
ಹಾವೇರಿ: ‘ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಮಠಗಳು ಸಂಸ್ಕಾರ ನೀಡುತ್ತಿವೆ. ಅದು ಕೇವಲ ಮಠಗಳ ಜವಾಬ್ದಾರಿಯಲ್ಲ. ಪ್ರತಿ ಮನೆಯಿಂದಲೇ ಮಕ್ಕಳಿಗೆ ಸಂಸ್ಕಾರ ಸಿಗಬೇಕು. ಇಂಥ ಸಂಸ್ಕಾರ ನೀಡುವಲ್ಲಿ ತಾಯಂದಿರ ಸ್ಥಾನ ದೊಡ್ಡದಿದೆ’ ಎಂದು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಶಿವಬಸವೇಶ್ವರ ಉಚಿತ ಪ್ರಸಾದ ನಿಲಯದ ಅಮೃತ ಮಹೋತ್ಸವ ಹಾಗೂ ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ತಾಯಿ ಎದೆಹಾಲು ಉಣಿಸುವ ಜೊತೆಯಲ್ಲಿಯೇ ಮಕ್ಕಳಿಗೆ ಒಳ್ಳೆಯ ಮಾತುಗಳನ್ನು ಹೇಳಬೇಕು. ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ ನೆಲೆಯೂರಬೇಕು. ತಾಯಿಯ ಸಂಸ್ಕಾರದಿಂದ ಬೆಳೆದ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ, ಇತರರಿಗೆ ಮಾದರಿಯಾಗುತ್ತಾರೆ. ಆಕಸ್ಮಾತ್ ತಾಯಿಯು ಕೆಟ್ಟದ್ದನ್ನು ಮನಸ್ಸಿನಲ್ಲಿ ಬಿತ್ತಿದ್ದರೆ, ಮಕ್ಕಳ ಭವಿಷ್ಯವೂ ಕೆಟ್ಟದಾಗುತ್ತದೆ’ ಎಂದರು.
‘ಇಂದಿನ ಪೋಷಕರು, ತಮ್ಮ ಮಕ್ಕಳು ವೈದ್ಯನಾಗಬೇಕು, ಎಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದಾರೆ. ನಮ್ಮ ಜನಪದರು, ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ನನಕಂದ, ಜ್ಯೋತಿಯೇ ಆಗು ಜಗಕೆಲ್ಲ’ ಎಂದು ಮಕ್ಕಳನ್ನು ಬೆಳೆಸುತ್ತಿದ್ದರು. ಅಂಥ ಸಂಸ್ಕಾರವನ್ನು ಇಂದಿನ ಮಕ್ಕಳಿಗೆ ನೀಡಬೇಕಿದೆ’ ಎಂದು ತಿಳಿಸಿದರು.
‘ಇಂದಿನ ಯುಗದಲ್ಲಿ ಕೈಯಲ್ಲಿ ಮೊಬೈಲ್ ಬಂದು, ಪುಸ್ತಕ ಓದುವ ಹಾಗೂ ಬರೆಯುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಆದರೆ, ಪುಸ್ತಕ ಓದಿದರೆ ಮನುಷ್ಯ ತಲೆಎತ್ತಿ ಓಡಾಡಬಹುದು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲೆಂದು ಹುಕ್ಕೇರಿಮಠದ ಶಾಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಆಗಿರುವ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಹಿಂಚಿಗೇರಿ ಅವರು ತಮ್ಮ ತಂದೆ–ತಾಯಿ ಹೆಸರಿನಲ್ಲಿ ‘ಅರಿವಿನ ಮನೆ ಗ್ರಂಥಾಲಯ’ ತೆರೆದಿರುವುದು ಶ್ಲಾಘನೀಯ. ಇಂದಿನ ಶಾಲೆಗಳಿಗೆ ಸುಸಜ್ಜಿತ ಕ್ರೀಡಾಂಗಣ, ಪ್ರಯೋಗಾಲಯ, ಗ್ರಂಥಾಲಯಗಳು ಬೇಕಿವೆ’ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನೂರು ವರ್ಷಗಳ ಹಿಂದೆ ಸಾಕ್ಷರತಾ ಪ್ರಮಾಣ ಶೇ 5ಕ್ಕಿಂತ ಹೆಚ್ಚಿರಲಿಲ್ಲ. ಅಂದು ಮಕ್ಕಳ ಶಿಕ್ಷಣದ ಬಗ್ಗೆ ತಂದೆ–ತಾಯಿಗೆ ಅರಿವಿರಲಿಲ್ಲ. ಊಟಕ್ಕೂ ಪರದಾಡುವ ಸ್ಥಿತಿಯಿತ್ತು. ಅವಾಗಲೇ ಸನ್ಯಾಸಿಗಳು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಜೋಳಿಗೆ ಹಿಡಿದು ಭಿಕ್ಷೆ ಬೇಡಿದರು. ಅಂಥ ಸನ್ಯಾಸಿಗಳ ಮಠದಲ್ಲಿ ಹುಕ್ಕೇರಿಮಠವು ಇಂದಿಗೂ ತನ್ನ ಕೆಲಸ ನಿಲ್ಲಿಸಿಲ್ಲ’ ಎಂದು ತಿಳಿಸಿದರು.
‘ಅಂದು ಭಾರತವನ್ನು ಹಸಿವಿನ ಬಡತನ ದೇಶವೆಂದು ತೆಗಳುತ್ತಿದ್ದರು. ಇದು ಜ್ಞಾನದ ದೇಶವೆಂದು ಹೊಗಳುತ್ತಿದ್ದಾರೆ. ಇದಕ್ಕೆಲ್ಲ ಜ್ಞಾನ ಸಂಪಾದನೆಯೇ ಕಾರಣ. ಆದರೆ, ಈಗ ನಾವು ಕೃತಕ ಬುದ್ಧಿಮತ್ತೆ ಕಾಲದಲ್ಲಿದ್ದೇವೆ. ಮಾಡಿದ ತಪ್ಪನ್ನು ತಿದ್ದಿಕೊಂಡು ನಮ್ಮೊಳಗಿನ ಮನಸ್ಸನ್ನು ಜಾಗೃತಗೊಳಿಸಬೇಕಿದೆ. ಸೇವೆ, ಭಕ್ತಿ, ಜ್ಞಾನ ಎಂಬ ಮೂರು ಹಂತವನ್ನು ಯಶಸ್ವಿಯಾಗಿ ಪೂರೈಸಿದರೆ ಮುಕ್ತ ಕಡೆ ಹೋಗುತ್ತೇವೆ. ಇಂದಿನ ಹಲವು ಯುವಜನತೆ ದುಶ್ಚಟಗಳ ದಾಸರಾಗುತ್ತಿದ್ದಾರೆ. ಈ ದುಶ್ಚಟಗಳನ್ನು ಬಿಟ್ಟರೆ ಮನಸ್ಸು ಹಾಗೂ ಮನೆಗಳು ಉದ್ಧಾರವಾಗುತ್ತವೆ. ದೇಶವೂ ಅಭಿವೃದ್ಧಿಯಾಗುತ್ತವೆ’ ಎಂದರು.
‘ನರಸೀಪುರದ ಅಂಬಿಗರ ಚೌಡಯ್ಯಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಶಾಸಕ ಯು.ಬಿ.ಬಣಕಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇದ್ದರು.
ಸರಿಗಮಪ ಖ್ಯಾತಿಯ ಬೀದರ್‌ನ ಶಿವಾನಿ ಶಿವದಾಸಸ್ವಾಮಿ ಹಿರೇಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
Quote - ಲಿಂಗೈಕ್ಯ ಶಿವಬಸವ ಶಿವಯೋಗಿಯವರು ಹಾಗೂ ಲಿಂ. ಶಿವಲಿಂಗ ಶಿವಯೋಗಿಯವರ ಸಂಗಮವೇ ಸದಾಶಿವ ಸ್ವಾಮೀಜಿಯವರು. ಭಕ್ತರನ್ನು ಜ್ಞಾನದ ಜೊತೆಯಲ್ಲಿ ಸಂಸ್ಕಾರದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಸಿದ್ಧಲಿಂಗ ಸ್ವಾಮೀಜಿ ತುಮಕೂರು ಸಿದ್ಧಗಂಗಾ ಮಠ
Quote - ನಮ್ಮ ದೇಶದ ಪಾರಂಪರಿಕ ಬಂಡವಾಳವೇ ಭಕ್ತಿ. ಕಾಲ ಕಾಲಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಲು ಭಕ್ತಿಯ ಚಳವಳಿಗಳು ನಡೆದಿವೆ. ಅಜ್ಞಾನದಲ್ಲಿದ್ದಾಗ ಜ್ಞಾನ ಕೊಟ್ಟಿದಕ್ಕಾಗಿ ಹುಕ್ಕೇರಿಮಠದ ಹತ್ತಿರವೇ ಭಕ್ತಿಯ ಹೊಳೆ ಹರಿಯುತ್ತಿದೆ ಬಸವರಾಜ ಬೊಮ್ಮಾಯಿ ಸಂಸದ
Quote - ಸಿದ್ಧಗಂಗಾ ಆದಿಚುಂಚನಗಿರಿ ಕೊಪ್ಪಳ ಮಠದಿಂದ ಪ್ರೇರಣೆ ಪಡೆಯುವ ಮೂಲಕ ಹುಕ್ಕೇರಿಮಠವೂ ಮುಂಬರುವ ದಿನಗಳಲ್ಲಿ ನೈಜ ದೇವಾಲಯವಾಗಿ ಭಕ್ತರನ್ನು ಶಿಕ್ಷಣವಂತರಾಗಿ ಸಂಸ್ಕಾರವಂತರನ್ನಾಗಿ ಮಾಡಲಿ ಎಚ್.ಕೆ. ಪಾಟೀಲ ಸಚಿವ
Cut-off box - ‘ದಾಸೋಹ ಇಲ್ಲದಿದ್ದರೆ ದನ ಮೇಯಿಸುವ ಕೆಲಸ‘ ‘ಕರ್ನಾಟಕದಲ್ಲಿ ವೀರಶೈವ ಮಠದವರು ದಾಸೋಹ ಪರಂಪರೆ ಮಾಡದಿದ್ದರೆ ಹಿಂದುಳಿದ ವರ್ಗದವರು ಹಾಗೂ ಲಿಂಗಾಯತರು ಇಂದಿಗೂ ದನ ಮೇಯಿಸುವ ಕೆಲಸಕ್ಕೆ ಹೋಗಬೇಕಿತ್ತು ಎಂಬ ಬಗ್ಗೆ ಇತ್ತೀಚೆಗೆ ಸದನದಲ್ಲೇ ಪ್ರಸ್ತಾಪವಾಗಿದೆ. ಜ್ಞಾನ ದಾಸೋಹ ನೀಡಿದ್ದಕ್ಕೆ ನಾವೆಲ್ಲರೂ ಇಂದು ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದೇವೆ. ಇದಕ್ಕೆಲ್ಲ ವೀರಶೈವ ಲಿಂಗಾಯತ ಮಠಗಳು ಕಾರಣ’ ಎಂದು ಚಿತ್ರದುರ್ಗ ಮುರುಘಾಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಸಮಾರಂಭದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.