ADVERTISEMENT

ಪೈಪ್‌ಲೈನ್ ಅಳವಡಿಕೆ; ಕೋಟಿ ರೂಪಾಯಿ ಬಾಕಿ

ಹಾವೇರಿ ನಗರಸಭೆ ಸಾಮಾನ್ಯ ಸಭೆ: ಶಾಸಕ ರುದ್ರಪ್ಪ ಲಮಾಣಿ ಭಾಗಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:59 IST
Last Updated 8 ಜುಲೈ 2025, 2:59 IST

ಹಾವೇರಿ: ‘ನಗರದ ಹಲವು ಕಡೆಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯಲಾಗಿದ್ದು, ಸಂಬಂಧಪಟ್ಟ ಕಂಪನಿಯವರು ಕೇವಲ ₹99.36 ಲಕ್ಷ ಮಾತ್ರ ನಷ್ಟದ ಹಣ ಭರಿಸಿದ್ದಾರೆ. ಕೋಟಿಗೂ ಅಧಿಕ ಹಣ ನಗರಸಭೆಗೆ ಬರಬೇಕು’ ಎಂದು ನಗರಸಭೆಯ ಸದಸ್ಯರು ಹೇಳಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಎಜಿಪಿ ಗ್ಯಾಸ್ ಕಂಪನಿಯವರು ನಗರದಲ್ಲಿ 53 ಕಿ.ಮೀ. ಪೈಪ್‌ಲೈನ್ ಅಳವಡಿಸಲು 2022ರಂದು ಅನುಮತಿ ಪಡೆದಿದ್ದಾರೆ. ಆದರೆ, ಈವರೆಗೆ ₹99.36 ಲಕ್ಷ ಮಾತ್ರ ರಸ್ತೆ ನಷ್ಟದ ವೆಚ್ಚ ಭರಿಸಿದ್ದಾರೆ’ ಎಂದರು.

‘ಅರ್ಧ, ಒಂದು ಇಂಚು ಪೈಪ್ ಅಳವಡಿಸುವುದಾಗಿ ಹೇಳಿ ಏಳೆಂಟು ಇಂಚಿನ ಪೈಪ್ ಅಳವಡಿಸುತ್ತಿದ್ದಾರೆ. ರಸ್ತೆ ಹಾಳು ಮಾಡಿ, ದುರಸ್ತಿ ಮಾಡದೇ ಬಿಟ್ಟಿದ್ದಾರೆ. ಎಲ್ಲೆಲ್ಲಿ ಅನುಮತಿ ಇದೆ ಎಂದು ಕೇಳಿದರೆ ನಮ್ಮ ಮೇಲೆಯೇ ಹಲ್ಲೆಗೆ ಮುಂದಾಗುತ್ತಾರೆ. ರಾತ್ರೋರಾತ್ರಿ ಕಾಮಗಾರಿ ನಡೆಸುತ್ತಾರೆ. ಕಾನೂನು ಬದ್ಧವಾಗಿ ಕಂಪನಿಯಿಂದ ನಗರಸಭೆಗೆ ಕೋಟಿಗೂ ಹೆಚ್ಚು ಹಣ ಬರಬೇಕು. ಬಾಕಿ ಹಣ ವಸೂಲಿ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ವಿಷಯ ಪ್ರಸ್ತಾಪಿಸಿದ್ದ ಸದಸ್ಯರಾದ ಐ.ಯು ಪಠಾಣ, ಗಿರೀಶ ತುಪ್ಪದ, ಚನ್ನಮ್ಮ ಬ್ಯಾಡಗಿ, ‘ಹೊಸದಾಗಿ ನೀರು ಶುದ್ದೀಕರಣ ಘಟಕ ನಿರ್ಮಿಸಲು ಜಲಾಗಾರದಲ್ಲಿ ಜಲಮಂಡಳಿಗೆ ಜಾಗ ಹಸ್ತಾಂತರಿಸಲಾಗಿದೆ. ಅಲ್ಲಿದ್ದ ನಗರಸಭೆಯ ಗಿಡ-ಮರಗಳನ್ನು ಸದಸ್ಯರ ಗಮನಕ್ಕೆ ತರದೇ ತೆರವುಗೊಳಿಸಿದ್ದಾರೆ. ಇದರಿಂದ ನಗರಸಭೆಗೆ ಆದಾಯ ಕಡಿಮೆಯಾಗಿದೆ. ಜಲಾಗಾರದಿಂದ ನೀರು ತುಂಬಿಕೊಂಡು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಶಾಸಕ ರುದ್ರಪ್ಪ ಮಾತನಾಡಿ, ‘25 ಗಿಡಗಳ ಹಸ್ತಾಂತರಕ್ಕೆ ಹೊಣೆ ಯಾರು? ಈ ಬಗ್ಗೆ ತನಿಖೆ ಆಗಬೇಕು’ ಎಂದರು.

‘ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಪರವಾನಿಗೆ ಕೊಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಂಚಾರಗಟ್ಟಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ ₹150 ಕೋಟಿ ಅನುದಾನ ಕೇಳಿದ್ದೆ. ಮೊದಲ ಕಂತಿನಲ್ಲಿ ₹ 50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಡಿಪಿಎಆರ್ ಸಿದ್ಧಪಡಿಸಲಿದ್ದಾರೆ. ಈ ಕಾಮಗಾರಿ ನಿರ್ಮಾಣವಾದರೆ ಹಾವೇರಿ ನಗರಕ್ಕೆ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಶಾಸಕ ಹೇಳಿದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭಾರ ಪೌರಾಯುಕ್ತ ಸುರೇಶ ಕಂಬಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.