
ಪ್ರಜಾವಾಣಿ ವಾರ್ತೆ
ಹಾವೇರಿ: 63 ಮಠಗಳು ಹಾಗೂ ಶಾಖಾ ಮಠಗಳನ್ನು ಹೊಂದುವ ಮೂಲಕ ‘ಮರಿ ಕಲ್ಯಾಣ’ವೆಂದು ಪ್ರಸಿದ್ಧಿ ಪಡೆದಿರುವ ಹಾವೇರಿ ನಗರ, ಇದೀಗ ಸರ್ವಧರ್ಮಗಳ ‘ಧಾರ್ಮಿಕ’ ಕ್ಷೇತ್ರದ ನವ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ದುಶ್ಚಟಗಳಿಗೆ ದಾಸರಾಗಿ ಧಾರ್ಮಿಕ ಆಚರಣೆ ಹಾಗೂ ಸಂಸ್ಕಾರ ಮರೆಯುತ್ತಿರುವ ಜನರನ್ನು ಜಾಗೃತಗೊಳಿಸಲು ಸರ್ವಧರ್ಮದ ಗುರುಗಳು ಹಾವೇರಿಯಲ್ಲಿ ಸಂಚರಿಸುತ್ತಿದ್ದಾರೆ.
ನಗರದಲ್ಲಿ ಹಿಂದೂ, ಮುಸ್ಲಿಂ, ಜೈನ್, ಕ್ರೈಸ್ತ್ ಧರ್ಮದವರಿಂದ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದಾಗಿ ನಗರದಲ್ಲಿ ಸರ್ವಧರ್ಮಗಳ ಸಮಾಗಮವಾಗುತ್ತಿದ್ದು, ತಮ್ಮ ಧರ್ಮದ ಕಾರ್ಯಕ್ರಮಗಳಲ್ಲಿ ಜನರು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.
ಹುಕ್ಕೇರಿಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಜನರನ್ನು ದುಶ್ಚಟಗಳಿಂದ ದೂರ ಮಾಡಿ ಸಂಸ್ಕಾರವಂತರನ್ನಾಗಿಸಲು ಸದಾಶಿವ ಸ್ವಾಮೀಜಿಯವರು 75 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ.
ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ, ‘ಆಧ್ಯಾತ್ಮ ಪ್ರವಚನ’ ಮೂಲಕ ಸಮಾಜದ ಜನರಲ್ಲಿ ಧಾರ್ಮಿಕ ಆಚರಣೆ ಹಾಗೂ ಮಾನವೀಯ ಮೌಲ್ಯಗಳ ಜಾಗೃತಿ ಮೂಡಿಸುತ್ತಿದ್ದಾರೆ.
ಮುಸ್ಲಿಂ ಧರ್ಮಗುರುಗಳ ಪ್ರವಚನ: ಹಾವೇರಿಯ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ (ಹುಬ್ಬಳ್ಳಿ ಮಾರ್ಗ) ಜಾಗದಲ್ಲಿ ಡಿ. 20–21ರಂದು ಮುಸ್ಲಿಂ ಸಮುದಾಯದವರಿಗಾಗಿ ‘ಸುನ್ನಿ ತರಬೇತಿ ಇಜ್ತಿಮಾ’ ಪ್ರವಚನ ಹಮ್ಮಿಕೊಳ್ಳಲಾಗಿದೆ. 25 ವರ್ಷಗಳ ಬಳಿಕ ರಾಜ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಭಾರತದ ಪ್ರಮುಖ ಇಸ್ಲಾಮಿಕ್ ವಿದ್ವಾಂಸರು ಮತ್ತು ತಾಜುಶ್ ಶರಿಯಾ ಎಂದೇ ಪ್ರಸಿದ್ಧರಾದ ಗ್ರ್ಯಾಂಡ್ ಮುಫ್ತಿ ಅಖ್ತರ್ ರಜಾ ಖಾನ್ ಅವರ ಪುತ್ರರಾದ ಮುಫ್ತಿ ಮುಹಮ್ಮದ್ ಅಸ್ಜದ್ ರಜಾ ಖಾನ್ ಹಾಗೂ ಮುಫ್ತಿ ಜಿಯಾ ಉಲ್ ಮುಸ್ತಫಾ ಖಾದ್ರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಮುಹಮ್ಮದ್ ಹುಸ್ಸಾಮ್ ಅಹ್ಮದ್ ರಜಾ, ಮುಫ್ತಿ ಆಶಿಕ್ ಹುಸೈನ್ ಕಶ್ಮೀರಿ, ಮುಫ್ತಿ ಅಬು ಯೂಸೂಫ್ ಮುಹಮ್ಮದ್ ಕಾದ್ರಿ, ಮುಫ್ತಿ ಮುಹಮ್ಮದ್ ಶಾಹಿದ್ ರಜಾ ಅವರು ಹಾಜರಿರಲಿದ್ದಾರೆ. ಸಮುದಾಯದ ಹೆಣ್ಣು ಮಕ್ಕಳು ಹಾಗೂ ಪುರುಷರಿಗಾಗಿ ಪ್ರತ್ಯೇಕ ಪ್ರವಚನ ಇರಲಿದೆ.
ದೇಶ– ವಿದೇಶಗಳಲ್ಲಿ ಪ್ರವಚನಗಳಿಗೆ ಹೆಸರುವಾಸಿಯಾಗಿರುವ ಧರ್ಮಗುರುಗಳನ್ನು ನೋಡಲು 20 ಸಾವಿರ ಜನರು ಹಾವೇರಿಗೆ ಬರುವ ನಿರೀಕ್ಷೆಯಿದೆ.
ಜೈನ್ ಮುನಿಗಳ ನಿರಂತರ ಕಾರ್ಯಕ್ರಮ: ಜಿಲ್ಲೆಯಲ್ಲಿರುವ ಜೈನ್ ಸಮುದಾಯದವರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಹಾಗೂ ಸಂಸ್ಕಾರವಂತರನ್ನಾಗಿ ಮಾಡಲು ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.
ಜೈನ್ ಮಂದಿರದಲ್ಲಿ ಚಾತುರ್ಮಾಸ ಕಾರ್ಯಕ್ರಮ ನಡೆದಿತ್ತು. ಸೆ. 22ರಿಂದ 29ರವರೆಗೆ ಧಾರ್ಮಿಕ ಸಂಸ್ಕಾರ ಶಿಬಿರ ಜರುಗಿತು. ಇದೀಗ, ಡಿ. 12ರಿಂದ 20ರವರೆಗೂ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ಮಹೋತ್ಸವ ನಡೆಯುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮುಖಂಡರಿಂದ ಹಿಡಿದು ಸಾಮಾನ್ಯ ಜನರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಧರ್ಮದ ರಕ್ಷಣೆಗೆ ಪಣ ತೊಟ್ಟಿದ್ದಾರೆ.
ನಗರದಲ್ಲಿ ನೆಲೆಸಿರುವ ದೈವಜ್ಞ ಸಮುದಾಯದವರು, ಕೃಷ್ಣ ಕಲ್ಯಾಣ ಮಂಟಪದಲ್ಲಿ ‘ದೈವಜ್ಞ ದರ್ಶನ’ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಭಾಗವಹಿಸಿ ಜನರಿಗೆ ಧಾರ್ಮಿಕ ಸಂದೇಶ ನೀಡಿದರು.
ಕ್ರಿಸ್‌ಮಸ್ ಸಹಮಿಲನ ಕಾರ್ಯಕ್ರಮ: ಹಾವೇರಿಯ ಸಿ.ಎಸ್.ಐ ಗುರುಕೃಪ ದೇವಾಲಯದಲ್ಲಿ ಇತ್ತೀಚೆಗೆ ‘ಕ್ರಿಸ್‌ಮಸ್ ಸಹಮಿಲನ’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಧರ್ಮದ ಮಹತ್ವ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಧರ್ಮದ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
Quote - ದುಶ್ಚಟಗಳಿಂದ ಆರೋಗ್ಯ ಹಾಗೂ ಕುಟುಂಬದ ಆರ್ಥಿಕೆ ಹಾಳಾಗುತ್ತದೆ. ಪ್ರತಿಯೊಬ್ಬರು ದುಶ್ಚಟಗಳನ್ನು ತ್ಯಜಿಸಿ ಸಂಸ್ಕಾರವಂತರಾಗಬೇಕೆಂದು ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಸದಾಶಿವ ಸ್ವಾಮೀಜಿ ಹುಕ್ಕೇರಿಮಠ ಹಾವೇರಿ
Quote - ಇಡೀ ಜಗತ್ತಿಗೆ ಅಹಿಂಸಾ ತತ್ವ ತಿಳಿಸಿದ ಜೈನ್ ಧರ್ಮ ಅಳಿವಿನ ಅಂಚಿಗೆ ತಲುಪುತ್ತಿದೆ. ಸಮಾಜದವರನ್ನು ಎಚ್ಚರಿಸಿ ಮಕ್ಕಳಿಗೆ ಸಂಸ್ಕಾರ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು
Cut-off box - ಧ್ವಜ ಸ್ವಾಗತ ಬ್ಯಾನರ್; ಧಾರ್ಮಿಕ ಕಳೆ ಹಿಂದೂ ಮುಸ್ಲಿಂ ಜೈನ್ ಸಮುದಾಯದವರಿಂದ ಸಾಲು ಸಾಲು ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಹಾವೇರಿ ನಗರಕ್ಕೆ ಧಾರ್ಮಿಕ ಕಳೆ ಬಂದಿದೆ. ಹುಕ್ಕೇರಿಮಠದ ಜಾತ್ರೆ ನಿಮಿತ್ತ ಪ್ರಮುಖ ವೃತ್ತ ರಸ್ತೆಗಳಲ್ಲಿ ಕೇಸರಿ ಬಣ್ಣದ ಬಟ್ಟೆಗಳು ರಾರಾಜಿಸುತ್ತಿವೆ. ಜಾತ್ರೆಗೆ ಶುಭ ಕೋರುವ ಬ್ಯಾನರ್‌ಗಳು ಕಾಣಸಿಗುತ್ತಿವೆ. ದ್ವಾರಬಾಗಿಲುಗಳನ್ನೂ ಮಾಡಿ ಜನರನ್ನು ಸ್ವಾಗತಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯುತ್ ಅಲಂಕಾರವೂ ಜೋರಾಗಿದೆ. ಜೈನ್ ಮಂದಿರ ಬಳಿಯೂ ದ್ವಾರಬಾಗಿಲು ನಿರ್ಮಿಸಿ ಧರ್ಮದ ಧ್ವಜಗಳನ್ನು ಪ್ರದರ್ಶಿಸಲಾಗಿದೆ. ರಜನಿ ಸಭಾಂಗಣ ಬಳಿಯೂ ಜೈನ್ ಸಮುದಾಯದವರ ಧ್ವಜಗಳು ಕಾಣಸಿಗುತ್ತಿವೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ‘ಸುನ್ನಿ ತರಬೇತಿ ಇಜ್ತಿಮಾ’ ಕಾರ್ಯಕ್ರಮದ ಸ್ವಾಗತ ಕೋರುವ ಬ್ಯಾನರ್‌ಗಳು ಪ್ರದರ್ಶನಗೊಂಡಿವೆ. ಕಾರ್ಯಕ್ರಮಕ್ಕಾಗಿ ಹಾಕಿರುವ ಭವ್ಯ ವೇದಿಕೆ ಹಾಗೂ ಮೂಲ ಸೌಕರ್ಯಗಳ ಜಾಗ ವಿಶಾಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.