
ಹಾವೇರಿ: ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಹಿಂದೂಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.
ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ಹುಕ್ಕೇರಿಮಠದಿಂದ ಭಾರತ ಮಾತೆಯ ಭಾವಚಿತ್ರದ ಶೋಭಾಯಾತ್ರೆಯು ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು. ಹುಕ್ಕೇರಿ ಮಠದಿಂದ ಆರಂಭವಾದ ಮೆರವಣಿಗೆಯು ಎಂ.ಜಿ. ರಸ್ತೆ, ಜೆ.ಪಿ. ವೃತ್ತ, ಗುರುಭವನ ಮೂಲಕ ಮುನ್ಸಿಪಲ್ ಮೈದಾನದವರೆಗೆ ಸಾಗಿ ಅಲ್ಲಿಯೇ ಸಮಾಪ್ತಗೊಂಡಿತು.
ಶೋಭಾಯಾತ್ರೆಯಲ್ಲಿ ಝಾಂಜ್ ಮೇಳ, ಸಮಾಳ, ಡೋಲು, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ಕಲಾತಂಡಗಳು ಮೆರಗು ತಂದವು. ಕುಂಭ ಹೊತ್ತ ಮಾತೆಯರು ಗಮನ ಸೆಳೆದರು. ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ದೇಶಭಕ್ತರ ವೇಷಭೂಷಣ ತೊಟ್ಟು ನೋಡುಗರ ಗಮನ ಸೆಳೆದರು. ದೇಶಪ್ರೇಮವನ್ನೂ ಪ್ರದರ್ಶಿಸಿದರು.
ಹುಬ್ಬಳ್ಳಿಯ ಧರ್ಮ ಚೇತನ ಸಮಿತಿ ತಂಡದಿಂದ ಪುರಾತನ ಹಿಂದು ವಿದ್ಯೆಗಳಾದ ಕತ್ತಿವರಸೆ, ಲಾಟಿ ಯುದ್ದ ಸೇರಿದಂತೆ ವಿವಿಧ ಕಲೆಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು.
ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದ ಎಲ್ಲ ಸಮುದಾಯದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.