ADVERTISEMENT

ಹಾವೇರಿ | ಮನೆ–ವ್ಯಾಪಾರ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆ

ಹಟ್ಟಿ ಲಕ್ಕವ್ವ ಪೂಜೆಗೆ ಸಾಮಗ್ರಿ ಖರೀದಿ | ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:22 IST
Last Updated 22 ಅಕ್ಟೋಬರ್ 2025, 6:22 IST
ಹಾವೇರಿ ನಗರಸಭೆ ಕಚೇರಿ ಎದುರಿನ ಮಾರುಕಟ್ಟೆಯಲ್ಲಿ ಜನರು ಹಟ್ಟಿ ಲಕ್ಕವ್ವ ಪೂಜೆಗಾಗಿ ಮಂಗಳವಾರ ಸಾಮಗ್ರಿ ಖರೀದಿಸಿದರು
ಹಾವೇರಿ ನಗರಸಭೆ ಕಚೇರಿ ಎದುರಿನ ಮಾರುಕಟ್ಟೆಯಲ್ಲಿ ಜನರು ಹಟ್ಟಿ ಲಕ್ಕವ್ವ ಪೂಜೆಗಾಗಿ ಮಂಗಳವಾರ ಸಾಮಗ್ರಿ ಖರೀದಿಸಿದರು   

ಹಾವೇರಿ: ದೀಪಾವಳಿ ಹಬ್ಬದ ಎರಡನೇ ದಿನವಾದ ಮಂಗಳವಾರ ಅಮವಾಸ್ಯೆಯಂದು ಜಿಲ್ಲೆಯಾದ್ಯಂತ ಹಲವರು ಲಕ್ಷ್ಮಿ ಪೂಜೆ ಮಾಡಿ ಇಷ್ಪಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಹಬ್ಬದ ಮೊದಲ ದಿನವಾದ ಸೋಮವಾರ, ನೀರು ತುಂಬುವ ಸಂಪ್ರದಾಯವನ್ನು ಜನರು ಆಚರಿಸಿದರು. ಮಂಗಳವಾರ ಜಿಲ್ಲೆಯ ವ್ಯಾಪಾರಿಗಳು, ತಮ್ಮ ಅಂಗಡಿ ಹಾಗೂ ವ್ಯಾಪಾರ ಸ್ಥಳದಲ್ಲಿ ಶ್ರದ್ಧಾ–ಭಕ್ತಿಯಿಂದ ಲಕ್ಷ್ಮಿ ಪೂಜೆ ನೆರವೇರಿಸಿದರು. ಪೂಜೆ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಿದರು.

ಕೆಲ ಮನೆಗಳಲ್ಲಿಯೂ ವಿಶೇಷ ಅಲಂಕಾರ ಮಾಡಿ ಲಕ್ಷ್ಮಿ ಪೂಜೆ ನಡೆಸಲಾಯಿತು. ಸಂಬಂಧಿಕರು, ಪರಿಚಯಸ್ಥ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಉಂಡಿ ತುಂಬುವ ಸಂಪ್ರದಾಯವೂ ನಡೆಯಿತು.

ADVERTISEMENT

ಹಬ್ಬದ ದಿನಗಳು ಬಾಕಿ ಇರುವಾಗಲೇ ವ್ಯಾಪಾರಿಗಳು, ತಮ್ಮ ವ್ಯಾಪಾರ ಸ್ಥಳಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿದಿದ್ದರು. ಸೋಮವಾರ ರಾತ್ರಿಯಿಂದಲೇ ಲಕ್ಷ್ಮಿಪೂಜೆಗೆ ಸಿದ್ಧತೆ ಮಾಡುತ್ತಿದ್ದರು. ಬಾಳೆಕಂಬ, ಮಾವಿನ ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಸಿದ್ಧಪಡಿಸಿ, ಅದರಲ್ಲಿಯೇ ಲಕ್ಷ್ಮಿ ಪ್ರತಿರೂ‍ಪ ಪ್ರತಿಷ್ಠಾಪಿಸಿದ್ದರು.

ಮನೆಗಳಲ್ಲಿಯೂ ಲಕ್ಷ್ಮಿ ಪೂಜೆಗೆ ಹಬ್ಬದ ಮುನ್ನಾದಿನವೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮನೆಗಳ ಎದುರು ರಂಗೋಲಿ ಹಾಕಿ ಹೂವಿನಿಂದ ಅಲಂಕರಿಸಲಾಗಿತ್ತು. ಕಿರಾಣಿ, ತರಕಾರಿ, ಎಗ್‌ರೈಸ್, ತಳ್ಳುಗಾಡಿ, ಬೇಕರಿ, ಹೋಟೆಲ್‌, ಪೆಟ್ರೋಲ್ ಬಂಕ್‌, ಸ್ಟುಡಿಯೊ, ಪ್ರೀಟಿಂಗ್ ಪ್ರೆಸ್, ಗ್ಯಾರೇಜ್, ಖಾಸಗಿ ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆ ಆಯೋಜಿಸಲಾಗಿತ್ತು.

ನೋಟುಗಳ ಮಾಲೆ ಮಾಡಿದ್ದ ಕೆಲ ವ್ಯಾಪಾರಿಗಳು, ಮಂಟಪಕ್ಕೆ ಕಟ್ಟಿದ್ದರು. ಹೂವು–ಹಣ್ಣುಗಳನ್ನು ಇರಿಸಿದ್ದರು. ಮಧ್ಯಾಹ್ನ ದೇವರಿಗೆ ನೈವೇದ್ಯ ಮಾಡಿದರು. ವರ್ಷಪೂರ್ತಿ ಲೆಕ್ಕ ಬರೆಯಲು ಬಳಸಿದ್ದ ಪುಸ್ತಕವನ್ನು ಬದಲಾಯಿಸಿ, ಹೊಸ ಪುಸ್ತಕಕ್ಕೆ ಪೂಜೆ ಮಾಡಿದರು. ಪೂಜೆಯ ನಂತರ, ಪರಿಚಯಸ್ಥರು ಹಾಗೂ ಆತ್ಮಿಯರನ್ನು ಅಂಗಡಿಗಳಿಗೆ ಆಹ್ವಾನಿಸಿ ಸಿಹಿ ವಿತರಿಸಿದರು.

‍ಪೂಜೆ ನಿಮಿತ್ತ ಮನೆಗಳಲ್ಲಿ ವಿಶೇಷ ಭೋಜನ ಸಿದ್ಧಪಡಿಸಲಾಗಿತ್ತು. ಬಹುತೇಕ ಮನೆಗಳಲ್ಲಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಆಹ್ವಾನಿಸಿ ಸಾಮೂಹಿಕ ಭೋಜನ ಸವಿಯಲಾಯಿತು.

ಪಟಾಕಿ ಖರೀದಿಯೂ ಜೋರು: ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ತೆರೆದಿರುವ ಪಟಾಕಿ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರವೂ ಜೋರಾಗಿತ್ತು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು, ಮಳಿಗೆಗಳಿಗೆ ಬಂದು ಪಟಾಕಿ ಖರೀದಿಸಿ ಕೊಂಡೊಯ್ದರು. ಪ್ರತಿಯೊಂದು ಮಳಿಗೆಯಲ್ಲೂ ಜನಸಂದಣಿ ಕಂಡುಬಂತು.

ಮಾರುಕಟ್ಟೆಗೆ ಬಂದ ಜನರು, ಬಾಳೆ ದಿಂಡು, ಮಾವಿನ ತೋರಣ, ಕಬ್ಬು, ದಂಟು, ಹೂವು, ಹಣ್ಣು ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದರು. ಸಗಣಿಯಿಂದ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪನೆ ಮಾಡುವ ಸಂಪ್ರದಾಯವಿದೆ. ಹೀಗಾಗಿ, ಒಂದು ದಿನ ಮುಂಚೆಯೇ ಹಲವರು ಸಗಣಿಯನ್ನು ಸಂಗ್ರಹಿಸಿಟ್ಟುಕೊಂಡರು.

ನಗರದಲ್ಲಿ ಆಗಾಗ ಮಳೆಯಾಗಿದ್ದರಿಂದ, ಬೀದಿಬದಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು. ಮಳೆಯಲ್ಲಿಯೇ ವ್ಯಾಪಾರಿಗಳು, ವಸ್ತುಗಳನ್ನು ಮಾರಿದರು. 

ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ವಿಶೇಷತೆಯಲ್ಲಿ ಒಂದಾದ, ಹೋರಿ ಬೆದರಿಸುವ ಸ್ಪರ್ಧೆಗೂ ಹಲವು ಕಡೆಗಳಲ್ಲಿ ತಯಾರಿ ನಡೆದಿದೆ. ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಹಲವು ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಲಿದೆ. ಹಾವೇರಿಯಲ್ಲಿಯೂ ಸ್ಪರ್ಧೆ ಆಯೋಜಿಸಲು ಸಂಘಟಕರು ತಯಾರಿ ಮಾಡಿಕೊಂಡಿದ್ದಾರೆ.

ಹಾವೇರಿ ನಗರಸಭೆ ಕಚೇರಿ ಎದುರಿನ ಮಾರುಕಟ್ಟೆಯಲ್ಲಿ ಜನರು ಹಟ್ಟಿ ಲಕ್ಕವ್ವ ಪೂಜೆಗಾಗಿ ಮಂಗಳವಾರ ಅಗತ್ಯ ವಸ್ತುಗಳನ್ನು ಖರೀದಿಸಿದರು
ಹಾವೇರಿಯ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಲಕ್ಷ್ಮಿ ಪೂಜೆಗೆಂದು ವಿಶೇಷ ಅಲಂಕಾರ ಮಾಡಿರುವುದು

ಹಟ್ಟಿ ಲಕ್ಕವ್ವ ಪೂಜೆ ಇಂದು ದೀಪಾವಳಿ ಹಬ್ಬದ ಕೊನೆಯ ದಿನವಾದ ಶನಿವಾರ ಹಟ್ಟಿಲಕ್ಕಮ್ಮ ಪೂಜೆ ನಡೆಸಲು ಜನರು ತಯಾರಿ ಮಾಡಿಕೊಂಡಿದ್ದಾರೆ. ಮಂಗಳವಾರವೂ ಹಾವೇರಿಯ ನಗರಸಭೆ ಬಳಿ ಪೂಜೆ ಸಾಮಗ್ರಿಗಳ ಮಾರಾಟ ಜೋರಾಗಿತ್ತು.