ಹಾವೇರಿ ವಿಶ್ವವಿದ್ಯಾಲಯದಿಂದ ಆರಂಭಿಸಲಾಗಿರುವ ಎಂ.ಕಾಂ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಹಾವೇರಿ: ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ನೂತನವಾಗಿ ಶುರುವಾಗಿರುವ ಹಾವೇರಿ ವಿಶ್ವವಿದ್ಯಾಲಯ, ಉದ್ಯೋಗ ಹಾಗೂ ಇತರೆ ಕಾರಣಗಳಿಂದ ಉನ್ನತ ಶಿಕ್ಷಣದಿಂದ ದೂರವುಳಿದಿದ್ದ ವಿದ್ಯಾರ್ಥಿಗಳ ಕನಸು ನನಸಾಗಿಸಲು ಸಂಜೆ ಕಾಲೇಜು ಆರಂಭಿಸಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಸೌಲಭ್ಯ ಒದಗಿಸುವ ಉದ್ದೇಶದಿಂದ 2022ರಲ್ಲಿ ನೂತನ ವಿಶ್ವವಿದ್ಯಾಲಯ ಆರಂಭವಾಗಿದೆ. ಮೊದಲ ದಿನದಿಂದಲೂ ಸಾಕಷ್ಟು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯ, ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಜಿಲ್ಲೆಯಾದ್ಯಂತ 44 ಕಾಲೇಜುಗಳಿದ್ದು, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 16,201 ವಿದ್ಯಾರ್ಥಿಗಳಿದ್ದಾರೆ. ಕೆರಿಮತ್ತಿಹಳ್ಳಿಯಲ್ಲಿರುವ ಮುಖ್ಯ ಕ್ಯಾಂಪಸ್‌ನಲ್ಲಿ 733 ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
‘ನಿರಂತರವಾಗಿ ಕಲಿಕೆ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ವಿಶ್ವವಿದ್ಯಾಲಯದಿಂದ ಉಪಯೋಗವಾಗುತ್ತಿದೆ. ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುವ ಹಲವರು, ಶಿಕ್ಷಣವನ್ನು ಅರ್ಧಕ್ಕೆ ಮೊಟಕೊಗೊಳಿಸಿ ನಾನಾ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ಮದುವೆಯಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಇವರೆಲ್ಲರೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ, ದೂರ ಶಿಕ್ಷಣದ ವ್ಯವಸ್ಥೆ ಆರಂಭಿಸಿ’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
‘ದೂರ ಶಿಕ್ಷಣ ವ್ಯವಸ್ಥೆ ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದ ವಿಶ್ವವಿದ್ಯಾಲಯ, ಉದ್ಯೋಗಸ್ಥರು ಹಾಗೂ ಗೃಹಿಣಿಯರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ‘ಎಂ. ಕಾಮ್’ ಕೋರ್ಸ್‌ಗಾಗಿ ಸಂಜೆ ಕಾಲೇಜು ಆರಂಭಿಸಿದೆ.
‘ಪದವಿ ಮುಗಿಸಿರುವ ಹಲವು ವಿದ್ಯಾರ್ಥಿಗಳು, ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಡ್ತಿ ಹಾಗೂ ಇತರೆ ಸೌಲಭ್ಯಕ್ಕಾಗಿ ಎಂ.ಕಾಮ್ ಶಿಕ್ಷಣದ ಅಗತ್ಯವಿರುವುದು ಗಮನಕ್ಕೆ ಬಂದಿತ್ತು. ಇದೇ ಕಾರಣಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಂ.ಕಾಮ್ ಸಂಜೆ ಕಾಲೇಜು ಶುರು ಮಾಡಲಾಗಿದೆ’ ಎಂದು ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಜೆ ಕಾಲೇಜು ಆಗಿರುವುದರಿಂದ ವಿದ್ಯಾರ್ಥಿಗಳು, ಕೆರಿಮತ್ತಿಹಳ್ಳಿಯಲ್ಲಿರುವ ಕ್ಯಾಂಪಸ್‌ಗೆ ಬಂದು ಹೋಗಲು ತೊಂದರೆ ಆಗುತ್ತದೆ. ಹೀಗಾಗಿ, ಹಾವೇರಿ ನಗರದಲ್ಲಿರುವ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಕೊಠಡಿಯಲ್ಲಿಯೇ ತರಗತಿಗಳನ್ನು ಆರಂಭಿಸಲಾಗಿದೆ’ ಎಂದರು.
33 ವಿದ್ಯಾರ್ಥಿಗಳಿಗೆ ಪ್ರವೇಶಾತಿ: ‘ಎಂ.ಕಾಮ್ ಸಂಜೆ ಕಾಲೇಜು ಆರಂಭವಾಗುತ್ತಿದ್ದಂತೆ, 33 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಉದ್ಯೋಗಸ್ಥರು, ಗೃಹಿಣಿಯರು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವವರು ಇವರಾಗಿದ್ದಾರೆ. ಇವರಲ್ಲಿ 28 ವಿದ್ಯಾರ್ಥಿನಿಯರು ಇರುವುದು ವಿಶೇಷ’ ಎಂದು ಕುಲಸಚಿವ ಎಸ್.ಟಿ. ಬಾಗಲಕೋಟೆ ಹೇಳಿದರು.
‘2024ರ ಅಕ್ಟೋಬರ್‌ನಿಂದಲೇ ತರಗತಿಗಳು ಆರಂಭವಾಗಿವೆ. ಸಂಜೆ 5.30 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ನಿವೃತ್ತ ಪ್ರಾಧ್ಯಾಪಕ ಆರ್.ಎಂ. ತೆಂಬದ ಅವರನ್ನು ಸಂಯೋಜಕರನ್ನಾಗಿ ನಿಯೋಜಿಸಲಾಗಿದೆ. ಅವರ ಜೊತೆಯಲ್ಲಿ ಇಬ್ಬರು ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ’ ಎಂದು ತಿಳಿಸಿದರು.
‘ವಿಶ್ವವಿದ್ಯಾಲಯದಲ್ಲಿ ಹಗಲಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕಲಿಕೆಗೂ, ಸಂಜೆ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರಿಗೂ ಒಂದೇ ಪಠ್ಯಕ್ರಮವಿದೆ. ಪರೀಕ್ಷೆಯೂ ಏಕಕಾಲದಲ್ಲಿ ನಡೆಯಲಿದೆ. ಹೀಗಾಗಿ, ಸಂಜೆ ಕಾಲೇಜು ಎಂಬ ತಾರತಮ್ಯ ಇರುವುದಿಲ್ಲ. ಇದೇ ಕಾರಣಕ್ಕೆ ಸಂಜೆ ಕಾಲೇಜಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಹೇಳಿದರು.
ಪ್ರಾಯೋಗಿಕವಾಗಿ ಮೊದಲ ಬಾರಿ ಸಂಜೆ ಕಾಲೇಜು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೋರ್ಸ್‌ಗಳಿಗಾಗಿ ಸಂಜೆ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗುವುದುಪ್ರೊ. ಸುರೇಶ ಜಂಗಮಶೆಟ್ಟಿ ಕುಲಪತಿ ಹಾವೇರಿ ವಿಶ್ವವಿದ್ಯಾಲಯ
ಸಂಜೆ ಕಾಲೇಜಿಗೆ ಉತ್ತಮ ಸ್ಪಂದನೆಯಿದ್ದು ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಉದ್ಯೋಗಿಗಳು ಗೃಹಿಣಿಯರಿಗೆ ಈ ಕೋರ್ಸ್ ಅನುಕೂಲವಾಗಿದೆಆರ್.ಎಂ. ತೆಂಬದ ಸಂಯೋಜಕ ಎಂ.ಕಾಮ್ ಸಂಜೆ ಕಾಲೇಜು
ಹಗಲಿನಲ್ಲಿ ಕಾಲೇಜಿಗೆ ಹೋಗಿ ಕಲಿಯಲು ಸಾಧ್ಯವಿರಲಿಲ್ಲ. ಸಂಜೆ ಕಾಲೇಜು ಆರಂಭಿಸಿದ್ದಕ್ಕೆ ಖುಷಿಯಾಯಿತು. ಸಂಜೆ ನನ್ನ ಬಿಡುವಿನ ಅವಧಿಯಲ್ಲಿ ಕಾಲೇಜಿಗೆ ಬಂದು ಹೋಗುತ್ತಿದ್ದೇನೆಭಾವನಾ ಪಾವಲಿ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.