
ಸಾವು (ಪ್ರಾತಿನಿಧಿಕ ಚಿತ್ರ)
ಹಾವೇರಿ: ತಾಲ್ಲೂಕಿನ ಯತ್ತಿನಹಳ್ಳಿಯ ಹೊಲವೊಂದರಲ್ಲಿ ಬಿರುಗಾಳಿ ಬೀಸಿದ್ದ ಸಂದರ್ಭದಲ್ಲಿ ಕುರಿಗಳನ್ನು ರಕ್ಷಿಸಲು ಓಡುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡು ಕುರಿಗಾಹಿ ಲೋಹಿತ ಪರಶುರಾಮ (22) ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಯತ್ತಿನಹಳ್ಳಿ ನಿವಾಸಿ ಲೋಹಿತ ಅವರು ಫೆ. 19ರಂದು ಕುರಿ ಕಾಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.
‘ಹೊಲದಲ್ಲಿ ಬಿರುಗಾಳಿ ಬೀಸುತ್ತಿದ್ದಂತೆ, ಗುಂಪಿನಿಂದ ಚದುರಿ ಕುರಿಗಳು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದವು. ಕುರಿಗಳನ್ನು ರಕ್ಷಿಸಿ ಒಂದು ಕಡೆ ಸೇರಿಸುವುದಕ್ಕಾಗಿ ಲೋಹಿತ್, ಕುರಿಗಳ ಹಿಂದೆ ಓಡಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಂದ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.