ADVERTISEMENT

ಹಾವೇರಿ: ಡಾಬಾದಲ್ಲಿ ಯುವಕನ ಮೇಲೆ ಕಾನ್‌ಸ್ಟೆಬಲ್‌ನಿಂದ ಬಿಯರ್ ಬಾಟಲಿಯಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 10:20 IST
Last Updated 14 ಜನವರಿ 2025, 10:20 IST
ಬಿಯರ್ (ಪ್ರಾತಿನಿಧಿಕ ಚಿತ್ರ)
ಬಿಯರ್ (ಪ್ರಾತಿನಿಧಿಕ ಚಿತ್ರ)   

ಹಾವೇರಿ: ಹಾವೇರಿ ತಾಲ್ಲೂಕಿನ ಹೊಸರಿತ್ತಿ ಬಳಿಯ ಢಾಬಾವೊಂದರಲ್ಲಿ ಗಲಾಟೆ ನಡೆದಿದ್ದು, ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದರಿಂದ ಯಲ್ಲಪ್ಪ ಓಲೇಕಾರ ಎಂಬುವವರು ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದಿರುವ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಯಲ್ಲಪ್ಪ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುತ್ತಲ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

‘ಗುತ್ತಲ ಠಾಣೆಯ ಕಾನ್‌ಸ್ಟೆಬಲ್ ದೇವರಾಜ ತೋಟಗೇರ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ದೂರು ನೀಡದಂತೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಗಾಯಾಳು ಯಲ್ಲಪ್ಪ ಆರೋಪಿಸುತ್ತಿದ್ದಾರೆ.

ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಯಲ್ಲಪ್ಪ, ‘ಸ್ನೇಹಿತರ ಜೊತೆ ಭಾನುವಾರ ರಾತ್ರಿ ಢಾಬಾಕ್ಕೆ ಊಟಕ್ಕೆ ಹೋಗಿದ್ದೆ. ಸ್ನೇಹಿತರೆಲ್ಲರೂ ಮಾತನಾಡುತ್ತಿದ್ದೇವೆ. ಇದೇ ವೇಳೆ ಢಾಬಾಗೆ ಬಂದಿದ್ದ ಕಾನ್‌ಸ್ಟೆಬಲ್ ದೇವರಾಜ, ‘ನಿಧಾನವಾಗಿ ಮಾತನಾಡಿ’ ಎಂದು ತಾಕೀತು ಮಾಡಿದ್ದರು. ಢಾಬಾದಲ್ಲಿಯೇ ಮದ್ಯ ಕುಡಿಯುತ್ತಿದ್ದ ದೇವರಾಜ್, ಪದೇ ಪದೇ ಜಗಳ ಮಾಡಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ, ಬಿಯರ್ ಬಾಟಲಿಯಿಂದ ನನ್ನ ತಲೆಗೆ ಹೊಡೆದರು. 2023ರಲ್ಲಿ ನಡೆದಿದ್ದ ಲಾಕಪ್‌ಡೆತ್ ವಿಚಾರ ಪ್ರಸ್ತಾಪಿಸಿದ್ದ ಕಾನ್‌ಸ್ಟೆಬಲ್, ‘ಲಾಕಪ್‌ ಡೆತ್ ಪ್ರಕರಣವನ್ನೇ ದಕ್ಕಿಸಿಕೊಂಡಿದ್ದೇವೆ. ನೀವು ಯಾವ ಲೆಕ್ಕ’ ಎಂದು ಬೆದರಿಸಿದ್ದರು. ಹಲ್ಲೆಯಿಂದಾಗಿ ನನ್ನ ತಲೆಯಿಂದ ರಕ್ತ ಸೋರಲಾರಂಭಿಸಿತ್ತು’ ಎಂದು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ಪಿ ಅಂಶುಕುಮಾರ್, ‘ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ದೂರುದಾರರು ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.