
ಹಾವೇರಿ: ಇಲ್ಲಿಯ ಕೋಳೂರು–ಗಣಜೂರು ಕೈಗಾರಿಕಾ ಪ್ರದೇಶದ ಜಾಗದಲ್ಲಿರುವ ಕೆಂಪು ಮಣ್ಣು ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಇದರ ತಡೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ಬೇಜವಾಬ್ದಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಕಿಡಿಕಾರಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
‘ಜಿಲ್ಲೆಯಲ್ಲಿ ಮರಳು ಮತ್ತು ಮಣ್ಣು ಕದಿಯುವುದು ಗೊತ್ತಾಗುವುದಿಲ್ಲವೇ? ಸುಳಿವು ಸಿಗದಂತೆ ಕದಿಯಲು ಅದೇನು ಬಂಗಾರವೇ ? ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸರ್ಕಾರದ ಜಾಗದಲ್ಲಿನ ಮಣ್ಣು ಸಾಗಾಟವಾಗುತ್ತಿದ್ದರೂ ಏಕೆ ಮೌನ ವಹಿಸಿದ್ದೀರಿ’ ಎಂದು ಪ್ರಶ್ನಿಸಿದರು. ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
‘ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ಸಾಲುಗಟ್ಟಿ ವಾಹನಗಳಲ್ಲಿ ಮಣ್ಣು ಮತ್ತು ಮರಳು ಸಾಗಾಟ ಮಾಡಲಾಗುತ್ತಿರುವ ಫೋಟೊ, ವಿಡಿಯೊಗಳಿವೆ. ನಿಮಗೆ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿದ್ದೀರಿ ಎಂದರೆ ಏನರ್ಥ’ ಎಂದರು.
ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ‘ಕೆಐಎಡಿಬಿ ಅಧಿಕಾರಿಗಳಿಗೂ ಜವಾಬ್ದಾರಿ ಇರಬೇಕು. ಭೂಮಿಯ ಮಾಲೀಕತ್ವ ಪಡೆದ ನಂತರ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ಸುಮ್ಮನಿದ್ದಾರೆ. ಹಲವು ಬಾರಿ ಸಭೆ ಮಾಡಿದರೂ ವಿಷಯವನ್ನು ಗಮನಕ್ಕೆ ತಂದಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಅದಕ್ಕೂ ಗರಂ ಆದ ಸಚಿವ, ‘ಇದು ಉತ್ತರವಲ್ಲ. ಯಾವುದೋ ಒಂದೆರೆಡು ವಾಹನ ಹಿಡಿದು ಪ್ರಕರಣ ದಾಖಲಿಸುವ ಔಪಚಾರಿಕ ಕೆಲಸ ಬೇಕಿಲ್ಲ. ಜಿಲ್ಲೆಯ ನದಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ತಡೆಗಟ್ಟಬೇಕು. ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಮಣ್ಣು ಕಾಯಲು ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.