
ಹಾವೇರಿ: ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ವರ್ಷಗಟ್ಟಲೇ ವಾಸವಿದ್ದರೂ ಮಾಲೀಕ ಹಕ್ಕಿನಿಂದ ವಂಚಿತರಾಗಿದ್ದ ಜನರಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡುತ್ತಿದ್ದು, ಇದಕ್ಕಾಗಿ ರಾಜ್ಯದಾದ್ಯಂತ 2.29 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಅತೀ ಹೆಚ್ಚು ಸಂಖ್ಯೆಯಲ್ಲಿ ಹಕ್ಕುಪತ್ರಕ್ಕೆ ಮಂಜೂರಾತಿ ನೀಡಿದ ರಾಜ್ಯದ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.
ಅದೇ ರೀತಿ ಅತೀ ಹೆಚ್ಚು ಅರ್ಜಿದಾರರ ಹೆಸರಿನಲ್ಲಿ ಇ–ಸ್ವತ್ತು ಆಸ್ತಿ ಸಂಖ್ಯೆ (ಪ್ರಾಪರ್ಟಿ ಐಡಿ) ಸೃಷ್ಟಿಸಿ ನೋಂದಣಿ ಹಾಗೂ ಇ–ಸ್ವತ್ತು ದಾಖಲೆ ಸೃಷ್ಟಿಸಲು ಮುಂದಿನ ಹಂತಕ್ಕೆ ಕಳುಹಿಸಿದ ಸಾಧನೆಯಲ್ಲೂ ಜಿಲ್ಲೆ ಮುಂದಿದೆ.
ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ವರ್ಷಗಟ್ಟಲೇ ವಾಸವಿದ್ದರೂ ಮಾಲೀಕ ಹಕ್ಕಿನಿಂದ ವಂಚಿತರಾಗಿದ್ದ ಜನರಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡುತ್ತಿದ್ದು, ಇದಕ್ಕಾಗಿ ರಾಜ್ಯದಾದ್ಯಂತ ಪ್ರಸಕ್ತ ಜನವರಿ 31ರ ವರೆಗೆ 2.29 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 28,496 ಮಂದಿ ಅರ್ಜಿ ನೀಡಿದ್ದರು. ಇವುಗಳನ್ನು ಸಮರ್ಪಕವಾಗಿ ಪರಿಶೀಲಿಸಿದ್ದ ಹಾವೇರಿ ಜಿಲ್ಲೆಯ ತಹಶೀಲ್ದಾರ್‌ಗಳು, 22,187 ಅರ್ಜಿದಾರರ ಹಕ್ಕುಪತ್ರಗಳಿಗೆ ಮಂಜೂರಾತಿ ಮಾಡಿಕೊಟ್ಟಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು, ಹಾನಗಲ್ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಹಕ್ಕುಪತ್ರ ವಿತರಣೆ ಕೆಲಸ ಭರದಿಂದ ಸಾಗಿದೆ. ಇದೇ ಫೆ. 13ರಂದು ಹಾವೇರಿಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತಯಾರಿ ನಡೆದಿದೆ. ಸಮಾವೇಶ ನಡೆಯುವ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಹಕ್ಕುಪತ್ರ ತಯಾರಿ ಕೆಲಸ ಚುರುಕಿನಿಂದ ನಡೆದಿದೆ.
ಅರ್ಹ ಫಲಾನುಭವಿಗಳು ನೀಡುವ ಅರ್ಜಿಗಳನ್ನು ತಹಶೀಲ್ದಾರ್ ಅವರು ಪರಿಶೀಲನೆ ಮಾಡಿ, ಹಕ್ಕುಪತ್ರಕ್ಕೆ ಅನುಮತಿ ನೀಡುತ್ತಿದ್ದಾರೆ. ನಂತರ, ಉಪ ನೋಂದಣಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಹ ಫಲಾನುಭವಿಗಳ ಹೆಸರಿನಲ್ಲಿ ಅಂತಿಮವಾಗಿ ಇ–ಖಾತಾ ನೀಡಲಾಗುತ್ತಿದೆ.
‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಹಕ್ಕುಪತ್ರ ವಿತರಣೆ ಕೆಲಸ ನಡೆಯುತ್ತಿದೆ. ಇದುವರೆಗೂ ರಾಜ್ಯದಲ್ಲಿ 2.29 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 21,715 ಅರ್ಜಿಗಳ ಡಾಟಾ ಎಂಟ್ರಿ ಬಾಕಿಯಿದ್ದು, ಉಳಿದ ಅರ್ಜಿಗಳ ಪರಿಶೀಲನೆ ನಡೆದಿದೆ. 1,88,251 ಅರ್ಜಿಗಳಿಗೆ ತಹಶೀಲ್ದಾರ್ ಅವರು ಹಕ್ಕುಪತ್ರದ ಮಂಜೂರಾತಿ ನೀಡಿದ್ದರು. 1,79,140 ಅರ್ಜಿಗಳನ್ನು ಇ–ಸ್ವತ್ತು ಸೃಷ್ಟಿಗೆ ಶಿಫಾರಸ್ಸು ಮಾಡಲಾಗಿದೆ. ಅದರಲ್ಲಿ ಈಗಾಗಲೇ 1,48,001 ಅರ್ಜಿದಾರರ ಹೆಸರಿಗೆ ಇ–ಸ್ವತ್ತು ಆಸ್ತಿ ಸಂಖ್ಯೆ ಸೃಷ್ಟಿಸಿ ಮುಂದಿನ ಹಂತಕ್ಕೆ ಕಳುಹಿಸಲಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ರಾಜ್ಯದಲ್ಲಿ 8,918 ಅರ್ಜಿಗಳು ಗ್ರಾಮ ಲೆಕ್ಕಾಧಿಕಾರಿ ಬಳಿ ಬಾಕಿಯಿವೆ. 14,340 ಅರ್ಜಿಗಳು ತಹಶೀಲ್ದಾರ್ ಬಳಿ ಪರಿಶೀಲನೆಗೆ ಬಾಕಿಯಿವೆ. ರಾಜ್ಯದಲ್ಲಿ 57,283 ಅರ್ಜಿಗಳು ತಿರಸ್ಕೃತಗೊಂಡಿವೆ. ಕಾವೇರಿ ತಂತ್ರಾಂಶದಲ್ಲಿ 79,595 ಅರ್ಜಿಗಳು ನೋಂದಣಿಯಾಗಿದ್ದು, ಅದರಲ್ಲಿ 60,950 ಅರ್ಜಿಗಳಿಗೆ ಇ–ಸ್ವತ್ತು ನೋಟಿಸ್ ಜಾರಿಯಾಗಿದೆ. 52,620 ಅರ್ಜಿದಾರರಿಗೆ ಅವರ ಹೆಸರಿನಲ್ಲಿ ಇ–ಖಾತಾ ಮಾಡಿಕೊಡಲಾಗಿದೆ’ ಎಂದು ಅವರು ಹೇಳಿದರು.
ವ್ಯಾಜ್ಯಗಳಿಗೂ ತ್ವರಿತ ಪರಿಹಾರ: ಸರ್ಕಾರ ಹಕ್ಕು ಪತ್ರ ನೀಡಲು ಮುಂದಾದ ಕೆಲ ಜಾಗದ ಮೂಲ ಮಾಲೀಕರು ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದಿದ್ದಾರೆ. ಉಪವಿಭಾಗಾಧಿಕಾರಿ ಸಮ್ಮುಖದಲ್ಲಿಯೂ ವಿಚಾರಣೆ ನಡೆಯುತ್ತಿದೆ. ಇದಕ್ಕಾಗಿ ಫಲಾನುಭವಿಗಳು, ಕಾರ್ಯಕಲಾಪಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಅರ್ಹರಿಗೆ ತ್ವರಿತವಾಗಿ ಹಕ್ಕುಪತ್ರ ನೀಡಲು ಜಿಲ್ಲಾಡಳಿತದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಲವರಿಗೆ ಹಕ್ಕುಪತ್ರ ವಿತರಿಸಲಾಗಿದ್ದು ಫೆ. 13ರಂದು ಮತ್ತಷ್ಟು ಅರ್ಹರಿಗೆ ಹಕ್ಕುಪತ್ರ ನೀಡಲಾಗುತ್ತಿದೆವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಹಾನಗಲ್ ತಾಲ್ಲೂಕು ಸಾಧನೆ
‘ರಾಜ್ಯದ ತಾಲ್ಲೂಕುಗಳ ಪೈಕಿ ಹಾನಗಲ್ ತಾಲ್ಲೂಕು ಹಕ್ಕುಪತ್ರ ಪ್ರಕ್ರಿಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ತಾಲ್ಲೂಕಿನ ಸುಮಾರು 10000 ಅರ್ಜಿಗಳ ಪೈಕಿ 7470 ಅರ್ಜಿದಾರರಿಗೆ ಈಗಾಗಲೇ ಹಕ್ಕುಪತ್ರ ಮಂಜೂರಾತಿ ನೀಡಲಾಗಿದೆ. ಉಳಿದವರಿಗೂ ಸದ್ಯದಲ್ಲೇ ಹಕ್ಕುಪತ್ರ ಮಂಜೂರಾತಿ ನೀಡಲು ಪ್ರಕ್ರಿಯೆ ನಡೆದಿದೆ’ ಎಂದು ಹಾನಗಲ್ ತಹಶೀಲ್ದಾರ್ ರೇಣುಕಾ ತಿಳಿಸಿದರು. ‘ಹಕ್ಕುಪತ್ರ ಮಂಜೂರಾತಿ ನಂತರ ಆಸ್ತಿ ಸಂಖ್ಯೆ ಸೃಷ್ಟಿಸುತ್ತೇವೆ. ನಂತರ ಸೇಲ್ ಡೀಡ್‌ನಲ್ಲಿ ನಮ್ಮ ಸಹಿ ಸಮೇತ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗುತ್ತದೆ. ನಂತರ ಸಂಬಂಧಪಟ್ಟ ಪಂಚಾಯಿತಿ ಮೂಲಕ ಇ–ಸ್ವತ್ತು ಬರುತ್ತದೆ. ಕೊನೆಯದಾಗಿ ಇ–ಖಾತಾ ದೊರೆಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.