ADVERTISEMENT

ಹಾವೇರಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ: ಆರೆಂಜ್ ಅಲರ್ಟ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:59 IST
Last Updated 20 ಆಗಸ್ಟ್ 2025, 2:59 IST
<div class="paragraphs"><p>ಹಾವೇರಿಯಲ್ಲಿ ಮಂಗಳವಾರ ಸುರಿದ ಮಳೆಯಲ್ಲಿಯೇ ಮಹಿಳೆಯರಿಬ್ಬರು ಕೊಡೆ ಹಿಡಿದು ನಡೆದುಕೊಂಡು ಹೋದರು</p><p></p></div>

ಹಾವೇರಿಯಲ್ಲಿ ಮಂಗಳವಾರ ಸುರಿದ ಮಳೆಯಲ್ಲಿಯೇ ಮಹಿಳೆಯರಿಬ್ಬರು ಕೊಡೆ ಹಿಡಿದು ನಡೆದುಕೊಂಡು ಹೋದರು

   

ಹಾವೇರಿ: ಜಿಲ್ಲೆಯಾದ್ಯಂತ ಮಂಗಳವಾರ ಇಡೀ ದಿನ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ನಿರಂತರ ಮಳೆ ಸುರಿಯಿತು. ಮಳೆಯಿಂದಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದ್ದರಿಂದ, ಆಗಸ್ಟ್ 20ರಂದು ಜಿಲ್ಲೆಯ ಎಲ್ಲೆ ಶಾಲೆ–ಕಾಲೇಜು, ಅಂಗನವಾಡಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ADVERTISEMENT

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಭಾನುವಾರದಿಂದಲೇ ಬಿಡುವು ನೀಡುತ್ತ ಮಳೆಯಾಗುತ್ತಿದೆ. ಮಂಗಳವಾರವೂ ಉತ್ತಮ ಮಳೆ ಸುರಿಯಿತು. ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ಜೋರು ಮಳೆ ಆಯಿತು.

ಮಳೆಯ ನಡುವೆಯೂ ಆಗಾಗ ಜೋರು ಗಾಳಿ ಬೀಸಿತು. ಇಡೀ ದಿನ ಚಳಿಯ ಅನುಭವವಿತ್ತು. ನಿತ್ಯದ ಕೆಲಸಕ್ಕೆ ಹೊರಟಿದ್ದ ಜನರು, ಜರ್ಕಿನ್ ಹಾಕಿಕೊಂಡು ಸಂಚರಿಸಿದರು. ಹಲವರು ಕೊಡೆ ಹಿಡಿದು ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಮಳೆಯಿಂದ ಹಲವು ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ಬಸ್‌ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ನೀರು ನಿಂತುಕೊಂಡು, ಜನರ ಓಡಾಟಕ್ಕೆ ಅಡಚಣೆ ಉಂಟಾಯಿತು.

ಹಾವೇರಿಯ ಹಳೇ ಪಿ.ಬಿ. ರಸ್ತೆ, ಎಂ.ಜಿ.ರಸ್ತೆ, ಬಸವೇಶ್ವರನಗರ, ದಾನೇಶ್ವರಿನಗರ, ಶಿವಾಜಿನಗರ, ಮಂಜುನಾಥ ನಗರ, ಅಶ್ವಿನಿನಗರ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ, ಇಜಾರಿ ಲಕಮಾಪುರ, ಹಾನಗಲ್ ರಸ್ತೆ, ಗುತ್ತಲ ರಸ್ತೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಜೋರು ಮಳೆ ಸುರಿಯಿತು.

ಹಾವೇರಿ ಮಾರುಕಟ್ಟೆ ಪ್ರದೇಶದಲ್ಲಿಯೂ ಹಲವು ಕಡೆ ನೀರು ನಿಂತಿದ್ದು ಕಂಡುಬಂತು. ಮಾರುಕಟ್ಟೆಯ ಹಲವು ಕಾಲುವೆಗಳು ಹೂಳು ತುಂಬಿಕೊಂಡಿದ್ದರಿಂದ, ಅದರಲ್ಲಿಯ ನೀರು ರಸ್ತೆ ಮೇಲೆ ಹರಿಯಿತು.

ನಾಗೇಂದ್ರನಮಟ್ಟಿಯ ರೈಲ್ವೆ ಕೆಳಸೇತುವೆಯಲ್ಲಿಯೂ ನೀರು ಹರಿಯಿತು. ಇದರಿಂದ ಕೆಳಸೇತುವೆ ಮೂಲಕ ಓಡಾಡುವ ಜನರಿಗೆ ತೊಂದರೆ ಉಂಟಾಯಿತು.

ರಜೆ ಘೋಷಿಸಿ ಆದೇಶ: ನಿರಂತರವಾಗಿ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಶಾಲೆ–ಕಾಲೇಜು, ಅಂಗನವಾಡಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಆ. 20ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

‘ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಕ್ಕಳು ಶಾಲೆಗೆ ಹೋಗಿ ಬರಲು ತೊಂದರೆ ಆಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಆದೇಶದಲ್ಲಿ ತಿಳಿಸಿದ್ದಾರೆ.

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆಯಡಿ ಜಿಲ್ಲೆಯ ಎಲ್ಲ ಶಾಲೆ–ಕಾಲೇಜು, ಅಂಗನವಾಡಿ, ಶೈಕ್ಷಣಿಕ ಸಂಸ್ಥೆಗಳಿಗೆ ಆಗಸ್ಟ್ 20ರಂದು ಒಂದು ದಿನ ರಜೆ ಘೋಷಿಸಲಾಗಿದೆ. ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಈ ರಜೆ ದಿನವನ್ನು ಸಾರ್ವಜನಿಕ ರಜೆ ದಿನದಂದು ಹೆಚ್ಚುವರಿ ತರಗತಿ ನಡೆಸಿ ಹೊಂದಾಣಿಕೆ ಮಾಡಿಕೊಳ್ಳುವಂತೆಯೂ ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

ಗೋಡೆ ಕುಸಿತ: ಹಾನಗಲ್ ತಾಲ್ಲೂಕಿನ ಶಾಡಗುಪ್ಪಿ ಗ್ರಾಮದ ಗೌರಮ್ಮ ಆನವಟ್ಟಿ ಅವರ ಹಂಚಿನ ಮನೆಯ ಗೋಡೆ ಸೋಮವಾರ ರಾತ್ರಿ ಕುಸಿದು ಬಿದ್ದಿದೆ. ಗ್ರಾಮದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದ ಶಿಥಿಲಗೊಂಡು ಮನೆಯ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸತತ ಮಳೆ: ತುಂಬಿ ಹರಿಯುತ್ತಿರುವ ನದಿ, ಹಳ್ಳ

‌ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಸತತ ಐದಾರು ದಿನಗಳಿಂದ ನಿಂತರವಾಗಿ ಸುರಿಯುತ್ತಿರುವ ಮಳೆಯಿಂದ ಶ್ರಾವಣ ಮಾಸದ ಕೊನೆಯ ಮಂಗಳವಾರದ ಅಂಗವಾಗಿ ದೂರದ ದೇವಸ್ಥಾನಗಳಿಗೆ ತೆರಳಿದ ಭಕ್ತರು ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಜಿಟಿ ಜಿಟಿ ಮಳೆಯಲ್ಲಿಯೇ ಬಸ್‌ ಹತ್ತಿದ್ದು ಕಂಡು ಬಂದಿತು.

ಇಲ್ಲಿನ ವಾಗೀಶ ನಗರದ ಚೌಡೇಶ್ವರಿ ದೇವಸ್ಥಾನ, ವೀರಭದ್ರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಮತ್ತು ಅನ್ನ ಪ್ರಸಾದ ವಿತರಣೆ ನಡೆಯಿತು.

ಐದಾರು ದಿನಗಳ ಮಳೆಯಿಂದಾಗಿ ಮನೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ದರು ಶೀತ ಹೆಚ್ಚಾಗಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುವಂತಾಗಿದೆ. ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ಎಡತಾಕುವಂತಾಗಿದೆ.

ಹೆಚ್ಚಿನ ಮಳೆಯಿಂದ ತಾಲ್ಲೂಕಿನ ಕುಮಾರಪಟ್ಟಣದ ಸೇತುವೆ ಬಳಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪುವ ಹಂತಕ್ಕೆ ಬಂದಿದೆ. ತಾಲ್ಲೂಕಿನ ಹಿರೇಮಾಗನೂರ, ಚಿಕ್ಕಮಾಗನೂರು, ಕುಪ್ಪೇಲೂರ, ಲಿಂಗದಹಳ್ಳಿ ಬಳಿ ಹರಿಯುವ ಕುಮಧ್ವತಿ ನದಿ ಕೂಡ ತುಂಬಿ ಹರಿಯುತ್ತಿದೆ. ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟು ತೆಗ್ಗುಗುಂಡಿಗಳು ಬಿದ್ದಿವೆ.

ಸತತ ಮಳೆಯಿಂದಾಗಿ ಮಕ್ಕಳಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಧಾರವಾಡ ಹೆಚ್ಚುವರಿ ಆಯುಕ್ತರ ಸೂಚನೆ ಮೇರೆಗೆ ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯಶಿಕ್ಷಕರ ತುರ್ತು ಗಮನಕ್ಕೆ ತರಲಾಗಿದೆ.

ಈಗಾಗಲೇ ಮಳೆಯಿಂದ ಶಾಲಾ ಕೊಠಡಿಗಳು, ಮೈದಾನ ಹಾಗೂ ಶೌಚಾಲಯದ ಹಾನಿಯಾಗಿದ್ದಲ್ಲಿ ಪೋಟೊ ಸಮೇತ ವರದಿ ಮಾಡುವುದು. ಮುಂದಿನ ಮೂರು ನಾಲ್ಕು ದಿನಗಳ ಕಾಲ ಹೆಚ್ಚು ಮಳೆ ಇರುವುದ ರಿಂದ ಕಾಳಜಿ ವಹಿಸಲು ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಯಕ ತಿಳಿಸಿದರು.

ಸತತ ಮಳೆಯಿಂದಾಗಿ ಮೈದಾನ ತೇವಾಂಶದಿಂದ ಕೂಡಿದ್ದರಿಂದ ತಾಲ್ಲೂಕಿನಲ್ಲಿ ನಡೆಯಬೇಕಿದ್ದ ಚಳಗೇರಿ, ಕುಪ್ಪೇಲೂರ, ಹಲಗೇರಿ, ದೇವರಗುಡ್ಡದ ಮಂಡಲ ಮಟ್ಟದ ಕ್ರೀಡಾಕೂಟ ಮಂದೂಡಲಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭಾಕರ ಚಿಂದಿ ತಿಳಿಸಿದರು. ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದ್ದು ಮಳೆ ಹೆಚ್ಚಾಗಿದ್ದರಿಂದ ರೈತರು ಬೆಳ್ಳುಳ್ಳಿ ಕಿತ್ತು ಹೊಲದಲ್ಲಿಯೇ ಕೈಬಿಟ್ಟಿದ್ದಾರೆ. ಬೆಳ್ಳುಳ್ಳಿ ಬೆಳೆಯನ್ನು ಮನೆಗೆ ತರಲು ಮಳೆ ಅವಕಾಶ ನೀಡುತ್ತಿಲ್ಲ ಎಂದು ಅಂತರವಳ್ಳಿ, ಅಸುಂಡಿ, ಹೂಲಿಹಳ್ಳಿ, ಇಟಗಿ, ಯರೇಕುಪ್ಪಿ, ಮುಷ್ಟೂರು, ಮುದೇನೂರು, ಲಿಂಗದಹಳ್ಳಿ ಭಾಗದ ರೈತರು ತಮ್ಮ ಅಳಲನ್ನು ತೋಡಿಕೊಂಡರು.

24 ಗಂಟೆಯಲ್ಲಿ 0.47 ಸೆಂ.ಮೀ. ಮಳೆ

‘ಹಾವೇರಿ ಜಿಲ್ಲೆಯಾದ್ಯಂತ ಸೋಮವಾರ (ಆ. 18) ಬೆಳಿಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ 0.47 ಸೆಂ.ಮೀ. ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘24 ಗಂಟೆಯಲ್ಲಿ ವಾಡಿಕೆಯಂತೆ 0.37 ಸೆಂ.ಮೀ. ಮಳೆಯಾಗಬೇಕಿತ್ತು. ಸರಾಸರಿ 0.47 ಸೆಂ.ಮೀ. ಮಳೆಯಾಗಿದೆ’ ಎಂದು ಹೇಳಿದೆ.

‘ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ಶಿಗ್ಗಾವಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಣೆಬೆನ್ನೂರು, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ’ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.