ಹಾವೇರಿ: ‘ನಗರದ ಕುಡಿಯುವ ನೀರು ಯೋಜನೆಗೆ ಸರ್ಕಾರದಿಂದ ಅನುದಾನ ಹಂಚಿಕೆಯಾಗಿದೆ. ಆದರೆ, ಅಧಿಕಾರಿಗಳು ಮೂರು ತಿಂಗಳಾದರೂ ಟೆಂಡರ್ ಕರೆದಿಲ್ಲ. ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನೂ ಪರಿಶೀಲಿಸಿಲ್ಲ. ಯೋಜನೆ ತ್ವರಿತವಾಗಿ ಅನುಷ್ಠಾನ ಮಾಡದಿದ್ದರೆ, ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ನಡೆಸಲಾಗುವುದು’ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಎಚ್ಚರಿಸಿದರು.
ಇಲ್ಲಿಯ ನಗರಸಭೆಯಲ್ಲಿ ಅಧ್ಯಕ್ಷರಾದ ಶಶಿಕಲಾ ಮಾಳಗಿ ಅವರು ಸೋಮವಾರ ನಡೆಸಿದ ವಿಶೇಷ ತುರ್ತು ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಕುಡಿಯುವ ನೀರಿನ ಯೋಜನೆಗಳಿಗೆ ₹ 108 ಲಕ್ಷ ಅನುದಾನ ಬಂದಿದೆ. ಜಲ ಶುದ್ಧೀಕರಣ ಘಟಕಕ್ಕೆ ₹ 40 ಲಕ್ಷ, ಜಾಕವೆಲ್ ದುರಸ್ತಿಗೆ ₹ ೪೦ ಲಕ್ಷ, ನಗರಕ್ಕೆ ನೀರು ಸರಬರಾಜು ಮಾಡಲು ₹ 28 ಲಕ್ಷ ಹಂಚಿಕೆಯಾಗಿದೆ. ಇಲ್ಲಿಯವರೆಗೂ ನಗರಸಭೆ ಟೆಂಡರ್ ಕರೆದಿಲ್ಲ. ಜಿಲ್ಲಾಧಿಕಾರಿಯವರನ್ನು ಕೇಳಿದರೆ, ‘ನಗರ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಸಹಿ ಬಾಕಿ ಇದೆ’ ಎನ್ನುತ್ತಿದ್ದಾರೆ. ನಾವು ಆದೇಶ ಮಾಡಿಸಿಕೊಂಡು ಬಂದರೂ, ಅಧಿಕಾರಿಗಳು ಪ್ರಕ್ರಿಯೆ ನಡೆಸುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.
ನಗರಸಭೆ ಸದಸ್ಯ ಐ.ಯು. ಪಠಾಣ ಮಾತನಾಡಿ, ‘2021ರಿಂದ 2025ರವರೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಕೈಗೊಂಡ ಅಭಿವೃದ್ಧಿ ಕೆಲಸಗಳಲ್ಲಿ ಅಕ್ರಮ ನಡೆದಿರುವ ಸಂಶಯವಿದೆ. ನಾನು ಮಾಹಿತಿ ಕೇಳಿದರೂ ಅಧಿಕಾರಿಗಳು ಕೊಟ್ಟಿಲ್ಲ. ಏಕೆ’ ಎಂದು ಪ್ರಶ್ನಿಸಿದರು.
ಪಠಾಣ ಅವರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡವರಿಸಿದರು. ಮಧ್ಯಪ್ರವೇಶಿಸಿದ ಅಧ್ಯಕ್ಷರಾದ ಶಶಿಕಲಾ ಮಾಳಗಿ, ‘ವಾರದೊಳಗೆ ಮತ್ತೊಂದು ಸಭೆ ಕರೆಯಿರಿ. ಅಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಧ್ಯಕ್ಷರಾದ ಶಶಿಕಲಾ ಮಾಳಗಿ, ‘ನಗರದಲ್ಲಿ ಪದೇ ಪದೇ ಒಡೆದು ಹಾಳಾಗುವ ಕುಡಿಯುವ ನೀರಿನ ಪೈಪ್ ದುರಸ್ತಿಗೆ ವಾರ್ಷಿಕ ₹ 10 ಲಕ್ಷ ಮೀಸಲಿಡಬೇಕು’ ಎಂದು ಸದಸ್ಯರ ಒಪ್ಪಿಗೆ ಕೋರಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸಚಿನ್ ಡಂಬಳ, ‘ಪೈಪ್ ದುರಸ್ತಿಗೆ ₹ 10 ಲಕ್ಷ ಮೀಸಲು ಅಗತ್ಯವಿಲ್ಲ. ಸಣ್ಣಪುಟ್ಟ ಕೆಲಸಗಳಿದ್ದರೆ, ವಾಲ್‌ಮೆನ್‌ಗಳಿಂದ ಮಾಡಿಸಿ’ ಎಂದರು.
ಸದಸ್ಯ ಐ.ಯು. ಪಠಾಣ ಮಾತನಾಡಿ, ‘ನೀರಿನ ಪೈಪ್‌ಲೈನ್ ದುರಸ್ತಿ ಸಾಮಗ್ರಿಗಾಗಿ ₹ 2 ಲಕ್ಷ ಮೀಸಲಿಡಿ. ಎಂಜಿನಿಯರ್ ಅವರೇ ಮುಂದೆ ನಿಂತು ಕೆಲಸ ಮಾಡಿಸುತ್ತಾರೆ’ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ ಎಚ್. ಕಾಂತರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.