ADVERTISEMENT

ಹಾವೇರಿ: ಕೈದಿಗಳ ಮನಪರಿವರ್ತನೆಗೆ ಸಾಹಿತ್ಯ ಕಮ್ಮಟ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:46 IST
Last Updated 19 ಜೂನ್ 2025, 14:46 IST
ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿರುವ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿದರು
ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿರುವ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿದರು   

ಹಾವೇರಿ: ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳ ಮನಪರಿವರ್ತನೆ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ಸಾಹಿತ್ಯ ಕಮ್ಮಟ’ ಹಮ್ಮಿಕೊಳ್ಳಲಾಗಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ತಾಲ್ಲೂಕಿನ ಕೆರಿಮತ್ತೀಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ಸಾಹಿತ್ಯ ಕಮ್ಮಟವನ್ನು ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಕೈದಿಗಳು ಜೈಲಿನಲ್ಲಿರುವ ಅವಧಿಯನ್ನು ಪರಿವರ್ತನೆಗೆ ಬಳಸಿಕೊಳ್ಳಬೇಕು. ಇದಕ್ಕಾಗಿ ಪುಸ್ತಕಗಳನ್ನು ಓದುವ ಮೂಲಕ ಅನುಭವಗಳನ್ನು ದಾಖಲಿಸಬೇಕು’ ಎಂದರು.

ADVERTISEMENT

‘ಪಂಪ, ಕುಮಾರವ್ಯಾಸ, ಕನಕದಾಸ, ಕುವೆಂಪು, ದ.ರಾ. ಬೇಂದ್ರೆ ಮೊದಲಾದವರು ಮಾನವೀಯ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅಂಥವರ ಕೃತಿಗಳನ್ನು ಓದುವುದರ ಮೂಲಕ ಮಾನವೀಯತೆ ಅಳವಡಿಸಿಕೊಳ್ಳಬೇಕು. ಹಾವೇರಿ ಜಿಲ್ಲೆಯು ಶರೀಫ, ಸರ್ವಜ್ಞ, ಕನಕದಾಸರಿಂದ ಪ್ರಸಿದ್ಧವಾಗಿದೆ. ‘ಕುಲ ಕುಲವೆಂದು ಹೊಡೆದಾಡದಿರಿ’ ಎಂದು 500 ವರ್ಷಗಳ ಹಿಂದೆಯೇ ಕನಕದಾಸರು ಹೇಳಿದ್ದಾರೆ. ಆದರೆ, ಇಂದು ನಾವೆಲ್ಲರೂ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಹಾಗೂ ಹೆಣ್ಣು–ಹೊನ್ನು–ಅಧಿಕಾರಕ್ಕಾಗಿ ಜಗಳವಾತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿ, ‘ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಅಪರಾಧಕ್ಕೆ ದಾರಿಯಾಗುತ್ತದೆ. ಮನುಷ್ಯರು ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಮೃದ್ಧವಾದ ಸಾಹಿತ್ಯದ ಓದಿನಿಂದ ಸಿಟ್ಟಿನ ನಿಯಂತ್ರಣ ಮತ್ತು ಸುಂದರ ಬದುಕು ಕಟ್ಟಿಕೊಳ್ಳಬಹುದು’ ಎಂದರು.

‘ನನ್ನ ತಂದೆಯೂ ಆಗಿದ್ದ ಕಥೆಗಾರ ಬೆಸಗರಹಳ್ಳಿ ರಾಮಣ್ಣ ಅವರು ಸಿಟ್ಟಿನ ಮನುಷ್ಯರಾಗಿದ್ದರು. ಸಾಹಿತ್ಯ ಓದದಿದ್ದರೆ, ಕ್ರಿಮಿನಲ್ ಆಗುತ್ತಿದ್ದೆ ಎಂಬುದಾಗಿ ನನಗೆ ಹೇಳುತ್ತಿದ್ದರು. ಜೈಲಿನಲ್ಲಿ ಆಯೋಜಿಸಿರುವ ಸಾಹಿತ್ಯ ಕಮ್ಮಟದ ಲಾಭವನ್ನು ಕೈದಿಗಳು ಪಡೆಯಬೇಕು’ ಎಂದು ಹೇಳಿದರು.

ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಜಾನಪದ ವಿವಿ ಕುಲಸಚಿವ ಸಿ.ಟಿ. ಗುರುಪ್ರಸಾದ್, ಜಿಲ್ಲಾ ಎಸ್ಪಿ ಅಂಶುಕುಮಾರ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ, ಅಕಾಡೆಮಿ ಸದಸ್ಯ ಸಂಚಾಲಕ ಮಲ್ಲಿಕಾರ್ಜುನ ಮಾನ್ಪಡೆ ಇದ್ದರು.

Highlights - ಜಿಲ್ಲಾ ಕಾರಾಗೃಹದಲ್ಲಿ ಆಯೋಜನೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗ ಕೈದಿಗಳಿಗೆ ಕನ್ನಡ ಸಾಹಿತ್ಯದ ಪರಿಚಯ

Quote - ಅಪರಾಧ ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ. ಕೈದಿಗಳು ಸಾಹಿತ್ಯವನ್ನು ಹೆಚ್ಚೆಚ್ಚು ಓದಬೇಕು ಬಿ.ಆರ್. ರವಿಕಾಂತೇಗೌಡ ಐಜಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.