ರಾಣೆಬೆನ್ನೂರು: ನಗರದಲ್ಲಿ ಮಂಗಳವಾರ ತಡರಾತ್ರಿ ಸುರಿದ ಗುಡುಗು ಸಿಡಿಲು ಮಿಶ್ರಿತ ಭಾರಿ ಮಳೆಗೆ ಶಂಕರ ಚಿತ್ರಮಂದಿರದ ಹಿಂಭಾಗದ ದೇವರಗುಡ್ಡ ಮುಖ್ಯರಸ್ತೆಯ ನೆಹರು ಮಾರುಕಟ್ಟೆಯ ಜಂಬಗಿ ವಾಣಿಜ್ಯ ಮಳಿಗೆಗಳಲ್ಲಿನ 9 ಅಂಗಡಿಗಳಿಗೆ ಹಾಗೂ ನೆಹರು ಮಾರುಕಟ್ಟೆ ವರ್ತಕರ ಸಂಘದ ಬದಿಗೆ ಇರುವ ಹಳೆಯ ಗೋದಾಮುಗಳ ಒಳಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಬುಧವಾರ ಬೆಳಿಗ್ಗೆ ವ್ಯಾಪಾರಸ್ಥರು ಅಂಗಡಿಗೆ ಹೋಗಿ ಅಂಗಡಿ ಶೆಟರ್ಸ್ ತೆಗೆದು ನೋಡಿದಾಗ ಅಂಗಡಿಗಳಲ್ಲಿ ನೀರು ನಿಂತಿದ್ದು ಕಂಡು ಬಂದಿತು. ವ್ಯಾಪಾರಸ್ಥರು ನೀರೆತ್ತುವ ಪಂಪುಗಳನ್ನು ತಂದು ನೀರು ಹೊರ ಹಾಕಿದ್ದಾರೆ. ಇನ್ನು ಕೆಲವರು ಬಕೆಟ್‌ನಿಂದ ನೀರನ್ನು ಹೊರ ಚಲ್ಲಿದ್ದಾರೆ. ನೀರಿಗೆ ತೊಯ್ದ ಕಾಳು ಕಡಿ ಚೀಲಗಳನ್ನು ಬೇರ್ಪಡಿಸಿದ್ದಾರೆ. ಕಾಲಿ ಚೀಲದ ಬಂಡಲ್‌ನ ಸುರಳಿಗಳನ್ನು ಬಿಚ್ಚಿ ರಸ್ತೆಯಲ್ಲಿ ಒಣಗಿಸಲು ಹಾಕಿದ್ದು ಕಂಡು ಬಂದಿತು. ಅಂಗಡಿಗೆ ಸಂಬಂಧಿಸಿದ ಪರವಾನಿಗೆ ಪತ್ರ, ವಿವಿಧ ದಾಖಲೆ, ಖಾತೆ, ಕಿರ್ದಿಗಳು ನೀರಿನಲ್ಲಿ ತೊಯ್ದು ಹಾನಿಗೊಂಡಿವೆ ಎಂದು ವರ್ತಕರು ತಮ್ಮ ಅಳಲು ತೋಡಿಕೊಂಡರು.
ಮಳೆ ರಭಸಕ್ಕೆ ಚರಂಡಿ ತುಂಬಿ ಹರಿದು ಚರಂಡಿಯಲ್ಲಿನ ಕೊಳಕು ನೀರು ರಸ್ತೆ ಮೇಲೆ ಹರಿದಿದೆ. ರಸ್ತೆ ತುಂಬ ಪ್ಲಾಸ್ಟಿಕ್ ಚೀಲ, ಕುಡಿದ ನೀರಿನ ಖಾಲಿ ಬಾಟಲ್‌ಗಳು, ಕೊಳೆತ ಬಾಳೆ ಗೊನೆ ದಿಂಡು ರಸ್ತೆ ಮೇಲೆ ನಿಂತು ಕೆಟ್ಟ ವಾಸನೆ ಬೀರುವಂತಾಗಿತ್ತು. ಕೂಡಲೇ ನಗರಸಭೆ ಪೌರಕಾರ್ಮಿಕರು ಘಟನಾ ಸ್ಥಳಕ್ಕೆ ದಾವಿಸಿ ಟ್ರ್ಯಾಕ್ಟರ್‌ನಲ್ಲಿ ತುಂಬಿ ಹೊರ ಹಾಕಿದರು.
ಚೇತನಾ ಟ್ರೇಡಿಂಗ್ ಕಂಪನಿ, ನಂದಿನಿ ಟ್ರೇಡ್ಸ್, ಶಿವಬಸವ ಟ್ರೇಡರ್ಸ್, ಎಸ್.ಬಿ.ಚೌಡಪ್ಪಳವರ, ಗಡ್ಡದಗೂಳಿ, ಗುರುನಾಥ ಟ್ರೇಡರ್ಸ್, ಗೊಬ್ಬರ ವ್ಯಾಪಾರದ ಅಂಗಡಿ ಹಾಗೂ ನೆಹರು ಮಾರುಕಟ್ಟೆ ವರ್ತಕರ ಸಂಘದ ಬದಿಗೆ ಇರುವ ಇಕ್ಬಾಲ್ ವಾಜಿಬಾಯಿ, ವಜೀರ್ ಅಹ್ಮದ್, ಬೀರಪ್ಪ ಅಣ್ಣೇರ ಅವರ ಅಂಗಡಿಗಳಲ್ಲಿ ನೀರು ತುಂಬಿದ್ದಕ್ಕೆ ಎಲ್ಲ ಮಾಲನ್ನು ಬೇರೆ ಕಡೆಗೆ ಸಾಗಿಸಿದರು.
ಅಂಗಡಿಗಳಲ್ಲಿದ್ದ ಮೆಕ್ಕೆಜೋಳ, ಅಲಸಂದಿ, ತೊಗರಿ, ಹುರುಳಿ, ಬಿಳಿಜೋಳ, ಗುರೆಳ್ಳು, ಅಕ್ಕಿ ಪ್ಯಾಕೆಟ್, ಎಳ್ಳು, ಖಾಲಿ ಚೀಲ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಿಗೆ ನೀರಿನಿಂದ ₹ 8 ರಿಂದ 10 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಮಳೆಗೆ ನೆಂದ ಕಾಳು ಕಡಿಗಳು ತೇವಾಂಶ ಹೆಚ್ಚಾಗಿ ಬುಳುಸು ಬರುತ್ತವೆ ಎಂದು ನೆಹರು ಮಾರುಕಟ್ಟೆ ಮಾಜಿ ಅಧ್ಯಕ್ಷ ಅಶೋಕ ಗಂಗನಗೌಡ್ರ ತಿಳಿಸಿದರು.
ನೆಹರು ಮಾರುಕಟ್ಟೆ ಅಧ್ಯಕ್ಷ ಬಿ.ಎಸ್.ಪಟ್ಟಣಶೆಟ್ಟಿ ಅವರು ಮಾತನಾಡಿ, ನೆಹರು ಮಾರುಕಟ್ಟೆಯಲ್ಲಿ ಎಲ್ಲ ರಸ್ತೆಗಳು ಎತ್ತರವಾಗಿದ್ದು, ಅಂಗಡಿಗಳು ಬಹಳ ಕೆಳಗಡೆ ಇದ್ದುದರಿಂದ ಮಳೆ ನೀರಿನ ರಭಸಕ್ಕೆ ಅಂಗಡಿಗಳಿಗೆ ನುಗ್ಗುತ್ತದೆ. ದೊಡ್ಡ ದೊಡ್ಡ ಮಳೆ ಬಂದಾಗ ಪ್ರತಿಸಲ ಜಂಬಿಗಿ ಕಾಂಪ್ಲೆಕ್ಸ್ ಅಂಗಡಿ ಒಳಗಡೆ ನೀರು ನುಗ್ಗಿ ಅಪಾರ ಹಾನಿ ಅನುಭವಿಸುವಂತಾಗಿದೆ ಎಂದರು.
‘ನೆಹರು ವರ್ತಕರ ಸಂಘದ ಕಲ್ಯಾಣ ಮಂಟಪದ ಸಮೀಪ ಇರುವ ಇಲ್ಲಿನ ಅಂಗಡಿಗಳು ಮತ್ತು ಗೋದಾಮುಗಳು ಹಳೆಯದಾಗಿದ್ದು, ಗೋಡೆಗಳು ತೇವಾಂಶದಿಂದ ಕೂಡಿವೆ. ಕೆಲ ಅಂಗಡಿಗಳು ಇಂದು ನಾಳೆ ಬೀಳುವ ಹಂತ ತಲುಪಿವೆ. ನಾವೇ ಸ್ವಂತ ಖರ್ಚಿನಿಂದ ಎರಡು ಟ್ರ್ಯಾಕ್ಟರ್ ಮಣ್ಣು ಹಾಕಿಸಿಕೊಂಡು ಎತ್ತರ ಮಾಡಿಕೊಂಡಿದ್ದೇವೆ’ ಎಂದು ಖಾಲಿ ಚೀಲದ ವ್ಯಾಪಾರಸ್ಥ ಇಕ್ಬಾಲ್ ಬಾಜಿಬಾಯ್ ತಿಳಿಸಿದರು.
ಸುತ್ತಮುತ್ತ ಅಂಗಡಿಯವರು ಹಗಲು ಹೊತ್ತಿನಲ್ಲಿಯೇ ಕಸ, ಪ್ಲಾಸ್ಟಿಕ್, ಕೊಳೆತ ತರಕಾರಿ ತಂದು ಇಲ್ಲಿಯೇ ಬೀಸಾಕುತ್ತಾರೆ. ಇದರಿಂದ ಚರಂಡಿ ಕಟ್ಟಿಕೊಳ್ಳುತ್ತವೆ. ಚರಂಡಿ ಪ್ರತಿ ದಿನ ಸ್ವಚ್ಚಗೊಳಿಸುವುದಿಲ್ಲ ಎಂದು ಪುಪ್‌ಪಾತ್ ವ್ಯಾಪಾರಸ್ಥರು ದೂರಿದರು.
ನಗರಸಭೆ ಪೌರಾಯುಕ್ತ ಎಫ್.ವೈ.ಇಂಗಳಗಿ, ಸಹಾಯಕ ಎಂಜಿನಿಯರ್ ಎಂ.ಎಸ್.ಗುಡಿಸಲಮನಿ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹಾಗೂ ವರ್ತಕರ ಸಂಘದ ಸದಸ್ಯರು ಇದ್ದರು.
ತುಂಬಿದ ಯಕಲಾಸಪುರ ಕೆರೆ
ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಂಗವಾರ ತಡ ರಾತ್ರಿ ಮತ್ತು ಬುಧವಾರ ನಿರಂತರವಾಗಿ ಮಳೆ ಸುರಿಯಿತು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೊಂಡ ಬಗ್ಗೆ ರೈತರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕಿ ಶಾಂತಮಣಿ ತಿಳಿಸಿದರು.
ಮಂಗಳವಾರ ಸುರಿದ ಬಾರಿ ಮಳೆಗೆ ತಾಲ್ಲೂಕಿನ ಯಕಲಾಸಪುರ ಗ್ರಾಮದ ಕೆರೆಗೆ ನೀರು ಬಂದಿದೆ ಎಂದು ಗ್ರಾಮಸ್ಥ ಶಿವಕುಮಾರ ತಿಳಿಸಿದರು.
ಈಗಾಗಲೇ ಕಟಾವು ಮಾಡಿದ ಮೆಕ್ಕೆಜೋಳ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಾಡಪತ್ರಿಗಳಿಂದ ಮುಚ್ಚಿ ಕಾಫಿಟ್ಟುಕೊಂಡಿದ್ದು ಕಂಡು ಬಂದಿತು.
ಬ್ಯಾಡಗಿಯಲ್ಲಿ ರಭಸದ ಮಳೆ
ಬ್ಯಾಡಗಿ: ಪಟ್ಟಣದಲ್ಲಿ ಬುಧವಾರ ರಭಸದ ಮಳೆಯಾಗಿದ್ದು ಚರಂಡಿ ತುಂಬಿ ಹರಿದವು. ಸಂಜೆ 6 ಗಂಟೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿಯಿತು. ಚರಂಡಿಗಳಿಲ್ಲದೆ ಮುಖ್ಯರಸ್ತೆಯಲ್ಲಿ ಸಂಗ್ರಹವಾದ ಮಳೆ ನೀರು ಕೆರೆಯಂತೆ ಭಾಸವಾಯಿತು. ದಿನಸಿ ಕೊಳ್ಳಲು ತೆರಳಿದ್ದವರು ರಸ್ತೆ ದುಸ್ತಿತಿ ಕಂಡು ಹಿಡಿ ಶಾಪ ಹಾಕಿದರು. ಬೆಳಿಗ್ಗೆ ಕೂಡಾ 1 ಗಂಟೆಗೂ ಹೆಚ್ಚು ಹೊತ್ತು ಮಳೆಯಾಗಿದ್ದರಿಂದ ನವರಾತ್ರಿ ಪ್ರಯುಕ್ತ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲು ಮಹಿಳೆಯರು ತಡವಾಗಿ ತೆರಳುತ್ತಿರುವುದು ಕಂಡು ಬಂದಿತು. ಮೋಡ ಕವಿದ ವಾತಾವರಣ ದಿನವಿಡಿ ಮುಂದುವರೆದಿತ್ತು. ಸಂಜೆ ಒಮ್ಮೆಲೆ ಮಳೆ ಸುರಿಯಲು ಆರಂಭಿಸಿತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.