
ಹಾವೇರಿ: ಬೇಸಿಗೆಯ ಬಿಸಿಲು ನಿಧಾನವಾಗಿ ಏರುತ್ತಿದ್ದು, ನೀರಿನ ದಾಹವೂ ಹೆಚ್ಚಾಗುತ್ತಿದೆ. ಕೊಳವೆ ಬಾವಿಗಳ ನಿರ್ವಹಣೆ ಕೊರತೆಯಿಂದ ಮಳೆಗಾಲ–ಚಳಿಗಾಲದಲ್ಲಿಯೂ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಳ್ಳಿಗಳಲ್ಲಿ ಈಗ ನೀರಿಗೆ ಹಾಹಾಕಾರ ಶುರುವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಕೆಲವೇ ದಿನಗಳಲ್ಲಿ ಜಿಲ್ಲೆಯ 240 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಿದೆ..
2025ರ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ 171 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ಈ ವರ್ಷ 240 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಭಣಿಸಬಹುದೆಂದು ಅಂದಾಜಿಸಲಾಗಿದೆ. ಮುಂಬರುವ ನೀರಿನ ಸಮಸ್ಯೆಯನ್ನು ಎದುರಿಸಲು ಜಿಲ್ಲಾಡಳಿತ ಈಗಾಗಲೇ ತಯಾರಿ ನಡೆಸಿದೆ. ಬತ್ತಿಹೋದ ಹಾಗೂ ಬಂದ್ ಆಗಿರುವ ಕೊಳವೆಬಾವಿಗಳನ್ನು ಪುನಃ ಆರಂಭಿಸಲು ಕೆಲಸ ಆರಂಭಿಸಿದೆ.
ಜಿಲ್ಲಾ ಪಂಚಾಯಿತಿ ಅಡಿಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಹಳ್ಳಿಗಳ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅದರ ಮೂಲಕ, ಜಿಲ್ಲೆಯ 155 ಗ್ರಾಮ ಪಂಚಾಯಿತಿ ವ್ಯಾಪ್ತಿಯ 240 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಬಹುದೆಂದು ಪಟ್ಟಿ ಸಿದ್ಧಪಡಿಸಿದೆ.
ಮಳೆಗಾಲದಲ್ಲಿ ತಕ್ಕಮಟ್ಟಿಗೆ ಮಳೆಯಾಗಿದ್ದರಿಂದ, ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. ಮಳೆ ನೀರು ಹಾಗೂ ನೀರಾವರಿ ಯೋಜನೆಗಳ ನೀರಿನಿಂದ ಕೆರೆಗಳು ಭರ್ತಿಯಾಗಿದ್ದವು. ಈಗ, ಬೇಸಿಗೆ ಶುರುವಾಗಿದ್ದರಿಂದ ನಿಧಾನವಾಗಿ ನೀರು ಕಡಿಮೆಯಾಗುತ್ತಿದೆ. ಕೆರೆಗಳಲ್ಲಿಯೂ ನೀರಿನ ಪ್ರಮಾಣ ಕ್ರಮೇಣ ತಗ್ಗುತ್ತಿದೆ. ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲೆಯ ಬ್ಯಾಡಗಿ, ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಜಿಲ್ಲೆಯ ತಾಲ್ಲೂಕುಗಳ ಪೈಕಿ ಹಿರೇಕೆರೂರು ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 61 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಬಗ್ಗೆ ಆತಂಕವಿದೆ.
ರಾಣೆಬೆನ್ನೂರಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಹಳ್ಳಿಗಳಲ್ಲಿ ಮಾತ್ರ ನೀರಿನ ಸಮಸ್ಯೆಯಾಗುವ ಬಗ್ಗೆ ಅಂದಾಜಿಸಲಾಗಿದೆ. ಈ ಹಳ್ಳಿಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ.
‘ಬೇಸಿಗೆ ಆರಂಭದ ದಿನಗಳಲ್ಲಿಯೇ ಪಂಚಾಯಿತಿಯಿಂದ ಮನೆಗೆ ಪೂರೈಸುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು, ಈಗ ಐದಾರು ದಿನಕ್ಕೆ ಬರುತ್ತಿದೆ. ಕೆಲವು ಕಡೆಗಳಲ್ಲಿ ಕೊಳವೆ ಬಾವಿಗಳು ಬಂದ್ ಆಗಿರುವುದಾಗಿ ಪಂಚಾಯಿತಿಯವರು ಹೇಳುತ್ತಿದ್ದಾರೆ. ಈಗ ತಳ್ಳುಗಾಡಿಯಲ್ಲಿ ದೂರದ ಸ್ಥಳಕ್ಕೆ ಹೋಗಿ ನೀರು ತರುತ್ತಿದ್ದೇವೆ. ಈಗಾಗಲೇ ನಮಗೆ ನೀರಿನ ಹಾಹಾಕಾರ ಶುರುವಾಗಿದೆ’ ಎಂದು ಹಿರೇಕೆರೂರು ತಾಲ್ಲೂಕಿನ ಕೋಡ ಪಂಚಾಯಿತಿ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.
519 ಕೊಳವೆಬಾವಿಗಳು ಬಂದ್: ನೀರಿನ ಸಮಸ್ಯೆ ಉಲ್ಭಣಿಸಬಹುದಾದ 240 ಹಳ್ಳಿಗಳಲ್ಲಿ 1,405 ಕೊಳವೆಬಾವಿಗಳಿವೆ. ಇದರಲ್ಲಿ ಕೇವಲ 904 ಕೊಳವೆಬಾವಿಗಳಲ್ಲಿ ಮಾತ್ರ ನೀರು ಬರುತ್ತಿದೆ. 519 ಕೊಳವೆಬಾವಿಗಳು ಬಂದ್ ಆಗಿದ್ದು, ಇದು ನೀರಿನ ಸರಬರಾಜು ಮೇಲೆ ಪರಿಣಾಮ ಬೀರಿದೆ.
13 ಕಡೆಗಳ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. 60 ಕಡೆಗಳಲ್ಲಿ ನೀರಿನ ಪೈಪ್ ಅಳವಡಿಕೆಯಾಗಬೇಕಿದೆ. 52 ಕಡೆಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಬೇಕಿದೆ. 34 ಕಡೆಗಳಲ್ಲಿ ಇತರೆ ಕಾರಣಗಳಿಂದ ಕೊಳವೆಬಾವಿಗಳು ಬಂದ್ ಆಗಿವೆ.
2024ರಲ್ಲಿ ಮಳೆಯಾಗದೇ ಅಂತರ್ಜಲ ಮಟ್ಟ ಕುಸಿದಿತ್ತು. ಇದರಿಂದಾಗಿ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ಕೊಳವೆಬಾವಿಗಳು ಹಾಗೂ ಕೆರೆಗಳು ಬತ್ತಿದ್ದವು. ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. 2025ರಲ್ಲಿ ನೀರಿನ ಸಮಸ್ಯೆ ಸ್ವಲ್ಪ ಕಡಿಮೆಯಿತ್ತು. ಆದರೆ, ಈ ವರ್ಷ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
‘ಅವೈಜ್ಞಾನಿಕ ಕಾಮಗಾರಿ’
‘ಜಿಲ್ಲೆಯ ಕೆಲವು ಕಡೆಗಳಲ್ಲಿ ನೀರಿನ ಲಭ್ಯತೆ ಚೆನ್ನಾಗಿದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳನ್ನ ಕೈಗೊಂಡು ನೀರು ಸರಬರಾಜಿನಲ್ಲಿ ಸಮಸ್ಯೆ ತಂದೊಡ್ಡಿಕೊಳ್ಳುತ್ತಿದ್ದಾರೆ’ ಎಂದು ನಿವಾಸಿಗಳು ದೂರುತ್ತಿದ್ದಾರೆ. ‘ಕೊಳವೆಬಾವಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದಿಲ್ಲ. ಏನಾದರೂ ಸಮಸ್ಯೆಯಾದರೂ ಗಮನಹರಿಸುವುದಿಲ್ಲ. ನೀರು ಬರುತ್ತಿಲ್ಲವೆಂದು ಜನರು ಪ್ರತಿಭಟನೆ ಮಾಡಿದಾಗಲೇ ಅಧಿಕಾರಿಗಳು ಕೊಳವೆಬಾವಿ ಬಳಿ ಹೋಗುತ್ತಾರೆ. ಇಂಥ ಅಧಿಕಾರಿಗಳ ನಿರ್ಲಕ್ಷ್ಯವೂ ನೀರಿನ ಸಮಸ್ಯೆಗೆ ಕಾರಣ. ಕುಡಿಯುವ ನೀರಿನ ವಿಚಾರದಲ್ಲಿ ಲೋಪ ಎಸಗುವ ಹಾಗೂ ಜನರಿಗೆ ತೊಂದರೆ ಮಾಡುವ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಎಚ್ಚರಿಕೆ ರವಾನಿಸಬೇಕು’ ಎಂದು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.