ADVERTISEMENT

ಮುಗಿದ ಮುಂಗಾರು; ಹಿಂಗಾರು ಬಿತ್ತನೆ ಶುರು: ಕೃಷಿ ಇಲಾಖೆಯಿಂದ ಬೀಜಗಳ ವಿತರಣೆ

ಭೂಮಿ ಹದಗೊಳಿಸಿ ಬಿತ್ತನೆ ಆರಂಭಿಸಿದ ರೈತರು | ಜೋಳ, ಗೋವಿನಜೋಳಕ್ಕೆ ಬೇಡಿಕೆ

ಸಂತೋಷ ಜಿಗಳಿಕೊಪ್ಪ
Published 5 ಅಕ್ಟೋಬರ್ 2025, 5:16 IST
Last Updated 5 ಅಕ್ಟೋಬರ್ 2025, 5:16 IST
ಹಾವೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೇರಿದ್ದ ರೈತರು ಹಿಂಗಾರು ಹಂಗಾಮಿನ ಬಿತ್ತನೆಗಾಗಿ ಬೀಜಗಳನ್ನು ಖರೀದಿಸಿದರು
ಹಾವೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೇರಿದ್ದ ರೈತರು ಹಿಂಗಾರು ಹಂಗಾಮಿನ ಬಿತ್ತನೆಗಾಗಿ ಬೀಜಗಳನ್ನು ಖರೀದಿಸಿದರು   

ಹಾವೇರಿ: ಜಿಲ್ಲೆಯಾದ್ಯಂತ ಮುಂಗಾರು ಹಂಗಾಮು ಮುಗಿದಿದ್ದು, ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಭರದಿಂದ ಶುರುವಾಗಿವೆ. ಮುಂಗಾರು ಹಂಗಾಮಿನ ಬೆಳೆ ಕಟಾವು ಮಾಡಿರುವ ರೈತರು, ಹಿಂಗಾರು ಹಂಗಾಮಿನಲ್ಲಿ ಬೆಳೆ ಬಿತ್ತನೆಗಾಗಿ ಜಮೀನು ಹದಗೊಳಿಸುತ್ತಿದ್ದಾರೆ. ಕೆಲ ರೈತರು, ಈಗಾಗಲೇ ಬಿತ್ತನೆಯನ್ನೂ ಮಾಡಿ ಮುಗಿಸಿದ್ದಾರೆ.

ರೈತಾಪಿ ನಾಡು ಎನಿಸಿಕೊಂಡಿರುವ ಹಾವೇರಿ ಜಿಲ್ಲೆ, ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಬಹುತೇಕರು, ಕೃಷಿ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಮಳೆಯಾಶ್ರಿತ ಹಾಗೂ ನೀರಾವರಿ ನೆಚ್ಚಿಕೊಂಡು ಕೃಷಿ ಮಾಡಿ ಲಾಭಕ್ಕಿಂತ ನಷ್ಟ ಅನುಭವಿಸಿದ್ದೇ ಹೆಚ್ಚು ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ, ಸೋಯಾಬೀನ್ ಹಾಗೂ ಇತರೆ ಬೆಳೆ ಬೆಳೆದಿದ್ದ ರೈತರು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹಲವು ಕಡೆಗಳಲ್ಲಿ ಬೆಳೆ ಒಣಗಿ ಹೋಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ಪರಿಸ್ಥಿತಿಯಲ್ಲಿಯೇ ಮುಂಗಾರು ಹಂಗಾಮು ಮುಕ್ತಾಯಗೊಂಡಿದ್ದು, ಬೆಳೆ ಹಾನಿ ಅನುಭವಿಸಿರುವ ರೈತರು ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಅನುಭವಿಸಿದ ನಷ್ಟವನ್ನು ಹಿಂಗಾರು ಹಂಗಾಮಿನಲ್ಲಾದರೂ ಮರಳಿ ಪಡೆಯಬಹುದೆಂಬ ನಿರೀಕ್ಷೆಯಲ್ಲಿ ರೈತರು, ಬಿತ್ತನೆ ಪ್ರಕ್ರಿಯೆ ಆರಂಭಿಸಿದ್ದಾರೆ. ಮುಂಗಾರಿನಲ್ಲಿ ಬೆಳೆದಿದ್ದ ಬೆಳೆಯನ್ನು ಸಂಪೂರ್ಣವಾಗಿ ಕಟಾವು ಮಾಡಿರುವ ರೈತರು, ಅದೇ ಜಮೀನು ಹದಗೊಳಿಸಿ ಬಿತ್ತನೆ ಶುರು ಮಾಡಿದ್ದಾರೆ.

ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನ ಗ್ರಾಮಗಳಲ್ಲಿ ರೈತರು ಹಿಂಗಾರು ಹಂಗಾಮಿನ ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದೆವು. ಜಿಟಿ ಜಿಟಿ ಮಳೆಯಿಂದಾಗಿ ಇಡೀ ಬೆಳೆ ಹಾಳಾಯಿತು. ಗೋವಿನ ಜೋಳದ ದಂಟು ಸಹ ಜಾನುವಾರುಗಳಿಗೆ ಆಹಾರವಾಗಲಿಲ್ಲ. ಹಾಳಾದ ಬೆಳೆಯನ್ನೇ ಸಂಪೂರ್ಣವಾಗಿ ನಾಶ ಮಾಡಿ, ಅದೇ ಜಮೀನನ್ನು ಹದಗೊಳಿಸಿದ್ದೇವೆ. ಹಿಂಗಾರಿನಲ್ಲಿ ಯಾವ ಬೆಳೆ ಸೂಕ್ತವೆಂದು ತಿಳಿದು, ಅದನ್ನು ಬಿತ್ತನೆ ಮಾಡಲು ಯೋಚಿಸಿದ್ದೇವೆ’ ಎಂದು ಚಿಕ್ಕಬಾಸೂರಿನ ರೈತ ಚಂದ್ರಪ್ಪ ತಿಳಿಸಿದರು.

‘ಗೋವಿನಜೋಳ ಹಾನಿಯಾದ ಬಗ್ಗೆ ವಿವರ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಯಿಂದ ಗುತ್ತಿಗೆ ನೌಕರರೊಬ್ಬರು ಜಮೀನಿಗೆ ಬಂದಿದ್ದರು. ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು, ಆ್ಯಪ್‌ನಲ್ಲಿ ಮಾಹಿತಿ ಪಡೆದು ಹೋಗಿದ್ದಾರೆ. ಇದಾದ ನಂತರ, ಯಾರೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ’ ಎಂದು ಹೇಳಿದರು.

ಜೋಳ, ಗೋವಿನಜೋಳಕ್ಕೆ ಬೇಡಿಕೆ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಹುತೇಕ ರೈತರು ಜೋಳ ಹಾಗೂ ಗೋವಿನಜೋಳ (ಮೆಕ್ಕೆಜೋಳ) ಬಿತ್ತನೆ ಮಾಡುತ್ತಾರೆ. ಹೀಗಾಗಿ, ಎರಡೂ ಬೆಳೆಯ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕೃಷಿ ಇಲಾಖೆ ಅಧೀನದಲ್ಲಿರುವ ರೈತ ಸಂಪರ್ಕ ಕೇಂದ್ರಗಳು (ಆರ್‌ಎಸ್‌ಕೆ) ಹಾಗೂ ಇತರೆಡೆ ಜೋಳ – ಗೋವಿನ ಜೋಳದ ಬೀಜಗಳ ವಿತರಣೆ ಶುರುವಾಗಿದೆ. ಬಿತ್ತನೆ ಆರಂಭಿಸಿರುವ ರೈತರು, ಆರ್‌ಎಸ್‌ಕೆಗೆ ಬಂದು ಬೀಜಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ 3.14 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮುಂಗಾರಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ (ಮೆಕ್ಕೆಜೋಳ) ಬೆಳೆಯಲಾಗಿತ್ತು. ಈ ಬಾರಿ ಹಿಂಗಾರು ಹಂಗಾಮಿನಲ್ಲೂ ಬಹುತೇಕ ರೈತರು, ಗೋವಿನಜೋಳ ಬಿತ್ತನೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ, ಗೋವಿನಜೋಳ ಬೀಜವನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೋಳ ಬಿತ್ತನೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. ಹೀಗಾಗಿ, ಜೋಳ ಬೀಜಗಳನ್ನೂ ಸಂಗ್ರಹಿಸಿಡಲಾಗಿದೆ. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆ ಶುರುವಾಗಿದೆ’ ಎಂದು ಹೇಳಿದರು.

ನೀರಾವರಿಯಲ್ಲಿ ಭತ್ತ ಬಿತ್ತನೆ: ಮಲೆನಾಡು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಸೆರಗಿನಲ್ಲಿರುವ ಹಾವೇರಿ ಜಿಲ್ಲೆಯ ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಭತ್ತದ ನಾಟಿ ಬಿತ್ತನೆ ಶುರವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರು, ಕಟಾವು ಆರಂಭಿಸಿದ್ದಾರೆ. ಕಟಾವು ಮುಗಿದ ನಂತರ, ಅದೇ ಜಮೀನಿನಲ್ಲಿ ಕೆಲವರು ಭತ್ತ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ.

ಬೆಳೆ ಪರಿವರ್ತನೆ ಮಾಡಿದರೆ ಅನುಕೂಲವೆಂದು ತಿಳಿದಿರುವ ಕೆಲ ರೈತರು, ಭತ್ತ ಕಟಾವು ಮಾಡಿದ ನಂತರ ಹಿಂಗಾರಿನಲ್ಲಿ ಗೋವಿನ ಜೋಳ ಹಾಗೂ ಹೆಸರು ಬಿತ್ತನೆ ಮಾಡಲು ಸಜ್ಜಾಗಿದ್ದಾರೆ.

ಹಾವೇರಿ ಜಿಲ್ಲೆಯು ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶಗಳ ಜೊತೆ ಗಡಿ ಹಂಚಿಕೊಂಡಿದೆ. ಆಯಾ ಮಣ್ಣು ಹಾಗೂ ಹವಾಮಾನಕ್ಕೆ ತಕ್ಕಂತೆ ರೈತರು ಕೃಷಿ ಮಾಡುತ್ತಿದ್ದಾರೆ. ಮುಂಗಾರಿನಲ್ಲಿ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಿಂಗಾರಿನಲ್ಲಿ ನೀರಾವರಿ ಆಶ್ರಿತ ಬೆಳೆಗಳನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಿದ್ದಾರೆ.

‘ಬೀಜ ಖರೀದಿಗೂ ಮುನ್ನ ಎಚ್ಚರ’

‘ಜಿಲ್ಲೆಯಲ್ಲಿ ಕಳಪೆ ಬೀಜ ಮಾರಾಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಹಿಂಗಾರಿನಲ್ಲಿ ಬೀಜಗಳನ್ನು ಖರೀದಿ ಮಾಡುವ ಮುನ್ನ ರೈತರು ಜಾಗೃತಿ ವಹಿಸಬೇಕು’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಕಳಪೆ ಮಟ್ಟದ ಗೋವಿನ ಜೋಳ ಹಾಗೂ ಜೋಳವನ್ನು ಪೊಟ್ಟಣದಲ್ಲಿ ಹಾಕಿ ಮಾರುವ ಜನರಿದ್ದಾರೆ. ‘ಕಡಿಮೆ ಹಣದಲ್ಲಿ ಹೆಚ್ಚು ಇಳುವರಿ’ ಎಂದು ಪ್ರಚಾರ ಮಾಡಿ ಕಳಪೆ ಬೀಜ ಮಾರುತ್ತಿದ್ದಾರೆ. ರೈತರು ಬೀಜ ಖರೀದಿಸುವ ಮುನ್ನ ಬೀಜಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಖರೀದಿ ಸಂದರ್ಭದಲ್ಲಿ ಕಡ್ಡಾಯವಾಗಿ ರಶೀದಿ ಪಡೆಯಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.