ADVERTISEMENT

ಗಣಿತ ವಿಷಯದಲ್ಲಿ ಈ ಶಿಕ್ಷಕನೇ ‘ಅತ್ಯುತ್ತಮ’

ಎಸ್.ಎಸ್.ನಾಯಕ
Published 5 ಸೆಪ್ಟೆಂಬರ್ 2019, 13:22 IST
Last Updated 5 ಸೆಪ್ಟೆಂಬರ್ 2019, 13:22 IST
ಕಾರ್ಯಾಗಾರದಲ್ಲಿ ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡುತ್ತಿರುವ ರವಿಕುಮಾರ್ ನಾಯ್ಕ್
ಕಾರ್ಯಾಗಾರದಲ್ಲಿ ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡುತ್ತಿರುವ ರವಿಕುಮಾರ್ ನಾಯ್ಕ್   

ಕುಮಾರಪಟ್ಟಣ: ಗಣಿತ ಎಂದಾಕ್ಷಣ ಕಲಿಕೆ ಕಷ್ಟ, ಕಬ್ಬಿಣದ ಕಡಲೆ, ಅರ್ಥವಾಗದ ವಿಷಯ... ಎಂಬ ಮಾತುಗಳೇ ಕೇಳಿಬರುತ್ತವೆ. ಆದರೆ, ಮಾಕನೂರಿನ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ರವಿಕುಮಾರ್ ನಾಯ್ಕ್, ತಂತ್ರಜ್ಞಾನ ಆಧಾರಿತ ಶಿಕ್ಷಣದ ಮೂಲಕ ಗಣಿತ ಕಲಿಕೆಯನ್ನು ಸುಲಭಗೊಳಿಸಿದ್ದಾರೆ. ಇದರಿಂದಾಗಿ ಈ ವರ್ಷದ ಜಿಲ್ಲೆಯ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೂ ಭಾಜನರಾಗಿದ್ದಾರೆ.

‘ಗಣಿತ ಕಬ್ಬಿಣ ಕಡಲೆಯಲ್ಲ. ಅದು ಹುರಿಗಡಲೆ ಇದ್ದಂತೆ. ಆಸಕ್ತಿ ಮತ್ತು ಇಚ್ಛೆ ನಮ್ಮೊಂದಿಗಿದ್ದರೆ, ಯಾವ ವಿಷಯವೂ ಕಠಿಣವಾಗುವುದಿಲ್ಲ’ ಎನ್ನುವ ರವಿಕುಮಾರ್, ‘ಗ್ರಾಮೀಣ ಪ್ರದೇಶಗಳಿಗೂ ಗಣಿತ ಸುಲಭವಾಗಿ ಅರ್ಥವಾಗಬೇಕೆಂದು ಉಚಿತ ಸಂಪನ್ಮೂಲ ಸಿದ್ಧಪಡಿಸಿ ಮಕ್ಕಳಿಗೆ ಒದಗಿಸುತ್ತೇನೆ’ ಎನ್ನುತ್ತಾರೆ.

‘ಈಗಾಗಲೇ ಸ್ವಂತ ಯೂ ಟ್ಯೂಬ್ ಚಾನೆಲ್ ಹಾಗೂ ಕ್ಯೂ–ಆರ್ ಕೋಡ್ ರಚಿಸಿದ್ದೇವೆ. ಆ ಮೂಲಕ ಗಣಿತಕ್ಕೆ ಸಂಬಂಧಿಸಿದ ಪಠ್ಯ, ಸ್ಕೋರಿಂಗ್ ಪ್ಯಾಕೇಜ್ ಸೇರಿದಂತೆ ಒಂದೇ ಕಿಟಕಿಯಲ್ಲಿ ಹೆಚ್ಚಿನ ಮಾಹಿತಿ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ.ಮಕ್ಕಳಲ್ಲಿತಂತ್ರಜ್ಞಾನದ ಅರಿವು ಇರಲೆಂದು ವಾರಕ್ಕೊಂದು ಮೊಬೈಲ್ ಆ್ಯಪ್ ಬಳಕೆ ಮಾಡುತ್ತಿದ್ದೇನೆ. ಪ್ರತ್ಯೇಕ ಗಣಿತ ಪ್ರಯೋಗಾಲಯ ಆರಂಭಿಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಒದಗಿಸುವ ಕನಸಿದೆ’ ಎನ್ನುತ್ತಾರೆ ಅವರು.

ADVERTISEMENT

‘ರವಿಕುಮಾರ್ ಅವರು ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಮೊಬೈಲ್ ಇವಿಎಂ ಬಳಸಿ ಅಚ್ಚರಿ ಮೂಡಿಸಿದ್ದರು. ಇತರೆ ವಿಷಯಗಳಲ್ಲೂ ತಂತ್ರಜ್ಞಾನದ ಅಗತ್ಯವಿದ್ದಲ್ಲಿ ಸಹಕರಿಸುವ ಗುಣವನ್ನು ಅವರು ಅಳವಡಿಸಿಕೊಂಡಿದ್ದಾರೆ’ ಎಂದು ಕನ್ನಡ ಶಿಕ್ಷಕಿ ಪೂರ್ಣಿಮಾ ಗಾಂಧಿ ಹೇಳಿದರು.

‘ರಜಾ ದಿನ ಸೇರಿದಂತೆ ನಿತ್ಯವೂ ವಿಶೇಷ ತರಗತಿಗಳನ್ನು ಆಯೋಜಿಸುತ್ತಾರೆ. ಕಠಿಣ ಗಣಿತ ಪರಿಕಲ್ಪನೆಗಳಿಗೆ ಒತ್ತು ಕೊಟ್ಟು ಸರಳ ವಿಧಾನಗಳ ಮೂಲಕ ತಿಳಿಸುತ್ತಾರೆ. ಮೊದಲು ಗಣಿತ ಎಂದರೆ ಭಯವಾಗುತ್ತಿತ್ತು. ಇವರ ಬೋಧನಾ ಶೈಲಿಯಿಂದ ಈಗ ಇನ್ನಷ್ಟು ಕಲಿಯಬೇಕು ಎನಿಸುತ್ತದೆ’ ಎಂದು ವಿದ್ಯಾರ್ಥಿಗಳಾದ ಬಸವರಾಜ್,ತೇಜಸ್ವಿನಿ, ಉಷಾ ಹಾಗೂ ಕಿರಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಮ್ಮೆಯ ಶಿಕ್ಷಕ: ‘ರವಿಕುಮಾರ್ ಶ್ರಮಜೀವಿ. ಇಲಾಖೆಯಿಂದ ಆಯೋಜಿಸುವ ತರಬೇತಿಗಳಿಗೆ ತೆರಳಿದಾಗ, ಮಕ್ಕಳ ಕಲಿಕೆಗೆ ಅಡ್ಡಿ ಆಗಬಾರದೆಂದು ವಿಶೇಷ ತರಗತಿಗಳನ್ನು ತೆಗೆದುಕೊಂಡು ಪಠ್ಯಗಳನ್ನು ಸರಿದೂಗಿಸುತ್ತಾರೆ. ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಜತೆ ವಾಟ್ಸ್‌ಆ್ಯಪ್ ಗ್ರೂಪ್‌ ಮಾಡಿಕೊಂಡು ಮಾರ್ಗದರ್ಶನ ನೀಡುವ ಮೂಲಕ ಫಲಿತಾಂಶ ವೃದ್ಧಿಸಲು ಶ್ರಮ ಹಾಕಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮುಖ್ಯ ಶಿಕ್ಷಕ ಎಸ್.ಎಂ ಚನ್ನಮಲ್ಲಯ್ಯ.

ಮಾದರಿ ಗಣಿತ ಶಿಕ್ಷಕ

‘ಕಳೆದ ವರ್ಷ ಶಾಲೆಗೆ ಆಕಸ್ಮಿಕ ಭೇಟಿ ನೀಡಿದಾಗ ಶಾಲಾ ವೇಳೆಗಿಂತ ಮೊದಲೇ ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದ ನೈಜತೆ ಗೋಚರಿಸಿತು. ಡಯಟ್‍‍ನಲ್ಲಿ ಶಿಕ್ಷಕರಿಗೆ ತಂತ್ರಜ್ಞಾನ ನೆರವಿನ ಕಲಿಕಾ ತರಬೇತಿ (ಟಾಲ್ಫ್) ನೀಡಿ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ರವಿಕುಮಾರ್, ಜಿಲ್ಲೆಗೆ ಮಾದರಿ ಗಣಿತ ಶಿಕ್ಷಕ’ ಎಂದು ಹಾವೇರಿ ಡಯಟ್‍‍ ಪ್ರಾಚಾರ್ಯ ಜಿ.ಎಂ ಬಸವಲಿಂಗಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.