ADVERTISEMENT

ಹಾವೇರಿ | ‘ಪೊಲೀಸರಿಂದಾಗಿ ಬದುಕು ಶಾಂತಿಯುತ’

ಪೊಲೀಸ್ ಹುತಾತ್ಮ ದಿನಾಚರಣೆ | ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಂದ ಸ್ಮಾರಕಕ್ಕೆ ನಮನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:24 IST
Last Updated 22 ಅಕ್ಟೋಬರ್ 2025, 6:24 IST
ಹಾವೇರಿ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ನ್ಯಾಯಾಧೀಶರಾದ ಬಿರಾದಾರ ಎನ್.ದೇವೆಂದ್ರಪ್ಪ ಅವರು ಪುಷ್ಪ ನಮನ ಸಲ್ಲಿಸಿದರು
ಹಾವೇರಿ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ನ್ಯಾಯಾಧೀಶರಾದ ಬಿರಾದಾರ ಎನ್.ದೇವೆಂದ್ರಪ್ಪ ಅವರು ಪುಷ್ಪ ನಮನ ಸಲ್ಲಿಸಿದರು   

ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದ ವೇಳೆ ಮಡಿದ ಹುತಾತ್ಮರಿಗೆ ಮಂಗಳವಾರ ವಿಶೇಷ ಗೌರವ ಸಲ್ಲಿಸಲಾಯಿತು.

ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ದಿನಾಚರಣೆ ನಿಮಿತ್ತ ಹುತಾತ್ಕ ಸ್ಮಾರಕವನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ಎನ್.ದೇವೆಂದ್ರಪ್ಪ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಪೊಲೀಸರ ಮೇಲೆ ಸಾಕಷ್ಟು ಅಪವಾದಗಳಿವೆ. ಆದರೆ, ಪೊಲೀಸ್ ವ್ಯವಸ್ಥೆಯಿಂದಲೇ ನಮ್ಮೆಲ್ಲದ ಬದುಕು ಶಾಂತಿಯುತವಾಗಿದೆ. ಇದನ್ನು ಜನರು ಅರಿತುಕೊಳ್ಳಬೇಕು. ಪೊಲೀಸ್ ಹುತಾತ್ಮ ದಿನವನ್ನು ಸಮಾಜದ ಪ್ರತಿಯೊಬ್ಬರು ಆಚರಿಸುವಂತಾಗಬೇಕು’ ಎಂದರು.

ADVERTISEMENT

‘ಪೊಲೀಸ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗೂ ಅವರ ಸೇವಾ ಅವಧಿಯಲ್ಲಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು. ಪೋಲಿಸರು ಪರಸ್ಪರ ಒಗ್ಗಟ್ಟಿನಿಂದ ಇರಬೇಕು. ಆಗ ಮಾತ್ರ ಸಮಾಜದಲ್ಲಿ ಕಠಿಣ ನಿಲುವುಗಳನ್ನು ತೆಗೆದುಕೊಂಡು ಧೈರ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ಪೊಲೀಸರು ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ’ ಎಂದರು.

ಜಿಲ್ಲಾ ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿ, ‘ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯವರ ಸ್ಮರಣಾರ್ಥಕವಾಗಿ ದೇಶದಾದ್ಯಂತ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಸ್‌ಪಿ ಕರಣಸಿಂಗ್ ಅವರು ಲಡಾಕ ಗಡಿ ಪ್ರಾಂತ್ಯದಲ್ಲಿ ಚೀನಿ ಸೈನಿಕರ ವಿರುದ್ಧ ಅತೀ ಕಡಿಮೆ ಸೈನಿಕರೊಂದಿಗೆ ಹೋರಾಡಿ ಮಡಿದಿದ್ದರಿಂದ ಅವರ ಸ್ಮರಣಾರ್ಥವೂ ಈ ದಿನ ಆಚರಿಸುತ್ತಿದ್ದೇವೆ’ ಎಂದರು.

ಮೂರು ಸುತ್ತು ಗಾಳಿಯಲ್ಲಿ ಗುಂಡು: ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಮೌನಾಚರಣೆ ಮಾಡಲಾಯಿತು. ನಂತರ, ಪೊಲೀಸ್ ಬ್ಯಾಂಡ್ ಪ್ರದರ್ಶನ ಜರುಗಿತು.

ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ ಇದ್ದರು.

ಕೆರಿಮತ್ತೀಹಳ್ಳಿ ಮೈದಾನದಲ್ಲಿ ಕಾರ್ಯಕ್ರಮ ಹುತಾತ್ಮರ ಸ್ಮಾರಕಕ್ಕೆ ಹೂವಿನ ಅಲಂಕಾರ

‘ಕರ್ನಾಟಕದಲ್ಲಿ 8 ಪೊಲೀಸರು ಹುತಾತ್ಮ’

‘ಕರ್ನಾಟಕದಲ್ಲಿ 2024ರ ಸೆಪ್ಟೆಂಬರ್ 1ರಿಂದ 2025ರ ಆಗಸ್ಟ್ 31ರವರೆಗೆ 8 ಪೊಲೀಸರು ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ’ ಎಂದು ಎಸ್‌ಪಿ ಯಶೋಧಾ ವಂಟಗೋಡಿ ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದೇಶದಲ್ಲಿ 191 ಪೊಲೀಸರು ಕರ್ತವ್ಯದ ವೇಳೆ ಮರಣ ಹೊಂದಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.