ADVERTISEMENT

ಎಂಐಎಸ್ ಖರೀದಿ ಕೇಂದ್ರ: ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:22 IST
Last Updated 18 ಜನವರಿ 2026, 3:22 IST
ಹಾವೇರಿಯ ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಯೋಜನೆಯ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಇತ್ತೀಚೆಗೆ ಭೇಟಿ ನೀಡಿದರು
ಹಾವೇರಿಯ ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಯೋಜನೆಯ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಇತ್ತೀಚೆಗೆ ಭೇಟಿ ನೀಡಿದರು   

ಹಾವೇರಿ: ರೈತರು ಬೆಳೆದಿರುವ ಮೆಕ್ಕೆಜೋಳ ಖರೀದಿಸುವುದಕ್ಕಾಗಿ ರಾಜ್ಯ ಸರ್ಕಾರವು ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಯೋಜನೆಯಡಿ ದರ ನಿಗದಿ ಮಾಡಿದ್ದು, ಅದರನ್ವಯ ಜಿಲ್ಲೆಯ 9 ಕಡೆಗಳಲ್ಲಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಪರಿಶೀಲನೆ ನಡೆಸಿದರು.

‘ಈ ಯೋಜನೆಯಡಿಯಲ್ಲಿ ಮೆಕ್ಕೆಜೋಳ ಉತ್ಪನ್ನಗಳನ್ನು ಪ್ರಚಲಿತ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಲ್‌ಗೆ ₹1,900 ದರದಲ್ಲಿ ವಹಿವಾಟು ಆಗುತ್ತಿರುವುದನ್ನು ಪರಿಗಣಿಸಿ, ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಲ್ ಗರಿಷ್ಠ ₹2,150 ನಿಗದಿಪಡಿಸಿದೆ. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹1,900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಟ ₹250 ಪಾವತಿಸಲಾಗುವುದು. ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹1,950 ಮಾರಾಟವಾದ್ದಲ್ಲಿ ವ್ಯತ್ಯಾಸದ ಮೊತ್ತ ₹200 ಪ್ರತಿ ಕ್ವಿಂಟಲ್‌ಗೆ ಪಾವತಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ ₹ 2,000 ಮಾರಾಟವಾದರೆ, ವ್ಯತ್ಯಾಸದ ಮೊತ್ತ ₹150 ಪಾವತಿಸಲಾಗುವುದು. ಪ್ರತಿ ಕ್ವಿಂಟಲ್‌ಗೆ ₹2,150 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬುದನ್ನು ರೈತರಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ. ಯೋಜನೆ ಅಡಿ ಪ್ರತಿ ಎಕರೆಗೆ 12 ಕ್ವಿಂಟಲ್‌ನಂತೆ ಪ್ರತಿ ರೈತರಿಂದ 50 ಕ್ವಿಂಟಲ್ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ರೈತರ ಖಾತೆಗೆ ನೇರ ನಗದು ವರ್ಗಾವಣೆ ಸೌಲಭ್ಯದ ಮೂಲಕ ಹಣ ಜಮೆಯಾಗಲಿದೆ’ ಎಂದರು.

ADVERTISEMENT

‘ಶಿಕಾರಿಪುರದಲ್ಲಿ ಪಶು ಆಹಾರ ಘಟಕದಲ್ಲಿ 1,110 ರೈತರಿಂದ ಮೆಕ್ಕೆಜೋಳ ಖರೀದಿ ಮಾಡಲಾಗಿದೆ. ಧಾರವಾಡ 317 ರೈತರು, ಹಾಗೂ ರಾಣೆಬೆನ್ನೂರ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಈವರೆಗೆ 254 ಜನ ರೈತರು, ಮೆಕ್ಕೆಜೋಳ ಪೂರೈಸಿದ್ದಾರೆ. ಒಟ್ಟು 1,681 ರೈತರು ಮೆಕ್ಕೆಜೋಳ ಪೂರೈಸಿದ್ದಾರೆ. ಶಿಕಾರಿಪುರದಲ್ಲಿ ನೋಂದಣಿ ಮಾಡಿಕೊಂಡ ಜಿಲ್ಲೆಯ ರೈತರು, ರಾಣೆಬೆನ್ನೂರ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅವಕಾಶ ಕಲ್ಪಿಸಿದೆ. ನೋಂದಣಿಯಲ್ಲಿ ನಿಗದಿಪಡಿಸಿದ ಪ್ರಮಾಣದಂತೆ ರೈತರು ತಾವು ಬೆಳೆದ ಮೆಕ್ಕೆಜೋಳವನ್ನು ಹತ್ತಿರದ ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.