ADVERTISEMENT

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆಗೆ ನಿರ್ಬಂಧ: ಹೋರಾಟಗಾರರ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 5:28 IST
Last Updated 1 ಅಕ್ಟೋಬರ್ 2025, 5:28 IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಅವರ ವೀರಗಲ್ಲು
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಅವರ ವೀರಗಲ್ಲು   

ಹಾವೇರಿ: ಜಿಲ್ಲಾ ಕೇಂದ್ರವಾಗಿರುವ ಹಾವೇರಿಯ ಪ್ರಮುಖ ಸ್ಥಳವಾದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಇನ್ನು ಮುಂದೆ ಪ್ರತಿಭಟನೆಗಳನ್ನು ನಡೆಸುವಂತಿಲ್ಲ !

ಈ ಬಗ್ಗೆ ಹಾವೇರಿ ತಾಲ್ಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್ ಶರಣಮ್ಮ ಅವರು ಸೆ. 23ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ವಿರುದ್ಧ ಕಿಡಿಕಾರಿರುವ ಹೋರಾಟಗಾರರು, ‘ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಪ್ರತಿಭಟನೆ ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹುತಾತ್ಮ ರೈತರ ವೀರಗಲ್ಲು ಇದೆ. ಇಂಥ ಸ್ಥಳದಲ್ಲಿ ನಿರ್ಬಂಧ ವಿಧಿಸುವುದು, ಪ್ರತಿಭಟನೆ ಹತ್ತಿಕ್ಕುವ ಯತ್ನವಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ. ಇದೇ ಸ್ಥಳದಲ್ಲಿ ಸದ್ಯದಲ್ಲೇ ಪ್ರತಿಭಟನೆ ಮಾಡಿ ತೋರಿಸುತ್ತೇವೆ’ ಎಂದು ರೈತರ ಮುಖಂಡರು ಸವಾಲು ಹಾಕಿದ್ದಾರೆ. 

ADVERTISEMENT

ಪತ್ರ ಬರೆದಿದ್ದ ಇನ್‌ಸ್ಪೆಕ್ಟರ್: ‘ಪ್ರತಿಭಟನೆಯಿಂದಾಗಿ ಸಾರ್ವಜನಿಕರ ಓಡಾಟ ಹಾಗೂ ರೋಗಿಗಳ ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ, ಹೊಸಮನಿ ಸಿದ್ದಪ್ಪ ವೃತ್ತವನ್ನು ಪ್ರತಿಭಟನೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ’ ಎಂದು ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಅವರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು.

ಅದೇ ಪತ್ರ ಆಧರಿಸಿ ಆದೇಶ ಹೊರಡಿಸಿರುವ ತಹಶೀಲ್ದಾರ್ ಶರಣಮ್ಮ, ‘ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ. ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿದೆ. ಈ ಆದೇಶ ಮುಂದಿನ 6 ತಿಂಗಳು ಜಾರಿಯಲ್ಲಿರಲಿದೆ’ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ವೃತ್ತ: ‘ಬ್ರಿಟಿಷರ ವಿರುದ್ಧ ಹೋರಾಡಿದ್ದ ಹೊಸಮನಿ ಸಿದ್ದಪ್ಪ ಅವರ ಹೆಸರಿನ ವೃತ್ತದಲ್ಲಿಯೇ, ಪ್ರತಿಭಟನೆ ನಿರ್ಬಂಧಿಸುವುದು ಸರಿಯಲ್ಲ. ಇದೊಂದು ಪ್ರಜಾಪ್ರಭುತ್ವದ ವಿರೋಧಿ ನೀತಿಯಾಗಿದೆ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ ಪೂಜಾರ ದೂರಿದರು.

‘ಪ್ರತಿಭಟನೆ ಮಾಡಲು ನಿರಾಕರಣೆ ಮಾಡುವುದು ಸರಿಯಲ್ಲ. ಇದೊಂದು ಸರ್ವಾಧಿಕಾರ ಧೋರಣೆಯಾಗುತ್ತದೆ. ಜನರಿಗೆ ಆಗುವ ತೊಂದರೆ ಹಾಗೂ ಅವರ ಬೇಡಿಕೆ ಈಡೇರಿಕೆಗಾಗಿಯೇ ಪ್ರತಿಭಟನೆಗಳು ನಡೆಯುತ್ತವೆ. ಜನರ ಸಂಚಾರದ ನೆಪದಲ್ಲಿ ಪ್ರತಿಭಟನೆ ಹತ್ತಿಕ್ಕುವುದು ಖಂಡನೀಯ. ತಹಶೀಲ್ದಾರ್‌ ಅವರು ಕೂಡಲೇ ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ, ಇದರ ವಿರುದ್ಧವೇ ಹೋರಾಟ ಆರಂಭಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

ಪತ್ರ ಪರಿಶೀಲಿಸಿ ಆದೇಶ: ‘ಹಾವೇರಿಯ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಹೊಸಮನಿ ಸಿದ್ದಪ್ಪ ವೃತ್ತ, ಅತೀ ಮುಖ್ಯ ಹಾಗೂ ನಗರದ ಹೃದಯ ಭಾಗದಲ್ಲಿದೆ. ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ, ಬೆಂಗಳೂರು ಹಾಗೂ ಸುತ್ತಮುತ್ತಲಿನ ನಗರಗಳಿಗೆ ಸಂಚರಿಸುವ ವಾಹನಗಳು ಇದೇ ವೃತ್ತದ ಮೂಲಕ ಸಂಚರಿಸುತ್ತವೆ. ಗ್ರಾಮಾಂತರ ಪ್ರದೇಶಕ್ಕೆ ಹೋಗುವ ಸಾರ್ವಜನಿಕ ವಾಹನಗಳು, ಆಟೊಗಳು, ಎಪಿಎಂಸಿ– ಜಾನುವಾರು ಮಾರುಕಟ್ಟೆ ವಾಹನಗಳು ಹಾಗೂ ಇತರೆ ವಾಹನಗಳು ಸಹ ಇದೇ ವೃತ್ತವನ್ನು ಬಳಕೆ ಮಾಡುತ್ತಿವೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡು ಜಿಲ್ಲಾ ಆಸ್ಪತ್ರೆಯಿದೆ. ಇಲ್ಲಿಗೆ ಬರುವ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಹುಬ್ಬಳ್ಳಿಯ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿಯೂ ರೋಗಿಗಳನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ, ಹೊಸಮನಿ ಸಿದ್ದಪ್ಪ ವೃತ್ತ ಬಳಕೆ ಮಾಡಲಾಗುತ್ತಿದೆ’ ಎಂದು ಉಲ್ಲೇಖಿಸಲಾಗಿದೆ.

‘ಯಾವುದೇ ರಾಜಕೀಯ ಪಕ್ಷ, ಸಂಘ–ಸಂಸ್ಥೆ, ಸಂಘಟನೆಗಳು ಹಾಗೂ ಇತರರು, ಬಹುತೇಕ ಪ್ರತಿಭಟನೆಗಳನ್ನು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾಡುತ್ತಿದ್ದಾರೆ. ಆಗಾಗ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಪದೇ ಪದೇ ಪ್ರತಿಭಟನೆ ನಡೆಯುವಾಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸಾರ್ವಜನಿಕರ ಓಡಾಟ, ಆಂಬುಲೆನ್ಸ್ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಹೊಸಮನಿ ಸಿದ್ದಪ್ಪ ವೃತ್ತವನ್ನು ಪ್ರತಿಭಟನೆ ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಹಾವೇರಿ ಶಹರ ಠಾಣೆ ಇನ್‌ಸ್ಪೆಕ್ಟರ್ ಅವರು ವಿನಂತಿಸಿಕೊಂಡಿದ್ದರು. ವಿನಂತಿಯನ್ನು ಪರಿಶೀಲಿಸಿದಾಗ, ಸೂಕ್ತವೆಂದು ಕಂಡುಬಂದಿರುವುದರಿಂದ ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆ (ಬಿಎನ್ಎನ್‌ಎಸ್‌) ಕಲಂ 163 ಅಡಿ ಅಧಿಕಾರವನ್ನು ಚಲಾಯಿಸಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಿರ್ಬಂಧಿಸಿ ಆದೇಶಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹುತಾತ್ಮ ರೈತರ ವೀರಗಲ್ಲು

‘ಹಾವೇರಿ ಜಿಲ್ಲೆ, ರೈತರ ನಾಡು. ಬೀಜ–ಗೊಬ್ಬರಕ್ಕಾಗಿ 2008ರಲ್ಲಿ ಹೊಸಮನಿ ಸಿದ್ದಪ್ಪ‍ ವೃತ್ತದಲ್ಲಿ ನಡೆದಿದ್ದ ಹೋರಾಟದ ಸಂದರ್ಭದಲ್ಲಿ ಗೋಲಿಬಾರ್‌ ನಡೆದು ಇಬ್ಬರು ರೈತರು ಹುತಾತ್ಮರಾಗಿದ್ದಾರೆ. ಇವರ ನೆನಪಿನಲ್ಲಿ ವೃತ್ತದಲ್ಲಿ ವೀರಗಲ್ಲು ಇದೆ. ಇಂಥ ಸ್ಥಳದಲ್ಲಿ ಪ್ರತಿಭಟನೆ ನಿರ್ಬಂಧಿಸುವುದು, ರೈತ ವಿರೊಧಿ ನಡೆಯಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಕ್ರೋಶ ಹೊರಹಾಕಿದರು.

‘ಇಂದಿನ ಸರ್ಕಾರಗಳು, ರೈತ ವಿರೋಧಿ ನಡೆ ತೋರುತ್ತಿವೆ. ಇದರ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವೂ ಆಗಿದೆ. ಇಂಥ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ. ಇದಕ್ಕೆ ರೈತರು ಅಂಜುವುದಿಲ್ಲ. ನಿರ್ಬಂಧ ಹೇರಿದರೆ, ವೃತ್ತದಲ್ಲಿ ಪ್ರತಿಭಟನೆ ಮಾಡಿಯೇ ತೋರಿಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.