ADVERTISEMENT

ಹಿಮ್ಸ್ ನೀಡಿದ್ದಕ್ಕೆ‌ ಧನ್ಯವಾದ; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 11:08 IST
Last Updated 7 ಜನವರಿ 2026, 11:08 IST
<div class="paragraphs"><p>ಹಿಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು</p></div>

ಹಿಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು

   

ಹಾವೇರಿ: 'ಹಾವೇರಿ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ಹಿಮ್ಸ್) ಉದ್ಘಾಟನೆ ಆಗಿರುವುದರಿಂದ ಜಿಲ್ಲೆಯ ಜನರ ಕನಸು ನನಸಾಗುತ್ತಿದೆ. ಚಿಕಿತ್ಸೆಗಾಗಿ ಹುಬ್ಬಳ್ಳಿ ಹಾಗೂ ದಾವಣಗೆರೆಗೆ ಹೋಗುವುದನ್ನು ತಪ್ಪಿಸಲು ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ' ಎಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಒತ್ತಾಯಿಸಿದರು.

ನಗರದ ದೇವಗಿರಿ ರಸ್ತೆಯಲ್ಲಿರುವ ಹಿಮ್ಸ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡ 'ಹಿಮ್ಸ್ ಉದ್ಘಾಟನಾ ಸಮಾರಂಭ'ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಅವರು ಹಕ್ಕೊತ್ತಾಯ ಮಾಡಿದರು.

ADVERTISEMENT

'ಹಾವೇರಿ‌ ಜಿಲ್ಲೆ ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿದೆ. ಹಿಮ್ಸ್ ವೈದ್ಯರ ಬೋಧನೆಗಾಗಿ ಜಿಲ್ಲಾಸ್ಪತ್ರೆ ನೀಡಿದ್ದೇವೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಚೆನ್ನಾಗಿಲ್ಲ. ಎಲ್ಲವೂ ಹಾಳಾಗಿದೆ. ಜಾಗವೂ ಚಿಕ್ಕದಾಗಿದೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

'ಸಣ್ಣಪುಟ್ಟ ಆರೋಗ್ಯ ಸೌಲಭ್ಯವಿದ್ದರೂ ಜಿಲ್ಲೆಯ ಜನರು ಹುಬ್ಬಳ್ಳಿ ಹಾಗೂ ದಾವಣಗೆರೆಗೆ ಹೋಗುತ್ತಿದ್ದಾರೆ. ಸ್ಥಳೀಯವಾಗಿಯೇ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಬೇಕು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಬೇಕು' ಎಂದು ಒತ್ತಾಯಿಸಿದರು.

ಶಾಸಕ‌ ರುದ್ರಪ್ಪ ಲಮಾಣಿ, 'ಜನರಿಗೂ ಗುಣಮಟ್ಟದ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು. ಮುಖ್ಯಮಂತ್ರಿಯವರು ದಯವಿಟ್ಟು ಮಂಜೂರು ಮಾಡಿ ಇದೇ ಕಾರ್ಯಕ್ರಮದಲ್ಲಿ ಘೋಷಿಸಬೇಕು' ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, 'ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ. ಮುಖ್ಯಮಂತ್ರಿ ಅವರು ಘೋಷಿಸಬೇಕು' ಎಂದು ಕೋರಿದರು.

ಸಚಿವ ಎಚ್.ಕೆ.ಪಾಟೀಲ ಸಹ ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು‌ ಮಾಡಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.