿ) ನಿಯಮಾವಳಿ ಪ್ರಕಾರ ಕಾಲೇಜಿನಲ್ಲಿ ಅಗತ್ಯ ಹುದ್ದೆಗಳಿರಬೇಕು. ಸದ್ಯದಲ್ಲೇ ಎನ್‌ಎಂಸಿ ಪರಿಶೀಲನೆಯಿದೆ. ಇದೇ ಕಾರಣಕ್ಕೆ  ತರಾತುರಿಯಲ್ಲಿ ಗುತ್ತಿಗೆ ಆಧಾರದ ನೇಮಕಾತಿ ಮಾಡಲಾಗಿದೆ. ಆಕ್ಷೇಪಣೆ ಬರುತ್ತಿದ್ದಂತೆ ಒಂದು ಹುದ್ದೆಯ ನೇಮಕ ರದ್ದುಪಡಿಸಲಾಗಿದೆ. ಉಳಿದಂತೆ ಯಾವ ಹುದ್ದೆಯಲ್ಲೂ ಯಾವುದೇ ಅಕ್ರಮಗಳು ನಡೆದಿಲ್ಲ’ ಎಂದು ಹಿಮ್ಸ್ ಅಧಿಕಾರಿಯೊಬ್ಬರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.