
ಹಾವೇರಿ: ‘ಸಂಪ್ರದಾಯಿಕ ಕಲೆಗಳೇ ನಮ್ಮ ಸಂಸ್ಕೃತಿಯ ತಾಯಿಬೇರು. ಇತ್ತೀಚಿನ ದಿನಗಳಲ್ಲಿ ಸೋಬಾನೆ, ಬೀಸುಕಲ್ಲು ಪದಗಳು, ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದ ವೇಷಗಾರರು ಸೇರಿ ಸಂಪ್ರದಾಯಿಕ ಕಲೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಂಪ್ರದಾಯಿಕ ಕಲೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಕಾಲದಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ, ಮಹಿಳೆಯರು ನಿರಂತರವಾಗಿ ಸೋಬಾನೆ ಪದ ಹಾಡುತ್ತಿದ್ದರು. ಆದರೆ, ಇಂದಿನ ಮಹಿಳೆಯರಿಗೆ ಸೋಬಾನೆ ಪದಗಳೇ ಗೊತ್ತಿಲ್ಲ. ಪಾಶ್ಚಿಮಾತ್ಯದ ಅನುಕರಣೆ ಹಾಗೂ ಆಧುನಿಕ ಕಲೆಗಳಿಗೆ ಮಾರು ಹೋಗಿರುವ ಇಂದಿನ ಯುವಸಮೂಹ, ಮೂಲ ನೆಲೆಯ ಕಲೆಗಳನ್ನು ಮರೆಯುತ್ತಿದ್ದಾರೆ’ ಎಂದು ಹೇಳಿದರು.
‘ಮಹಾಭಾರತ, ರಾಮಾಯಣ ಸೇರಿದಂತೆ ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದ ವೇಷಗಾರರು, ಮನೆ ಮನೆಗೆ ಬರುತ್ತಿದ್ದರು. ಅವರು ಹೇಳುತ್ತಿದ್ದ ಕಥೆಗಳನ್ನು ಕೇಳಿದರೆ ಪೌರಾಣಿಕ ಗ್ರಂಥಗಳನ್ನು ಓದಿದಂತೆ ಆಗುತ್ತಿತ್ತು. ಈಗ ವೇಷಗಾರರೇ ಇಲ್ಲ. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಅಜ್ಜಿ–ಅಜ್ಜ ಕಥೆ ಹೇಳುತ್ತಿದ್ದರು. ಈಗ, ಕಥೆ ಹೇಳುವ ಅಜ್ಜ–ಅಜ್ಜಿಯರು ಕಡಿಮೆಯಾಗಿದ್ದಾರೆ. ಕಥೆ ಕೇಳುವ ಮಕ್ಕಳು ಕಡಿಮೆಯಾಗಿದ್ದಾರೆ’ ಎಂದರು.
‘ಕೃಷಿಗೆ ಬಳಸುತ್ತಿದ್ದ ಚಕ್ಕಡಿ, ಎತ್ತುಗಳು ಸೇರಿ ಗ್ರಾಮೀಣ ಬದುಕಿನ ಸಲಕರಣೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಅವುಗಳ ಚಿತ್ರಗಳಲ್ಲು ಕ್ಯಾಲೆಂಡರ್ ಹಾಗೂ ಪುಸ್ತಕದಲ್ಲಿ ನೋಡುವ ಸ್ಥಿತಿಗೆ ಬಂದಿದ್ದೇವೆ. ಈಗಿನ ಮಕ್ಕಳಿಗೆ, ಸಂಪ್ರದಾಯಿಕ ಕಲೆಗಳನ್ನು ಕಲಿಸಬೇಕಿದೆ. ಆ ಮೂಲಕ ಸಂಪ್ರದಾಯಿಕ ಕಲೆಗಳನ್ನು ಉಳಿಸಬೇಕಿದೆ’ ಎಂದು ತಿಳಿಸಿದರು.
‘ಸಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರವೂ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಕಲಾ ಉತ್ಸವ, ಪ್ರತಿಭೋತ್ಸವ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕು. ಅಧಿಕಾರಿಗಳು ಸಹ ಕಾಟಾಚಾರಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಬಿಡಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಬೇಕು’ ಎಂದು ಹೇಳಿದರು.
ನಗರಸಭೆಯ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಕಾರ್ಯಕ್ರಮದಲ್ಲಿದ್ದರು.
ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಸುಗಮ ಸಂಗೀತ, ಜನಪದ ಗೀತೆ, ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.