ADVERTISEMENT

ಹಾವೇರಿ: ನೋಡ ಬನ್ನಿ ನಮ್ಮೂರ, ಶಿಲ್ಪಕಲೆಗಳ ತವರೂರ!

ಇಂದು ವಿಶ್ವ ಪ್ರವಾಸೋದ್ಯಮ ದಿನ, ಹಾವೇರಿಯಲ್ಲಿವೆ ನೂರಾರು ಪ್ರೇಕ್ಷಣೀಯ ಸ್ಥಳಗಳು

ಎಂ.ಸಿ.ಮಂಜುನಾಥ
Published 26 ಸೆಪ್ಟೆಂಬರ್ 2019, 19:46 IST
Last Updated 26 ಸೆಪ್ಟೆಂಬರ್ 2019, 19:46 IST
ಕಾಗಿನೆಲೆಯ ವಿಹಂಗಮ ನೋಟ/ ಪ್ರಜಾವಾಣಿ ಚಿತ್ರ
ಕಾಗಿನೆಲೆಯ ವಿಹಂಗಮ ನೋಟ/ ಪ್ರಜಾವಾಣಿ ಚಿತ್ರ   

ಹಾವೇರಿ: ಪ್ರಾಚೀನ ಶಿಲ್ಪಕಲಾ ವೈಭವದಿಂದ ಕೂಡಿದ ನೂರಕ್ಕೂ ಹೆಚ್ಚು ದೇವಾಲಯ, ಕೋಟೆ–ಕೊತ್ತಲಗಳನ್ನು ಹೊಂದಿರುವ ಹಾವೇರಿಯು ಉತ್ತರ ಕರ್ನಾಟಕದ ಹೆಬ್ಬಾಗಿಲು. ಹೇರಳವಾದ ವನಸಿರಿಯ ಜತೆಗೆ ಹಲವು ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿರುವ ಈ ಜಿಲ್ಲೆ, ರಾಜ್ಯದ ಪ್ರಮುಖ ಐತಿಹಾಸಿಕ ಕೇಂದ್ರಗಳಲ್ಲಿ ಒಂದು.

ಕಲ್ಯಾಣ ಚಾಲುಕ್ಯರು, ಪಲ್ಲವರು, ಹೊಯ್ಸಳರು, ರಾಷ್ಟ್ರಕೂಟರು... ಹೀಗೆನಮ್ಮ ರಾಜ್ಯವನ್ನು ಆಳಿದ ರಾಜ–ಮಹಾರಾಜರು ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ತುಂಗಭದ್ರೆ, ಕುಮದ್ವತಿ, ವರದಾ, ಧರ್ಮಾ ನದಿಗಳೂ ಇಲ್ಲಿ ಹರಿಯುತ್ತಿವೆ. ಈ ನದಿಗಳ ದಂಡೆಗಳ ಮೇಲೆ ಅದ್ಭುತ ಶಿಲ್ಪಕಲಾ ವೈಭವದಿಂದ ಕೂಡಿದ ದೇವಾಲಯಗಳನ್ನು ನಿರ್ಮಿಸುವ ಮೂಲಕ, ಕಲೆ ಹಾಗೂ ಸಂಸ್ಕೃತಿಗೆ ಜೀವ ತುಂಬಲಾಗಿದೆ.

‘ಸರ್ಕಾರದಿಂದ ಮಾನ್ಯತೆ ಪಡೆದ 6 ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಅವುಗಳ ಹೊರತಾಗಿ 118 ಪ್ರೇಕ್ಷಣೀಯ ಕೇಂದ್ರಗಳಿವೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಶಿಲ್ಪಕಲೆಗಳೂ ಇಲ್ಲಿವೆ. ಐತಿಹ್ಯವುಳ್ಳ ಸ್ಥಳಗಳನ್ನುಗುರುತಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ’ ಎಂದುಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಮಠದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಅರಿವಿಲ್ಲ. ಹೀಗಾಗಿ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಹಿತಿ ಒದಗಿಸಲಾಗುತ್ತಿದೆ.ಹೋಟೆಲ್‌ಗಳಲ್ಲಿ ಕಾಫಿ ಟೇಬಲ್ ಬುಕ್ ಮೂಲಕವೂ ಇಲ್ಲಿನ ತಾಣಗಳ ಬಗ್ಗೆ ಮಾಹಿತಿ ತಲುಪಿಸುತ್ತಿದ್ದೇವೆ’ ಎಂದರು.

ಕಾಗಿನೆಲೆ ಕನಕ ಗುರುಪೀಠ:ಕಾಗಿನೆಲೆ ದಾಸಶ್ರೇಷ್ಠ ಕನಕದಾಸರ ಮುಕ್ತಿ ಕ್ಷೇತ್ರ. ಅವರ ಇಷ್ಟದೈವ ಆದಿಕೇಶವನ ಗ್ರಾಮ ಕೂಡ.ಕನಕ ಗುರುಪೀಠ ಹಾಗೂ ಕಾಗಿನಲೆ ಅಭಿವೃದ್ಧಿ ಪ್ರಾಧಿಕಾರದ ಬೃಹತ್ ಉದ್ಯಾನ, ಕನಕನ ಕೆರೆ ಮತ್ತಿತರ ಆಕರ್ಷಣೆಗಳಿಂದ ಇದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ. ಮೈಸೂರು ಬೃಂದಾವನ ಮಾದರಿಯ ಸಂಗೀತ ಕಾರಂಜಿ ಇದೆ.

ಪುರಸಿದ್ದೇಶ್ವರ ದೇವಾಲಯ:ಗುತ್ತಲ ರಸ್ತೆಯಲ್ಲಿರುವ ಸಿದ್ದೇಶ್ವರ ಗುಡಿಯನ್ನು (ಗ್ರಾಮಾಧೀಶ) ಸಿದ್ಧನಾಥ, ಪುರಸಿದ್ದೇಶ್ವರ, ವಿಷಪ್ರಹಾರಿ ಎಂದೆಲ್ಲ ಪ್ರಾಚೀನ ಶಾಸನಗಳು ಕರೆದಿವೆ. ಗರ್ಭಗೃಹದ ಶಿಖರ ದ್ರಾವಿಡ ಶೈಲಿಯಲ್ಲಿದ್ದು, ಸುಂದರವಾದ ಚಿಕಣಿ ಕೆತ್ತನೆಯನ್ನು ಹೊಂದಿದೆ. ಈ ಗುಡಿಯ ಎಡಭಾಗಕ್ಕೆ ಉಗ್ರನರಸಿಂಹನ ದೇವಾಲಯವಿದೆ. ‘ಇದು ಶಾಸನಗಳಲ್ಲಿ ಉಲ್ಲೇಖವಾಗಿರುವ ಇಂದ್ರೇಶ್ವರನ ದೇವಸ್ಥಾನವೂ ಆಗಿರಬಹುದು’ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಗಳಗನಾಥ ನದಿಗಳ ಸಂಗಮ:ವರದೆ ಹಾಗೂ ತುಂಗಭದ್ರಾ ನದಿಗಳ ಸಂಗಮಸ್ಥಳ ಗಳಗನಾಥ. ದಂಡೆಯ ಮೇಲಿರುವ ಗಳಗೇಶ್ವರ ದೇವಸ್ಥಾನದಲ್ಲಿಚಾಲುಕ್ಯರ ಕಾಲದ ಶಿಲ್ಪಕಲೆಗಳಿವೆ. ನದಿಗಳ ಮಹಾಪೂರದಿಂದ ಹಾನಿಯಾಗದಂತೆ ದೇವಸ್ಥಾನದಲ್ಲಿ ಎತ್ತರದ ಅಧಿಷ್ಠಾನ ನಿರ್ಮಿಸಲಾಗಿದೆ. ಇಲ್ಲಿ ಶಿಲಾಯುಗದ ಮೆಗಾಲಿಥಿಕ್ ಕಲ್ಲಿನ ಸಮಾಧಿಯ ಜತೆಗೆ, ನೀರಿನ ನಡುಗಡ್ಡೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನವೂ ಇದೆ. ಇದುಕಾದಂಬರಿಕಾರ ಗಳಗನಾಥರ ಹುಟ್ಟೂರು ಹೌದು.

ನವಾಬರ ಕುರುಹು:ನವಾಬರ ಆಡಳಿತಕ್ಕೆ ಒಳಪಟ್ಟಿದ್ದ ಊರು ಸವಣೂರು. ಈಗಲೂ ನವಾಬಿ ಆಡಳಿತದ ಕುರುಹುಗಳು ಇಲ್ಲಿ ಸಿಗುತ್ತವೆ. ಅವರ ಆಡಳಿತದ ಬಂಗಲೆ ಈಗ ಸರ್ಕಾರಿ ಕಚೇರಿಯಾಗಿದೆ. ದ್ವೈತ ಪರಂಪರೆಯ ಯತಿಗಳಾದ ಸತ್ಯಬೋದರಾಯರ ಬೃಂದಾನವೂ ಇದೆ. ಸುಂದರ ದರ್ಬಾರ್ ಹಾಲ್ ತನ್ನ ಇಂಡೋಸಾಸರ್ನಿಕ್‌ ಶೈಲಿಯ ಚಿತ್ರಗಳಿಂದ ವಿಶೇಷವಾಗಿದೆ. ಸಮೀಪದಲ್ಲಿ ಕಲ್ಮಠದಲ್ಲಿ ದೊಡ್ಡಹುಣಸೇಮರ, ವಿಷ್ಣುತೀರ್ಥವು ಪ್ರವಾಸಿ ತಾಣವಾಗಿದೆ. ಇಲ್ಲಿನ ಹುಣಸಿಕಟ್ಟಿ ಮಠ ಅತವಾ ದೊಡ್ಡಹುಣಸೆ ಮರದ ಆವರಣ ತಾಲ್ಲೂಕಿನ ಪ್ರಮುಖ ತಾಣ.

ಅಬಲೂರು–ಮಾಸೂರು:ಸರ್ವಜ್ಞನ ತವರೂರು ಎಂದೇ ಖ್ಯಾತಿ ಪಡೆದ ಊರುಗಳು. ಅಬಲೂರಿನಲ್ಲಿ ಇಲ್ಲಿನ ಬ್ರಹ್ಮೇಶ್ವರ ಮತ್ತು ಸೋಮೇಶ್ವರ ದೇವಾಲಯವಿದೆ. ಮಾಸೂರಿನಲ್ಲಿ ಮದಗದ ಕೆರೆ ಎಂದೇ ಖ್ಯಾತವಾದ ಕೆರೆ ವಿಶಾಲವಾಗಿದ್ದು, ವಲಸೆ ಹಕ್ಕಿಗಳ ತಾಣವೂ ಆಗಿದೆ. ಕುಮದ್ವತಿ ನದಿಯಿಂದ ರೂಪುಗೊಂಡಿರುವ ಈ ಕೆರೆ, ಸುಮಾರು ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ.

ತಾರಕೇಶ್ವರ:ಕದಂಬ ವಂಶಜರ ರಾಜಧಾನಿ ಆಗಿದ್ದ ಹಾನಗಲ್‌ನಲ್ಲಿರುವ ತಾರಕೇಶ್ವರ ದೇವಸ್ಥಾನ ಶಿಲ್ಪಕಲೆಯ ಆಗರವಾಗಿದೆ. ದೇವಸ್ಥಾನದ ಹೊರಗಡೆ ರಾಮಾಯಣ, ಮಹಾಭಾರತ ಹಾಗೂ ಕೃಷ್ಣನ ಜೀವನ ವೃತ್ತಾಂತ ಸಾರುವ ಚಿತ್ರಗಳನ್ನು ಕೆತ್ತಲಾಗಿದೆ. ದೇವಸ್ಥಾನದ ಶಿಖರದಲ್ಲಿ ಶೈವಪುರಾಣವನ್ನು ಪ್ರತಿನಿಧಿಸುವ ಶಿಲ್ಪಗಳಿವೆ. ಸಮೀಪದಲ್ಲೇ ಬಿಲ್ವೇಶ್ವರ, ಈಶ್ವರ ದೇವಸ್ಥಾನವಿದೆ. ಹಾನಗಲ್ ವಿರಕ್ತ ಪರಂಪರೆಯ ಕುಮಾರ ಮಠವೂ ಖ್ಯಾತಿ ಪಡೆದಿದೆ.

ಚೌಡಯ್ಯದಾನಪುರ:ಶಿವಶರಣ ಅಂಬಿಗರ ಚೌಡಯ್ಯ ಇಲ್ಲಿಯೇ ನೆಲೆಸಿ ಲಿಂಗೈಕ್ಯರಾದರೆಂಬ ನಂಬಿಕೆ ಇದೆ. ತುಂಗಭದ್ರ ನದಿ ತೀರದಲ್ಲಿರುವ ಮಂಟಪ ಚೌಡಯ್ಯನ ಗದ್ದುಗೆ ಎಂದೇ ಕರೆಯಲಾಗುತ್ತದೆ. 12ನೇ ಶತಮಾನದ ಮುಕ್ತೇಶ್ವರ ದೇವಾಲಯವಿದೆ.

ಸಾತೇನಹಳ್ಳಿ ಹನುಮ:ಹಿರೇಕೆರೂರಿನಿಂದ 9 ಕಿ.ಮೀ ದೂರದಲ್ಲಿರುವ ಸಾತೇನಹಳ್ಳಿಯಲ್ಲಿರುವ ಆಂಜನೇಯ ದೇವಸ್ಥಾನ, ಕಲ್ಯಾಣದ ಚಾಳುಕ್ಯರ ಕಾಲದ್ದು. ಇಲ್ಲಿರುವ ಹನುಮಂತನ ವಿಗ್ರಹ ವಿಜಯನಗರ ಸಾಮ್ರಾಜ್ಯದ್ದು. ಈ ದೇವಸ್ಥಾನದ ಆವರಣದಲ್ಲಿರುವ ಪೀಠಸ್ಥ ಚತುರ್ಮುಖ ಬ್ರಹ್ಮಶಿರ ಮೂರ್ತಿಯನ್ನು ಸ್ಥಳೀಯರು ಹಟ್ಟಿ ಹಬ್ಬದಂದು ಪೂಜಿಸುತ್ತಾರೆ.

ತುಂಗಭದ್ರಾ ತೀರದ ಐರಣಿ:ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿ ಹತ್ತಿ ಮತ್ತು ಉಣ್ಣೆ ಜವಳಿ ತಯಾರಿಕೆ ಕ್ರೇಂದ್ರವಿದ್ದು, ಸಿದ್ದಾರೂಢರ ಶಿಷ್ಯರಾದ ಯೋಗಿ ಮುಪ್ಪಿನಾರ್ಯರ ಮಠವಿದೆ. ಇಲ್ಲೇ ಸಮೀಪ ಹೊಳೆಆನ್ವೇರಿ ಹೊಯ್ಸಳರ ಕಾಲದ ದೇಗುಲವಿದೆ. ಕದರಮಂಡಲಗಿಯ ಕಾಂತೇಶ್ವರ ದೇವಾಲಯದಲ್ಲಿ ಕನಕದಾಸರು ತಮ್ಮ ‘ಮೋಹನ ತರಂಗಿಣಿ’ ಮಹಾಕಾವ್ಯ ರಚಿಸಿದ್ದಾರೆ.

ಶ್ರೀಮಂತ ಸಂಸ್ಕೃತಿಯ ಬೀಡು

‘ಬೇರೆಲ್ಲ ಜಿಲ್ಲೆಗಳಿಗಿಂತಲೂ ಹಾವೇರಿ ಅತ್ಯಂತಶ್ರೀಮಂತ ಸಂಸ್ಕೃತಿ ಹೊಂದಿದೆ. ಅದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಜನರಿಗೆ ತಿಳಿಸಬೇಕೆಂದೇ ಇಲ್ಲಿನ ಪ್ರವಾಸಿ ತಾಣಗಳು, ಜನರ ಜೀವನ ಶೈಲಿ, ವಿಶೇಷತೆಗಳ ಸಾವಿರಾರು ಫೋಟೊಗಳು ಹಾಗೂ ಸಾಕ್ಷ್ಯಚಿತ್ರಗಳನ್ನು ಸಂಗ್ರಹಿಸಿ ಪ್ರಚಾರ ಮಾಡುತ್ತಿದ್ದೇವೆ’ ಎಂದು ಶಿಗ್ಗಾವಿಯ ‘ಟ್ರೆಕ್’ ಸಂಸ್ಥೆಯ (ಟೂರಿಸಂ ರಿಲೇಟೆಡ್ ಎಂಟರ್‌ಟೈನ್‌ಮೆಂಟ್ ಕಂಪನಿ) ಸುಹಾಸ್ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.