ಹಾವೇರಿ: ‘ಕೆಲ ಶಾಲಾ ಪ್ರದೇಶಗಳಲ್ಲಿ ಚಾಕೊಲೆಟ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಮಾರಲಾಗುತ್ತಿದೆ. ಇದರಿಂದ ಮಕ್ಕಳ ಹುಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ. ಸದಾನಂದಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಪೊಲೀಸ್, ಜಿಲ್ಲಾ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ‘ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಚಾಕೊಲೆಟ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಶಿಕ್ಷಕರು ಹಾಗೂ ಸಹಪಾಠಿಗಳು, ಸಂಬಂಧಪಟ್ಟವರಿಗೆ ವರದಿ ನೀಡಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಎಲ್ಲರೂ ಕೈಜೋಡಿಸಬೇಕು. ಮಾನವ ಹಕ್ಕುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು’ ಎಂದರು.
‘ಮನುಷ್ಯ ಹುಟ್ಟಿನಿಂದಲೇ ಮೂಲಭೂತ ಹಕ್ಕುಗಳು ಅನ್ವಯವಾಗುತ್ತವೆ. ಪ್ರತಿ ಪ್ರಜೆಗೂ ಘನತೆ ಹಾಗೂ ಗೌರವದಿಂದ ಬದುಕುವ ಹಕ್ಕಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲರೂ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ ಮಾತನಾಡಿ, ‘ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪೊಲೀಸರ ಮೇಲೆ ಸಾಕಷ್ಟು ಆರೋಪಗಳಿವೆ. ಆದರೆ, ನಾವು ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತೇವೆ. ಸಾಮಾನ್ಯ ಜನರಿಗಿಂತ ಬಂಧಿತ ವ್ಯಕ್ತಿಗಳಿಗೆ ಹಕ್ಕುಗಳು ಹೆಚ್ಚಾಗಿರುತ್ತವೆ. ವಿವಿಧ ಪ್ರಕರಣಗಳಲ್ಲಿ ಬಂಧಿಸಲಾದ ವ್ಯಕ್ತಿಗಳಿಗೆ ದಿನದ ಮೂರು ಸಮಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಕುಡಿಯಲು ಶುದ್ಧ ನೀರು ಪೂರೈಸಲಾಗುತ್ತದೆ. ಜೊತೆಗೆ, ಸೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತದೆ. ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿ, ‘ಮಾನವ ಹಕ್ಕುಗಳ ಉಲ್ಲಂಘನೆಯಾದರೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡುತ್ತದೆ. ಈಚೆಗೆ ರಿಯಾಲಿಟಿ ಶೋ ಒಂದರಲ್ಲಿದ್ದ ಸ್ವರ್ಗ ಹಾಗೂ ನರಕ ಪರಿಕಲ್ಪನೆಗೆ ಸಂಬಂಧಪಟ್ಟಂತೆ ಆಯೋಗ ವಾಹಿನಿಗೆ ನೋಟಿಸ್ ನೀಡಿತ್ತು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಹುಟ್ಟಿನಿಂದ ಸಾಯುವವರೆಗೂ ಎಲ್ಲ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ಅಸಮಾನತೆ ಹಾಗೂ ಜನಾಂಗೀಯ ತಾರತಮ್ಯ ಆಗಬಾರದು. ಬಾಲ ಕಾರ್ಮಿಕ, ವರದಕ್ಷಿಣೆ ಕಿರುಕುಳ, ಮಹಿಳೆಯರ ಮೇಲೆ ದೌರ್ಜನ್ಯ ಸೇರಿ ಹಲವು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ನಮ್ಮಿಂದ ಹಾಗೂ ಬೇರೆಯವರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.
ಸಹಾಯಕ ಕಾನೂನು ನೆರವು ಅಭಿರಕ್ಷಣಾ ವಕೀಲ ಎನ್.ಎನ್. ಡಿಳ್ಳೆಪ್ಪನವರ ಅವರು ಉಪನ್ಯಾಸ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅವರು ಮಾನವ ಹಕ್ಕುಗಳ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾಯಾಧೀಶರಾದ ಬಿ.ಆರ್. ಮುತಾಲಿಕದೇಸಾಯಿ ಇದ್ದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಎಲ್ಲರೂ ಕೈಜೋಡಿಸಿ ಮಾನವ ಹಕ್ಕು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಸಲಹೆ ಹಕ್ಕುಗಳ ಜೊತೆ ಜವಾಬ್ದಾರಿಯನ್ನೂ ಅರಿತುಕೊಳ್ಳಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.