ADVERTISEMENT

ಹಾವೇರಿ | ಕುದುರೆ ಬೆನ್ನೇರಿ ಬಂದ ಸಾವು–ನೋವು!

ರಸ್ತೆ ಮಧ್ಯೆ ನಿಂತ ಅಶ್ವಕ್ಕೆ ಮತ್ತೊಂದು ಬಲಿ, ಕುದುರೆ ಸ್ಥಳಾಂತರಿಸಿ; ಮೃತರ ಪತ್ನಿ ಮನವಿ

ಎಂ.ಸಿ.ಮಂಜುನಾಥ
Published 17 ಸೆಪ್ಟೆಂಬರ್ 2019, 20:00 IST
Last Updated 17 ಸೆಪ್ಟೆಂಬರ್ 2019, 20:00 IST
ಪುಣೆ–ಹಾವೇರಿ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ನಿಂತಿರುವ ಕುದುರೆಗಳು
ಪುಣೆ–ಹಾವೇರಿ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ನಿಂತಿರುವ ಕುದುರೆಗಳು   

ಹಾವೇರಿ: ಹಾನಗಲ್–ಹಾವೇರಿ ರಸ್ತೆಯಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಕುದುರೆಗಳನ್ನು ಸ್ಥಳಾಂತರಿಸಿ ತಿಂಗಳೂ ಆಗಿರಲಿಲ್ಲ. ಈಗ ಅವುಮತ್ತೆ ರಸ್ತೆಗೆ ಬಂದು ದೊಡ್ಡ ಅನಾಹುತ ಸೃಷ್ಟಿಸಿವೆ. ಅಕ್ಕ–ಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡಿರುವುದಲ್ಲದೇ, ಸೆ.12ರ ರಾತ್ರಿ ಬೈಕ್‌ಗೆ ಅಡ್ಡ ಬಂದು ಟಿ.ಸಿ.ಫಕ್ಕೀರೇಗೌಡ (36) ಎಂಬುವರನ್ನೂ ಬಲಿ ಪಡೆದಿವೆ.

ಫಕ್ಕೀರೇಗೌಡ ಒಂದು ವರ್ಷದ ಹಾಗೂ ಎರಡೂವರೆ ವರ್ಷದ ಇಬ್ಬರು ಮಕ್ಕಳ ತಂದೆ. ಗಂಡನ ಸಾವಿನ ಸುದ್ದಿ ಕೇಳಿ ಅವರ ಪತ್ನಿ ಪೂಜಾ ಸಹ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಕುದುರೆಗಳಿಂದ ಸಂಭವಿಸುತ್ತಿರುವ ನಾಲ್ಕನೇ ಅಪಘಾತ ಇದಾಗಿದೆ. ಆದರೂ, ಅವುಗಳನ್ನು ಸ್ಥಳಾಂತರಿಸುವ ಜವಾಬ್ದಾರಿಯನ್ನು ಹೊರಲು ಯಾರೊಬ್ಬರೂ ಸಿದ್ಧರಿಲ್ಲ.

‘ಗಂಡ ಗಣೇಶ ವಿಸರ್ಜನೆಗೆಂದು ಪಕ್ಕದ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಅವರ ಸಾವು ಕುದುರೆಯ ಬೆನ್ನೇರಿ ಬಂತು. ನನ್ನ ಗಂಡನಿಗಾದ ಸ್ಥಿತಿ ಇನ್ಯಾರಿಗೂ ಆಗಬಾರದು. ಇನ್ನಾದರೂ ಪಂಚಾಯ್ತಿಯವರು ಅವುಗಳನ್ನು ಸ್ಥಳಾಂತರಿಸಬೇಕು’ ಎಂದು ಮೃತರ ಪತ್ನಿ ಪೂಜಾ ನೋವಿನಲ್ಲೂ ಕೈಮುಗಿದು ಮನವಿ ಮಾಡಿದರು.

ADVERTISEMENT

ಈ ದಿನವೇ ಸುತ್ತೋಲೆ

‘ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡಬಹುದು. ಆದರೆ, ಕುದುರೆಗಳನ್ನು ಎಲ್ಲಿಗೆ ಬಿಡುವುದು? ರಸ್ತೆ ಮಧ್ಯೆ ನಿಂತು ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಎಲ್ಲ ಪ್ರಾಣಿಗಳನ್ನೂ ಸ್ಥಳಾಂತರಿಸುವಂತೆ ನಗರಸಭೆಗೆ, ಪಂಚಾಯ್ತಿಗಳಿಗೆ ಪತ್ರ ಬರೆದು ಬರೆದು ನಮಗೂ ಸಾಕಾಗಿದೆ. ಜನ ಸಾಯುತ್ತಲೇ ಇದ್ದಾರೆ. ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ’ ಎಂದು ಹಾವೇರಿ ಎಸ್ಪಿ ಕೆ.ಜಿ.ದೇವರಾಜು ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು,‘ಗಣೇಶ ಮೂರ್ತಿಗಳ ವಿಸರ್ಜನೆ ಮುಗಿಯುತ್ತಿದ್ದಂತೆಯೇ ಇನ್‌ಸ್ಪೆಕ್ಟರ್ ಹಾಗೂ ಡಿವೈಎಸ್ಪಿಗಳ ಸಭೆ ಕರೆಯುತ್ತೇನೆ. ಕುದುರೆಗಳ ಮಾಲೀಕರ ಪತ್ತೆ ಮಾಡುವುದಕ್ಕೆ ಪ್ರತಿ ತಾಲ್ಲೂಕಿನಲ್ಲೂ ವಿಶೇಷ ತಂಡ ರಚಿಸುತ್ತೇನೆ. ಮಾಲೀಕರಿಗೆ ನೋಟಿಸ್ ಕೊಟ್ಟು, ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇನೆ. ಕುದುರೆಗಳಿರುವ ಜಾಗ ಗುರುತಿಸುವಂತೆ ಸೋಮವಾರವೇ ಪ್ರತಿ ಠಾಣೆಗೂ ಸುತ್ತೋಲೆ ಕಳುಹಿಸುತ್ತೇನೆ’ ಎಂದರು.

ಆಡೂರು ಕುದುರೆಗಳ ತಾಣ

‘ಕೆಲ ಕುರಿಗಾಹಿಗಳು ಟಾಟಾ ಏಸ್‌ ವಾಹನಗಳಲ್ಲಿ ಕುದುರೆಗಳನ್ನು ತುಂಬಿಕೊಂಡು ಬಂದಿದ್ದಾರೆ. ಅಲ್ಲಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಕುರಿಗಳನ್ನು ಮೇಯಿಸಿಕೊಂಡಿರುವ ಅವರು, ಕುದುರೆಗಳನ್ನು ಮಾತ್ರ ಮೇಯಲು ರಸ್ತೆಗೆ ಬಿಟ್ಟಿದ್ದಾರೆ. ಈಗಿನ ಅಪಘಾತದಲ್ಲಿ ಕುದುರೆ ಸಹ ಗಾಯಗೊಂಡು ಒಂದು ದಿನ ನರಳಾಡಿ ಸತ್ತಿದೆ. ಶಿಕ್ಷೆಯ ಭಯದಿಂದ ಯಾರೊಬ್ಬರೂ ಅದರ ಮಾಲೀಕರೆಂದು ಹೇಳಿಕೊಳ್ಳುತ್ತಿಲ್ಲ’ ಎಂದು ಆಡೂರು ಪೊಲೀಸರು ಹೇಳಿದರು.

ಕೃಷಿಕರಾದ ಫಕ್ಕೀರೇಗೌಡ, ಪತ್ನಿ–ಮಕ್ಕಳ ಜತೆ ಹಾನಗಲ್ ತಾಲ್ಲೂಕಿನ ಸಿಂಗಪುರ ಗ್ರಾಮದಲ್ಲಿ ನೆಲೆಸಿದ್ದರು. ಸೆ.12ರ ಸಂಜೆ 7 ಗಂಟೆಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಸಾಗುತ್ತಿದ್ದಾಗ ಒಮ್ಮೆಲೆ ಕುದುರೆ ಅಡ್ಡ ಬಂದಿತ್ತು. ಅದಕ್ಕೆ ಗುದ್ದಿ ಕೆಳಗೆ ಬಿದ್ದಾಗ ತಲೆಗೆ ಗಂಭೀರ ಪೆಟ್ಟಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮರುದಿನ ಬೆಳಿಗ್ಗೆ 6 ಗಂಟೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಅನಾಥರಾದರು ಅತ್ತಿಗೆ, ಮಕ್ಕಳು

‘ಒಂದೂರಿನಿಂದ ಓಡಿಸಿದರೆ ಕುದುರೆಗಳು ಮತ್ತೊಂದು ಊರಿಗೆ ಹೋಗುತ್ತವೆ. ಇದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಪೊಲೀಸರು, ನಗರಸಭೆ, ಪಂಚಾಯ್ತಿ ಸದಸ್ಯರು ಒಟ್ಟಾಗಿ ಪರಿಹಾರ ಹುಡುಕಬೇಕು. ಒಬ್ಬ ವ್ಯಕ್ತಿ ಸತ್ತರೆ, ಅದರಿಂದ ಆತನ ಕುಟುಂಬವೇ ಬೀದಿಗೆ ಬಿದ್ದಂತಾಗುತ್ತದೆ.ಈಗ ಅತ್ತಿಗೆ–ಇಬ್ಬರು ಪುಟ್ಟ ಮಕ್ಕಳೂ ಅನಾಥರಾಗಿದ್ದಾರೆ. ಅವರ ಬದುಕಿಗೆ ಯಾರು ದಿಕ್ಕು’ ಎನ್ನುತ್ತಾ ದುಃಖತಪ್ತರಾದರು ಮೃತರ ಸೋದರ ಭರಮಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.