ADVERTISEMENT

ಹಾವೇರಿ | ಚಾಕು ಹಿಡಿದು ಬಾಗಿಲು ಬಡಿದ ಮಹಿಳೆ: ಭಯಗೊಂಡ ನಿವಾಸಿಗಳು

ಹಾವೇರಿಯ ಜಯದೇವನಗರದಲ್ಲಿ ಮಧ್ಯರಾತ್ರಿ ಘಟನೆ, ಪೊಲೀಸರ ಗಸ್ತು ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:04 IST
Last Updated 7 ಅಕ್ಟೋಬರ್ 2025, 2:04 IST
<div class="paragraphs"><p>ಚಾಕು</p></div>

ಚಾಕು

   

(ಸಾಂದರ್ಭಿಕ ಚಿತ್ರ)

ಹಾವೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಕಳ್ಳರು ಮಧ್ಯರಾತ್ರಿಯಲ್ಲಿ ಮನೆ ಬಾಗಿಲು ಬಡಿಯುತ್ತಿರುವ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಜಿಲ್ಲಾ ಕೇಂದ್ರ ಹಾವೇರಿಯ ಜಯದೇವನಗರದಲ್ಲಿ ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮನೆಯೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರು ಬಾಗಿಲು ಬಡಿದಿದ್ದು, ಈ ಘಟನೆಯಿಂದ ಮನೆ ಮಾಲೀಕರು ಹಾಗೂ ಅಕ್ಕ–ಪಕ್ಕದ ನಿವಾಸಿಗಳು ಭಯಗೊಂಡಿದ್ದಾರೆ.

ಹೊರ ಜಿಲ್ಲೆ ಹಾಗೂ ರಾಜ್ಯ ರಾಜ್ಯಗಳಿಂದ ಜಿಲ್ಲೆಗೆ ನಾನಾ ಕೆಲಸಕ್ಕಾಗಿ ಜನರು ಬಂದು ಹೋಗುತ್ತಿದ್ದಾರೆ. ಇದರ ನಡುವೆಯೇ ಇಂಥ ಘಟನೆ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

‘ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಿಚಿತರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ವ್ಯಾಪಾರಿಗಳ ಸೋಗಿನಲ್ಲಿ ಸಂಚರಿಸುತ್ತಿದ್ದಾರೆ. ಇಂಥವರೇ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಲು ಹೊಂಚು ಹಾಕುತ್ತಿರುವ ಅನುಮಾನವಿದೆ’ ಎಂದು ಸ್ಥಳೀಯರು ದೂರಿದರು.

‘ರಾತ್ರಿ ಹೊತ್ತಿನಲ್ಲಿಯೇ ಕೆಲವರು, ಮನೆ ಬಾಗಿಲು ಬಡಿಯುತ್ತಿದ್ದಾರೆ. ಇಂಥವರನ್ನು ಪೊಲೀಸರು ಪತ್ತೆ ಮಾಡಿ, ಜನರ ಆತಂಕ ದೂರ ಮಾಡಬೇಕು. ರಾತ್ರಿ ಹೊತ್ತಿನಲ್ಲಿ ಗಸ್ತು ಹೆಚ್ಚಳ ಮಾಡಬೇಕು’ ಎಂದು ಜನರು ಆಗ್ರಹಿಸಿದರು.

ಚಾಕು ಸಮೇತ ಬಂದಿದ್ದ ಮಹಿಳೆ: ‘ಜಯದೇವನಗರದ ನಿವಾಸಿ ಜಗದೀಶ ಅವರು ಭಾನುವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದರು. ತಡರಾತ್ರಿ 2 ಗಂಟೆ ಸುಮಾರಿಗೆ ಅವರ ಮನೆ ಬಾಗಿಲು ಬಡಿದ ಶಬ್ದ ಕೇಳಿಸಿತ್ತು. ಯಾರಾದರೂ ಪರಿಚಯಸ್ಥರು ಅಥವಾ ಅಕ್ಕ–ಪಕ್ಕದ ನಿವಾಸಿಗಳು ತುರ್ತು ಸಹಾಯಕ್ಕಾಗಿ ಬಾಗಿಲು ಬಡಿದಿರಬಹುದೆಂದು ಬಾಗಿಲು ತೆರೆದಿದ್ದರು’ ಎಂದು ನಿವಾಸಿಯೊಬ್ಬರು ಹೇಳಿದರು.

‘ಬಾಗಿಲು ಎದುರು ನಿಂತುಕೊಂಡಿದ್ದ ಮಹಿಳೆಯೊಬ್ಬರು, ‘ನಾನು ಅನಾಥೆ. ದಾರಿ ತಪ್ಪಿ ಬಂದಿದ್ದೇನೆ. ಬಸ್‌ ನಿಲ್ದಾಣಕ್ಕೆ ಹೋಗಬೇಕು. ದಾರಿ ತೋರಿಸಿ’ ಎಂದು ಹೇಳಿದ್ದರು. ಅದನ್ನು ನಂಬಿದ್ದ ಜಗದೀಶ್, ಮಾತು ಮುಂದುವರಿಸಿದ್ದರು. ಸಹಾಯ ಮಾಡುವುದಾಗಿ ಹೇಳಿದ್ದರು. ಇದರ ನಡುವೆಯೇ ಮಹಿಳೆಯು ಸೀರೆಯಲ್ಲಿ ಮುಚ್ಚಿಟ್ಟುಕೊಂಡಿದ್ದ ಚಾಕುವನ್ನು ಜಗದೀಶ್ ಗಮನಿಸಿದ್ದರು. ಅದರಿಂದ ಹೆದರಿ ದಿಢೀರ್ ಬಾಗಿಲು ಹಾಕಿಕೊಂಡು ಒಳಗಿನಿಂದ ಲಾಕ್‌ ಮಾಡಿಕೊಂಡಿದ್ದರು’ ಎಂದು ತಿಳಿಸಿದರು.

‘ಇದಾದ ಕೆಲ ಕ್ಷಣದಲ್ಲಿಯೇ ನಾಲ್ವರು ಮನೆ ಬಳಿ ಬಂದು, ಮಹಿಳೆ ಹಿಂದೆ ನಿಂತುಕೊಂಡಿದ್ದರು. ಎಲ್ಲರೂ ಸೇರಿ ಬಾಗಿಲು ಬಡಿಯಲಾರಂಭಿಸಿದ್ದರು. ಭಯಗೊಂಡ ಜಗದೀಶ ಬಾಗಿಲು ತೆರೆದಿರಲಿಲ್ಲ. ಸಹಾಯಕ್ಕಾಗಿ ಅಕ್ಕ–ಪಕ್ಕದವರನ್ನು ಕೂಗಿ ಕರೆದಿದ್ದರು. ಅಷ್ಟರಲ್ಲೇ ಕಳ್ಳರು, ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ನಿವಾಸಿ ಹೇಳಿದರು.

‘ಅಕ್ಕ– ಪಕ್ಕದ ನಿವಾಸಿಗಳು ಎಲ್ಲರೂ ಸೇರಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗಾಗಿ ಹುಡುಕಾಟ ನಡೆಸಿದರು. ಆದರೆ, ಯಾವುದೇ ಸುಳಿವು ಸಿಗಲಿಲ್ಲ’ ಎಂದರು.

ರಾಷ್ಟ್ರೀಯ ಹೆದ್ದಾರಿ, ಮುಖ್ಯರಸ್ತೆ ಬಳಿ ಆತಂಕ: ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಮಾರ್ಗ ಹಾಗೂ ಮುಖ್ಯರಸ್ತೆ ಇರುವ ಅಕ್ಕ–ಪಕ್ಕದ ಮನೆಗಳಲ್ಲಿ ಆಗಾಗ ಕಳ್ಳರ ಕಾಟವಿದೆ. ಈ ಪ್ರದೇಶದಲ್ಲಿ ವಾಸವಿರುವ ಜನರಲ್ಲಿ ಆತಂಕ ಮನೆ ಮಾಡಿದೆ.

ರಾಣೆಬೆನ್ನೂರು, ಬ್ಯಾಡಗಿ, ಶಿಗ್ಗಾವಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿಯೂ ಕಳ್ಳರು ಬಾಗಿಲು ಬಡಿಯುವ ಘಟನೆಗಳು ನಡೆದಿರುವ ಮಾಹಿತಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.