ADVERTISEMENT

ಹಾವೇರಿ; ಮಡಿಕೆ ನೀರುಪಾಲು, ಕುಂಬಾರರು ಬೀದಿಪಾಲು

ಹಬ್ಬದ ಸಂಭ್ರಮ ನುಂಗಿದ ಮಳೆರಾಯ, ನಲುಗಿದವು 40ಕ್ಕೂ ಹೆಚ್ಚು ಕುಟುಂಬ

ಎಂ.ಸಿ.ಮಂಜುನಾಥ
Published 9 ಅಕ್ಟೋಬರ್ 2019, 19:45 IST
Last Updated 9 ಅಕ್ಟೋಬರ್ 2019, 19:45 IST
ಮುಳುಗಿರುವ ಪಣತಿ ಸುಡುವ ಭಟ್ಟಿಯಲ್ಲಿ ಸಂತ್ರಸ್ತ ಮಹಿಳೆಯ ಪಡಿಪಾಟಲು
ಮುಳುಗಿರುವ ಪಣತಿ ಸುಡುವ ಭಟ್ಟಿಯಲ್ಲಿ ಸಂತ್ರಸ್ತ ಮಹಿಳೆಯ ಪಡಿಪಾಟಲು   

ಹಾವೇರಿ:ಅದು 40ಕ್ಕೂ ಹೆಚ್ಚು ಕುಂಬಾರ ಕುಟುಂಬಗಳಿರುವ ಓಣಿ. ಅವರೆಲ್ಲ ದಸರಾ ಹಾಗೂ ದೀಪಾವಳಿ ಹಬ್ಬಗಳ ದಿನಾಂಕ ಗುರುತು ಮಾಡಿ ಸಾವಿರಾರು ಮಡಿಕೆ, ಕುಡಿಕೆ, ಗಡಿಗೆ, ಬಿಂದಿಗೆ, ಪಣತಿಗಳನ್ನು (ಹಣತೆ) ಸಿದ್ಧಪಡಿಸಿದ್ದರು. ಇನ್ನೇನು ಮಾರಾಟದ ಭರಾಟೆ ಶುರುವಾಗಬೇಕು ಎನ್ನುವಷ್ಟರಲ್ಲಿ ಬಂದ ರಣಮಳೆ, ಅಷ್ಟೂ ಮಣ್ಣಿನ ಪರಿಕರಗಳ ಜತೆಗೆ ಅವರ ಬದುಕನ್ನೂ ಕರಗಿಸಿತು...

ಹಾವೇರಿ ನಗರದ ಕುಂಬಾರರ ಓಣಿಯಲ್ಲಿ ಸೋಮವಾರ ಆಯುಧ ಪೂಜೆಯ ಖುಷಿ ಇರಲಿಲ್ಲ. ಮನೆ ಬಾಗಿಲುಗಳು ತೋರಣಗಳಿಂದ ಸಿಂಗಾರಗೊಂಡಿರಲಿಲ್ಲ. ವಾಹನಗಳು ಹಾಗೂ ತಿಗರಿಗಳೂ (ಕುಂಬಾರರ ಚಕ್ರ) ಪೂಜೆಯನ್ನು ಕಾಣಲಿಲ್ಲ. ಇಡೀ ದೇಶ ಸಂಭ್ರಮದಿಂದ ದಸರಾ ಆಚರಿಸುತ್ತಿದ್ದರೆ, ಈ ಓಣಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು.ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಚೆಲ್ಲುವುದರಲ್ಲೇ ಇಲ್ಲಿನ ನಿವಾಸಿಗಳು ಹಬ್ಬದ ದಿನವನ್ನು ಕಳೆದರು.

ಮಡಿಕೆ, ಪಣತಿಗಳು ಮಾತ್ರವಲ್ಲದೇ, ಅವುಗಳನ್ನು ಸಿದ್ಧಪಡಿಸಲು ಸಾವಿರಾರು ರೂಪಾಯಿ ಕೊಟ್ಟು ದೇವಗಿರಿಯಿಂದ ತರಿಸಿದ್ದನೂರಾರು ಲೋಡ್ ಮಣ್ಣು ಸಹ ಕೊಚ್ಚಿ ಹೋಗಿತ್ತು. ಎರಡು ತಿಂಗಳ ಹಿಂದಷ್ಟೇ ಪ್ರವಾಹ ಸ್ಥಿತಿಗೆ ನಲುಗಿ ಹೋಗಿದ್ದ ಈ ಕುಟುಂಬಗಳು, ಭಾನುವಾರ ನಸುಕಿನ ವೇಳೆ ಸುರಿದ ಮಹಾಮಳೆಗೆ ಮತ್ತೆ ಬೀದಿಗೆ ಬಿದ್ದವು.

ADVERTISEMENT

‘ನಾವೆಲ್ಲ ಸುಮಾರು 60 ವರ್ಷಗಳಿಂದ ಇಲ್ಲೇ ನೆಲೆಸಿದ್ದೇವೆ.ಇಡೀ ಊರಿನ ಗಟಾರ ಹಾಗೂ ಮಳೆ ನೀರು ಹರಿದು ನಮ್ಮ ಓಣಿಗೇ ಬರುತ್ತದೆ. ಮೊದಲೆಲ್ಲ ಈ ನೀರು ಶಿವಲಿಂಗನಗರದ ಕಡೆಗೆ ಹರಿದು ಹೋಗುತ್ತಿತ್ತು. ಅಲ್ಲಿ ನಗರಸಭೆ ಸದಸ್ಯೆ ರಜೀಯಾ ಬೇಗಂ ಅವರ ಮನೆ ಇದೆ. ಅದೊಂದೇ ಕಾರಣಕ್ಕೆ ಕೊಳಚೆಯ ಹರಿಯುವಿಕೆಯನ್ನು ನಮ್ಮ ಓಣಿಯ ಕಡೆಗೆ ತಿರುಗಿಸಿದರು’ ಎಂದು ಸ್ಥಳೀಯ ನಿವಾಸಿ ಸುರೇಶ್ ಆರೋಪಿಸಿದರು.

‘ಮೊದಲೇ ಮಡಿಕೆಗಳನ್ನು ಕೊಳ್ಳುವವರಿಲ್ಲದೇ ಕುಂಬಾರರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಳೆಯೂ ಮೇಲಿಂದ ಮೇಲೆ ಈ ರೀತಿ ಅವಾಂತರ ಸೃಷ್ಟಿಸಿದರೆ ನಾವೆಲ್ಲಿ ಹೋಗಬೇಕು? ಒಂದು ಲೋಡ್ ಟ್ರ್ಯಾಕ್ಟರ್‌ ಮಣ್ಣಿಗೆ ₹ 4 ಸಾವಿರ ಖರ್ಚಾಗುತ್ತದೆ. ಹಬ್ಬಗಳ ಖುಷಿಯಲ್ಲಿ ಎಲ್ಲರೂ ನಾಲ್ಕೈದು ಲೋಡ್ ಮಣ್ಣು ಹಾಕಿಸಿದ್ದೆವು. ಈಗ ಲಕ್ಷಾಂತರ ರೂಪಾಯಿ ನಾಶವಾಗಿದೆ’ ಎನ್ನುತ್ತ ದುಃಖತಪ್ತರಾದರು.

‘ಪ್ರತಿ ಮನೆಯಲ್ಲಿ ₹35 ಸಾವಿರದಿಂದ ₹50 ಸಾವಿರ ಮೊತ್ತದ ಮಡಿಕೆ, ಕುಡಿಕೆ, ಹಣತೆಗಳು ಸಿದ್ಧವಿದ್ದವು. ಅವೆಲ್ಲವೂ ಮಳೆ ನೀರಿನಲ್ಲಿ ಕರಗಿವೆ. ಅವುಗಳನ್ನು ಸುಡುವ ಭಟ್ಟಿಗಳೂ ಮುಳುಗಿವೆ. ಅಕ್ಕ–ಪಕ್ಕದ ರಸ್ತೆಗಳಲ್ಲಿ ಜನ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದಾರೆ. ನಾವು ಇರುವ ಮನೆ ಬಿಟ್ಟು ದೇವಸ್ಥಾನದಲ್ಲಿ ಆಶ್ರಯ ಪಡೆಯುವಂತಾಗಿದೆ’ ಎಂದು ಸಂತ್ರಸ್ತೆ ದ್ಯಾಮವ್ವ ಬೇಸರ ವ್ಯಕ್ತಪಡಿಸಿದರು.

ಈ ವಾರದಲ್ಲೇ ಹಬ್ಬ:

‘ಭಟ್ಟಿ, ಒಲೆ, ತಿಗರಿಗಳು ಕುಂಬಾರರಿಗೆ ಅಂಗಾಂಗಗಳಿದ್ದಂತೆ. ಅವುಗಳು ಕೆಲಸ ಮಾಡಿದರೆ ಮಾತ್ರ ನಾವು ಉಸಿರಾಡುತ್ತೇವೆ. ವರ್ಷಕ್ಕೆ ಒಮ್ಮೆ ಆಯುಧ ಪೂಜೆ ಬರುತ್ತದೆ. ಹೀಗಾಗಿ, ಅವುಗಳಿಗೆ ವಿಶೇಷ ಪೂಜೆ ಮಾಡಲೇಬೇಕು. ಸೋಮವಾರ ಹಾಗೂ ಮಂಗಳವಾರ ಮನೆ ಸ್ವಚ್ಛಗೊಳಿಸುವುದರಲ್ಲೇ ಕಾಲ ಕಳೆದಿದ್ದೇವೆ. ಮಳೆ ನಿಂತರೆ ಈ ವಾರದಲ್ಲೇ ಒಂದು ದಿನ ಓಣಿಯಲ್ಲಿ ವಿಶೇಷವಾಗಿ ಆಯುಧಪೂಜೆ ಮಾಡುತ್ತೇವೆ’ ಎನ್ನುತ್ತಾರೆ ಸ್ಥಳೀಯರು.

‘ಎಂಎಲ್‌ಎ ಹತ್ರ ಮಾತಾಡ್ರಿ’

ಮನೆಗಳಿಗೆ ನೀರು ನುಗ್ಗಿದ್ದನ್ನು ಪರಿಶೀಲಿಸಿಲು ಸ್ಥಳಕ್ಕೆ ಬಂದ ರಜಿಯಾ ಬೇಗಂ ವಿರುದ್ಧ ಆಕ್ರೋಶ ಹೊರಹಾಕಿದ ಸ್ಥಳೀಯರು, ‘ಎಂಎಲ್‌ಎ ಸಾಹೇಬ್ರ ಹತ್ರ ಮಾತಾಡಿ’ ಎಂದು ಹೇಳಿದ ಅವರ ಸಂಬಂಧಿಯನ್ನೂ ತರಾಟೆಗೆ ತೆಗೆದುಕೊಂಡರು.

‘ನೀನು ಸಮಸ್ಯೆಗೆ ಪರಿಹಾರ ಕೊಡಲ್ಲ ಅಂದ್ಮೇಲೆ ಸುಮ್ಮನೆ ಹೋಗ್ತಾ ಇರು. ಎಂಎಲ್‌ಎ ಹತ್ರ ಕೇಳಿ, ಎಂಪಿ ಹತ್ರ ಮಾತಾಡಿ ಅನ್ನೋಕೆ ನೀನ್ಯಾರು’ ಎಂದು ಆ ಸಂಬಂಧಿಗೆ ಮಹಿಳೆಯರೇ ಚಳಿ ಬಿಡಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ಸಂಬಂಧಿ, ಸ್ಥಳದಿಂದ ಕಾಲ್ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.