ತಡಸ (ದುಂಡಶಿ): ಕಳೆದ ಮೂರ್ನಾಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಗೆ ಶ್ಯಾಡಂಬಿ ಹಾಗೂ ಕುನ್ನೂರ ಗ್ರಾಮಗಳ ಮಧ್ಯ ಹರಿಯುವ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ಮೀನುಗಾರರು ಮೀನು ಹಿಡಿಯುತ್ತಿದ್ದಾರೆ.
ಕಳೆದ ವರ್ಷವೂ ನಿರಂತರ ಮಳೆಗೆ ಬೆಳೆ ಹಾಳಾಗಿದೆ. ಈ ವರ್ಷ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದ್ದರಿಂದ ಬೀಜವನ್ನು ಬಿತ್ತಲಾಗಿತ್ತು. ಈಗ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಹೊಲ ಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆ ಹಾಳಾಗುವ ಸ್ಥಿತಿಯಲ್ಲಿ ಇರುವುದು ರೈತರಲ್ಲಿ ಆತಂಕ ಮೂಡಿಸಿದೆ.
‘ನಿರಂತರ ಮಳೆಗೆ ಗೋವಿನ ಜೋಳ ಬೆಳೆಯು ಜವಳು ಹಿಡಿದಿದ್ದು, ಬಿತ್ತಿದ ಬೀಜ ಹಾಗೂ ಗೊಬ್ಬರ ಹಾಳಾಗಿದೆ. ಸರ್ಕಾರಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿಯವರೆಗೆ ಭೇಟಿ ನೀಡಿಲ್ಲ. ಇಲ್ತಿಯ ರೈತರ ಬೆಳೆ ಪ್ರತಿ ವರ್ಷ ಹಾನಿಗೊಳಗಾಗುತ್ದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ರೈತ ನಿಂಗಪ್ಪ ದೊಡ್ಡಮನಿ ಕಿಡಿ ಕಾರಿದರು.
ದುಂಡಶಿ ಹೋಬಳಿಯಲ್ಲಿ ಮುಂಗಾರು ಪೂರ್ವ 15 ದಿನಗಳ ಕಾಲ ಸುರಿದ ನಿರಂತರ ಮಳೆಗೆ ಮೆಣಸಿನ ಕಾಯಿ ಬೆಳೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಬಂದು ಜಮೀನು ನೋಡಿ ಹೋಗಿ ತಿಂಗಳು ಗತಿಸಿದರೂ ಪರಿಹಾರ ಬಂದಿಲ್ಪ. ನೆಪ ಮಾತ್ರಕ್ಕೆ ರೈತರ ಹೊಲಕ್ಕೆ ಭೇಟಿ ನೀಡಿದ್ದಾರೆ. ಮೆಣಸಿನ ಕಾಯಿ ಬೆಳೆಗೆ ಪರಿಹಾರ ನೀಡದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಪ್ರಕಾಶ, ಡಾಕಪ್ಪಾ, ನೀಲಪ್ಪ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಸುರಿದ ಮಳೆಗೆ ಬೆಳೆ ಜವಳ ಹಿಡಿದಿದ್ದು ಬಸಿ ಕಾಲುವೆ ವಿಧಾನ ಅನುಸರಿಸಬೇಕು. ಮಳೆ ಹೊಳವು ನೀಡಿದಾಗ 19:19:13: 0.1 ಸಿಂಪಡಿಸಬೇಕು. ರೈತರೆಲ್ಲ ಬೆಳೆ ವಿಮೆ ಕಂತು ತುಂಬಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಎಸ್.ಆರ್. ದಾವಣಗೆರೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.