ADVERTISEMENT

ಹಾವೇರಿ | ಮಹಾರಾಣಾ ಪ್ರತಾಪ್ ಸಿಂಗ್ ವೃತ್ತ ಅನಾವರಣ

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಾಸಕ ರುದ್ರಪ್ಪ ಲಮಾಣಿ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:13 IST
Last Updated 9 ಫೆಬ್ರುವರಿ 2026, 6:13 IST
ಹಾವೇರಿಯ ಹಾನಗಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ‘ಮಹಾರಾಣಾ ಪ್ರತಾಪ್ ಸಿಂಗ್’ ವೃತ್ತವನ್ನು ಬಸವಶಾಂತಲಿಂಗ ಸ್ವಾಮೀಜಿ ಭಾನುವಾರ ಅನಾವರಣಗೊಳಿಸಿದರು
ಹಾವೇರಿಯ ಹಾನಗಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ‘ಮಹಾರಾಣಾ ಪ್ರತಾಪ್ ಸಿಂಗ್’ ವೃತ್ತವನ್ನು ಬಸವಶಾಂತಲಿಂಗ ಸ್ವಾಮೀಜಿ ಭಾನುವಾರ ಅನಾವರಣಗೊಳಿಸಿದರು   

ಹಾವೇರಿ: ಇಲ್ಲಿಯ ಹಾನಗಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವೃತ್ತಕ್ಕೆ ‘ಮಹಾರಾಣಾ ಪ್ರತಾಪ್ ಸಿಂಗ್’ ಹೆಸರು ನಾಮಕರಣ ಮಾಡಲಾಗಿದ್ದು, ಈ ವೃತ್ತದ ಉದ್ಘಾಟನೆಯು ಭಾನುವಾರ ಸಂಭ್ರಮ–ಸಡಗರದಿಂದ ಜರುಗಿತು.

ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆಗೆ ಹೊಂದಿಕೊಂಡಿರುವ ವೃತ್ತದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಕಾಂಕ್ರಿಟ್ ಮೂಲಕ ಕಟ್ಟೆ ನಿರ್ಮಿಸಲಾಗಿದೆ. ಅದರಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಅವರ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಉದ್ಘಾಟನೆ ನಿಮಿತ್ತ ವೃತ್ತವನ್ನು ಹೂವಿನಿಂದ ಅಲಂಕರಿಸಲಾಗಿತ್ತು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ಮಹಾರಾಣಾ ಪ್ರತಾಪ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವೃತ್ತವನ್ನು ಉದ್ಘಾಟಿಸಿದರು.

ADVERTISEMENT

ಉದ್ಘಾಟನೆ ಬಳಿಕ ಆಶೀರ್ವಚನ ನೀಡಿದ ಬಸವಶಾಂತಲಿಂಗ ಸ್ವಾಮೀಜಿ, ‘ಮಹಾರಾಣಾ ಪ್ರತಾಪ್ ಸಿಂಗ್ ಅವರು, ಶ್ರೇಷ್ಠ ಸಿಸೋಡಿಯಾ ರಜಪೂತ ದೊರೆ. ಮೊಘಲ್ ಚಕ್ರವರ್ತಿ ಅಕ್ಬರ್‌ನ ವಿಸ್ತರಣಾ ನೀತಿಯನ್ನು ಎದುರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ. ಹಲ್ಡಿಘಾಟಿಯ ಯುದ್ಧದಲ್ಲಿ ಅಪಾರ ಧೈರ್ಯ ಪ್ರದರ್ಶಿಸಿದ ಅವರು, ಜೀವನಪೂರ್ತಿ ಮೊಘಲರಿಗೆ ಶರಣಾಗದೇ ರಾಜ್ಯದ ಗೌರವವನ್ನು ಎತ್ತಿ ಹಿಡಿದರು’ ಎಂದರು.

‘ಭಾರತೀಯ ಇತಿಹಾಸದಲ್ಲಿ ಶೌರ್ಯ, ಸ್ವಾಭಿಮಾನ ಮತ್ತು ದೇಶಭಕ್ತಿಯ ಸಾಕಾರಮೂರ್ತಿಯಾಗಿ ಮಹಾರಾಣಾ ಪ್ರತಾಪ್ ಅವರನ್ನು ಇಂದಿನ ಯುವಜನತೆ ಸ್ಮರಣೆ ಮಾಡಬೇಕು. ಅವರು ಯುವ ಜನಾಂಗಕ್ಕೆ ಪ್ರೇರಣೆಯಾಗಲಿ’ ಎಂದರು.

ರಜಪೂತ ಸಮಾಜದ ಅಧ್ಯಕ್ಷ ಲಕ್ಷ್ಮಣಸಿಂಗ್ ರಜಪೂತ ಮಾತನಾಡಿ, ‘ಮೊಘಲ್‌ರ ವಿರುದ್ಧ ಹೋರಾಡಿ ದೇಶಪ್ರೇಮ ಮೆರೆದ ಅಪ್ರತಿಮ ದೇಶಭಕ್ತ ಮಹಾರಾಣಾ ಪ್ರತಾಪ್ ಸಿಂಗ್ ಅವರು ಯುವಕರಿಗೆ ಮಾದರಿ. ಈಗ ಇವರ ಹೆಸರಿನಲ್ಲಿ ವೃತ್ತ ನಾಮಕರಣ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು’ ಎಂದರು.

ರಜಪೂತ ಸಮಾಜದ ಗೌರವಾಧ್ಯಕ್ಷ ಪ್ರಸನ್ನಸಿಂಗ್ ಧಾರವಾಡ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮೆಹರವಾಡೆ, ಚೇತಕ್ ಮಹಳಾ ರಜಪೂತ ಸಮಾಜದ ಅಧ್ಯಕ್ಷೆ ವೀಣಾಬಾಯಿ ಖಾರದ, ಮುಖಂಡರಾದ ನವೀನ್ ಸಿಂಗ್, ಸುನೀಲ್ ಸಿಂಗ್, ಅಶೋಕ ಸಿಂಗ್ ಕಹಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.