
ಹಾವೇರಿ: ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ತನ್ನ ಹೊಣೆಗಾರಿಕೆ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಅಂದಾಗ ಮಾತ್ರ ಅಸಮಾನತೆ ರಹಿತ ಸಮಾಜ ನಿರ್ಮಿಸಲು ಸಾಧ್ಯ. ಅದುವೇ ಸಂವಿಧಾನಕ್ಕೆ ನಾವು ನೀಡುವ ದೊಡ್ಡ ಗೌರವ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘77ನೇ ಗಣರಾಜ್ಯೋತ್ಸವ ದಿನಾಚರಣೆ’ಯಲ್ಲಿ ಧ್ವಜಾರೋಹಣ ನೆರವೇರಿಸಿ ರಕ್ಷಣಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಭಾರತದ ಸಂವಿಧಾನ, ಜಗತ್ತಿನಲ್ಲೇ ಅಗ್ರಮಾನ್ಯವಾಗಿದೆ. ಸ್ವಾತಂತ್ರ‍್ಯ, ಸಮಾನತೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಧ್ಯೇಯಗಳನ್ನು ಪ್ರತಿಪಾದಿಸುವ ಸಂವಿಧಾನ ಜಗತ್ತಿಗೆ ದಾರಿದೀವಿಗೆಯಾಗಿದೆ. ಜಗತ್ತಿನ ಅತ್ಯಂತ ದೀರ್ಘ ಲಿಖಿತ ಸಂವಿಧಾನವೂ ಇದಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ’ ಎಂದರು.
‘ಸಂವಿಧಾನವು ನಮಗೆ ಅಪರಿಮಿತ ಹಕ್ಕುಗಳನ್ನು ಕೊಟ್ಟಿರುವಂತೆ, ಕರ್ತವ್ಯಗಳನ್ನೂ ನಿಗದಿಪಡಿಸಿದೆ. ಅವುಗಳ ಅಡಿಯಲ್ಲಿ ದೇಶದ ಸಾರ್ವಭೌಮನಾದ ಜನಸಾಮಾನ್ಯರ ಬದುಕು ಸುಂದರವಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪವಂತಾಗಬೇಕು’ ಎಂದು ಹೇಳಿದರು.
ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ‘ಜಿಲ್ಲೆಯಲ್ಲಿ ₹ 500 ಕೋಟಿ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ನಿರ್ಮಿಸಲಾಗಿದೆ. ಅದೇ ರೀತಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಜಿಲ್ಲೆಗೆ ಎಂ.ಐ.ಆರ್. ಯಂತ್ರ ಬರಲಿದೆ’ ಎಂದು ಸಚಿವ ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಸನ್ಮಾನ: ಕೇಂದ್ರ ಚುನಾವಣಾ ಆಯೋಗದಿಂದ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರನ್ನು ಸನ್ಮಾನಿಸಲಾಯಿತು..
ಕ್ರೀಡೆ, ಶಿಕ್ಷಣ, ಸಮಾಜ ಸೇವೆ, ಪರಿಸರ ರಕ್ಷಣೆ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 28 ಜನರನ್ನು, ಎಸ್.ಎಲ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಅಧಿಕಾರಿ–ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು.
ನಗರದ ಕೇಂದ್ರೀಯ ವಿದ್ಯಾಲಯ, ವೈಭವಲಕ್ಷ್ಮಿ ಪಾರ್ಕ್‌ನ ಸರ್ಕಾರಿ ಉರ್ದು ಪ್ರೌಢಶಾಲೆ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಶಾಸರ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ಮೈದೂರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಇದ್ದರು.
ಕಾಂಗ್ರೆಸ್‌ಮಯವಾದ ವೇದಿಕೆ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿತ್ತು. ಆಹ್ವಾನ ಇಲ್ಲದಿದ್ದರೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಮುಖಂಡ ಕೊಟ್ರೇಶಪ್ಪ ಬಸೇಗಣ್ಣಿ ವೇದಿಕೆ ಏರಿ ಕುಳಿತುಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಹ ವೇದಿಕೆಯಲ್ಲಿ ಸಚಿವರ ಹಿಂದೆ–ಮುಂದೆ ನಿಂತುಕೊಂಡಿದ್ದರು. ಇದನ್ನೆಲ್ಲ ನೋಡಿದರೂ ಜಿಲ್ಲಾಧಿಕಾರಿ ಮೌನವಾಗಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು ಕಾಂಗ್ರೆಸ್ ಮುಖಂಡರಿಗೆ ಸೀಟು ಬಿಟ್ಟುಕೊಟ್ಟು ನಿಂತುಕೊಂಡೇ ಕಾರ್ಯಕ್ರಮ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.