ಹಾವೇರಿ: ‘ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಹಾಸ್ಟೆಲ್ ವಿದ್ಯಾರ್ಥಿನಿ ಮೇಲೆ ಆತ್ಯಾಚಾರವೆಸಗಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿರುವ ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಲ್ಐಸಿ ಪ್ರಧಾನ ಕಚೇರಿ ಬಸ್ ತಂಗುದಾಣದಿಂದ ವಾಲ್ಮೀಕಿ ವೃತ್ತದವರೆಗೂ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ, ವಾಲ್ಮೀಕಿ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟಿರುವುದು ಖಂಡನೀಯ. ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ವಿದ್ಯಾಭ್ಯಾಸ ಮುಗಿಸಿ ಸುರಕ್ಷಿತವಾಗಿ ಮನೆಗೆ ತಲುಪಬೇಕಾದ ಹಾಸ್ಟೆಲ್ ವಿದ್ಯಾರ್ಥಿನಿಯನ್ನು ಬೆಂಕಿ ಹಚ್ಚಿ ಸುಟ್ಟಿರುವುದು ಘನಘೋರ ದುರಂತ. ವಿದ್ಯಾರ್ಥಿನಿಯರ ಮೇಲೆ ಮೇಲಿಂದ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ, ಸುಲಿಗೆಗಳು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದು ದೂರಿದರು.
‘ಹಾವೇರಿ ಹೊರ ವಲಯದಲ್ಲಿರುವ ಶಾಲಾ–ಕಾಲೇಜು, ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬೀಟ್ ಪೊಲೀಸ್‌ರನ್ನು ನಿಯೋಜಿಸಬೇಕು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ದುರಸ್ತಿಯಲ್ಲಿರುವ ಕ್ಯಾಮೆರಾಗಳನ್ನು ಸರಿಪಡಿಸಬೇಕು. ಶಾಲಾ–ಕಾಲೇಜು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಪದೇಶಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಗಂಗಾ ಯಲ್ಲಾಪುರ, ಪ್ರೇಮಾ ಪೂಜಾರ, ಅರುಣ್ ನಾಗವತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.