ಹಾವೇರಿ: ಇದೇ ಮೊದಲ ಬಾರಿಗೆ ನಗರದಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಟೆಕ್ವಾಂಡೊ ಟೂರ್ನಿಗೆ ಯಾಲಕ್ಕಿ ಕಂಪಿನ ನಾಡು ಸಜ್ಜಾಗಿದೆ. ನಗರದಲ್ಲಿರುವ ಸಿದ್ದಪ್ಪ ಹೊಸಮನಿ ಜಿಲ್ಲಾ ಕ್ರೀಡಾಂಗಣದಲ್ಲಿ ಟೂರ್ನಿಗೆ ಮ್ಯಾಟ್‌ಗಳನ್ನು ಹಾಕಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಟೂರ್ನಿಯ ಆತಿಥ್ಯವನ್ನು ಈ ಬಾರಿ ಹಾವೇರಿ ಜಿಲ್ಲೆಗೆ ನೀಡಲಾಗಿದೆ. ಇದರಿಂದಾಗಿ, ಟೂರ್ನಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಕೇಂದ್ರ ಕಚೇರಿ ಹಾಗೂ ಜಿಲ್ಲೆಯ ಉಪನಿರ್ದೇಶಕರ ಕಚೇರಿ ಸಹಯೋಗದಲ್ಲಿ ಟೂರ್ನಿ ಹಮ್ಮಿಕೊಳ್ಳಲಾಗಿದೆ. 2024–25ನೇ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಟೂರ್ನಿ ನಡೆಯಲಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿರುವ ಪ‍್ರತ್ಯೇಕ ಜಾಗದಲ್ಲಿ ಟೂರ್ನಿ ಆಯೋಜನೆಗೆ ಮ್ಯಾಟ್‌ಗಳ ಕಣಗಳನ್ನು ಸಿದ್ದಪಡಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಇದಕ್ಕೆ ತಕ್ಕಂತೆ ಎರಡು ಕಡೆಗಳಲ್ಲಿ ಮ್ಯಾಟ್‌ಗಳನ್ನು ಹಾಕಲಾಗಿದೆ. ತೀರ್ಪುಗಾರರು ಹಾಗೂ ಇತರರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ.
ಹಾವೇರಿಯಲ್ಲಿ ಈ ಟೂರ್ನಿ ನಡೆಯುತ್ತಿರುವ ಹೆಮ್ಮೆ ಜಿಲ್ಲೆಯದ್ದಾಗಿದೆ. ವಿದ್ಯಾರ್ಥಿ–ವಿದ್ಯಾರ್ಥಿನಿಯರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಬೆಂಗಳೂರು, ವಿಜಯಪುರ, ಬೆಳಗಾವಿ, ತುಮಕೂರು, ಮೈಸೂರು, ಧಾರವಾಡ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಬುಧವಾರವೇ ನಗರಕ್ಕೆ ಬಂದಿದ್ದಾರೆ. ಅವರೆಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಸಹ ಮಾಡಿಸಿದ್ದಾರೆ.
‘ಹಾವೇರಿ ಜಿಲ್ಲೆಗೆ ಇದೊಂದು ಒಳ್ಳೆಯ ಅವಕಾಶ ಸಿಕ್ಕಿದೆ. ಟೆಕ್ವಾಂಡೊ ಟೂರ್ನಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಉಮೇಶಪ್ಪ ತಿಳಿಸಿದರು.
‘ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಟೂರ್ನಿ ಆಯೋಜಿಸಲಾಗುವುದು. ಪ್ರತಿಯೊಂದು ಸ್ಪರ್ಧೆಯನ್ನೂ ಅಚ್ಚುಕಟ್ಟಾಗಿ ನ್ಯಾಯಸಮ್ಮತವಾಗಿ ನಡೆಸಿಕೊಡಲು ಪರಿಣಿತ ತೀರ್ಪುಗಾರರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು.
ಏನಿದು ಟೆಕ್ವಾಂಡೊ ?
ಕರಾಟೆ ರೀತಿಯಲ್ಲಿಯೇ ಟೇಕ್ವಾಂಡೊ ಕೂಡ ಒಂದು ಸಮರಕಲೆ. ಕೋರಿಯನ್ನರು 1945ರ ಸಮಯದಲ್ಲಿ ತಮ್ಮ ಆತ್ಮರಕ್ಷಣೆಗಾಗಿ ಟೇಕ್ವಾಂಡೊ ಹುಟ್ಟುಹಾಕಿದ್ದರು. ಟೆಕ್ವಾಂಡೊ ಎಂದರೆ ಕೈ ಹಾಗೂ ಕಾಲಿನಿಂದ ಕಿಕ್ ಪಂಚ್ ಮಾಡುವುದು. ಜೊತೆಗೆ ಎದುರಾಳಿಯ ಕಿಕ್ ಹಾಗೂ ಪಂಚ್‌ನ್ನು ತಡೆಯುವುದು ಎಂದರ್ಥ. ವಿದ್ಯಾರ್ಥಿಗಳ ತೂಕದ ಆಧಾರದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ ಎಂದು ತೀರ್ಪುಗಾರರು ಹೇಳಿದರು.
ಟೂರ್ನಿಗೆ ಚಾಲನೆ ತೂಕದ ಆಧಾರದಲ್ಲಿ ಸ್ಪರ್ಧೆಗಳು ನಡೆಯಲಿದ್ದು ನೋಂದಣಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ತೂಕವನ್ನು ದಾಖಲಿಸಿಕೊಳ್ಳಲಾಗಿದೆ. ನೋಂದಾಯಿತ ವಿದ್ಯಾರ್ಥಿಗಳು ಹಾಗೂ ಅವರ ತರಬೇತುದಾರರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ. ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಟೂರ್ನಿಗೆ ಚಾಲನೆ ನೀಡಲಾಯಿತು. ಗುರುವಾರ ಬೆಳಿಗ್ಗೆಯಿಂದ ಸ್ಪರ್ಧೆಗಳು ನಡೆಯಲಿದ್ದು ಶುಕ್ರವಾರ ಟೂರ್ನಿಯ ಸಮಾರೋಪ ಸಮಾರಂಭ ಜರುಗಲಿದೆ. ಅದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.